ಹಾವು ಕಚ್ಚಿ ಇಬ್ಬರು ಅನ್ನದಾತರ ಸಾವು|ಕಲಬುರಗಿ ಜಿಲ್ಲೆಯಲ್ಲಿ ನಡೆದ ಘಟನೆ| ಈ ಸಂಬಂಧ ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲು|
ಚವಡಾಪುರ(ನ.02): ಅಫಜಲ್ಪುರ ತಾಲೂಕಿನ ಬಳೂರ್ಗಿ ಹಾಗೂ ಮಾತೋಳಿ ಗ್ರಾಮಗಳಲ್ಲಿ ರೈತರಿಬ್ಬರಿಗೆ ಹಾವು ಕಚ್ಚಿ ಮೃತ ಪಟ್ಟ ಘಟನೆ ಜರುಗಿದೆ.
ಮಾತೋಳಿ ಗ್ರಾಮದಲ್ಲಿ ರೈತ ಚಂದ್ರಶಾ ತಂದೆ ಶಿವಯೋಗಪ್ಪ ಪಾಸೋಡಿ (35) ಶನಿವಾರ ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಸಂಜೆ 5ರ ಸುಮಾರಿಗೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಂದು ರಾತ್ರಿ 11ಕ್ಕೆ ರೈತ ಚಂದ್ರಶಾ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಭೇಟಿ ನೀಡಿದ್ದಾರೆ. ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ/ಕಲಬುರಗಿ: ಸಂಭ್ರಮದ ಕನ್ನಡ ರಾಜ್ಯೋತ್ಸವದ ಫೋಟೋಸ್
ಇನ್ನೊಂದೆಡೆ ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ರೈತ ಖಾಜಪ್ಪ ಬಸಣ್ಣ ಪೋತಿ(40) ರವಿವಾರ ಬೆ.9.30ರ ಸುಮಾರಿಗೆ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಹಾವು ಕಚ್ಚಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ರೈತ ಉಸಿರು ಚೆಲ್ಲಿದ್ದಾನೆ. ಮೃತ ರೈತನ ಪತ್ನಿ ಸರಸ್ವತಿ ಅಫಜಲ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಭೇಟಿ ನೀಡಿದ್ದಾರೆ.