ಗಜೇಂದ್ರಗಡ: ಕಲುಷಿತ ನೀರು ಸೇವಿಸಿ ಇಬ್ಬರ ದುರ್ಮರಣ

By Kannadaprabha News  |  First Published Aug 7, 2021, 1:29 PM IST

*  ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ದಿಂಡೂರು ಗ್ರಾಮದಲ್ಲಿ ಆತಂಕ
*  ಹಲವರಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು
*  ಗ್ರಾಮದಲ್ಲಿ ವೈದ್ಯಕೀಯ ತಂಡ
 


ಗಜೇಂದ್ರಗಡ(ಆ.07): ಸಮೀಪದ ದಿಂಡೂರು ಗ್ರಾಮದಲ್ಲಿನ ‘ಜಲಜೀವನ್‌ ಮಿಷನ್‌ ಯೋಜನೆ’ ಕಾಮಗಾರಿಯ ಪೈಪ್‌ಲೈನ್‌ ಒಡೆದ ಪರಿಣಾಮ ಪೂರೈಕೆಯಾದ ಸೇವಿಸಿ ಗುರುವಾರ ಇಬ್ಬರು ಅಸುನೀಗಿದ್ದು, ಹಲವರು ವಾಂತಿ-ಭೇದಿಯಿಂದ ನರಳುತ್ತಿದ್ದಾರೆ.

ಗುರುವಾರ ಒಂದು ತಾಸಿನ ಅಂತರದಲ್ಲಿ ಸಹೋದರರಾದ ಕಳಪಟ್ಟ(70), ಶರಣಪ್ಪ (63) ಮೃತಪಟ್ಟಿದ್ದು, ಎರಡು ದಿನಗಳಿಂದ ಅವರು ವಾಂತಿ-ಭೇದಿಯಿಂದ ನರಳುತ್ತಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಕಾಮಗಾರಿ ನಡೆಸಲಾಗಿತ್ತು. ಮೂರ್ನಾಲ್ಕು ದಿನಗಳಿಂದ ಆಗೊಮ್ಮೆ, ಈಗೊಮ್ಮೆ ಸುರಿಯುತ್ತಿರುವ ಮಳೆಯ ನೀರು ಹಾಗೂ ಚರಂಡಿಯಲ್ಲಿ ಗಲೀಜು ನೀರು ಒಡೆದ ಪೈಪ್‌ಲೈನ್‌ ಮೂಲಕ ಮನೆಗಳಿಗೆ ಸರಬರಾಜು ಆಗಿದೆ. ಆ ನೀರು ಸೇವಿಸಿದ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ.

Latest Videos

undefined

ಗ್ರಾಮದಲ್ಲಿ ವೈದ್ಯಕೀಯ ತಂಡ:

ವಿಷಯ ತಿಳಿದು ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಜಗದೀಶ ನುಚ್ಚಿನ ಗ್ರಾಮಕ್ಕೆ ಆಗಮಿಸಿ, ಪೈಪ್‌ಲೈನ್‌ ಒಡೆದಿದ್ದನ್ನು ಪರಿಶೀಲಿಸಿದರು. ಗ್ರಾಮದಲ್ಲಿ ಎರಡು ಜಲ ಸಂಗ್ರಹಗಾರಗಳ ಸ್ವಚ್ಛತೆ ಹಾಗೂ ನೀರು ಪೂರೈಕೆಯ ಬಗ್ಗೆ ಮಾಹಿತಿ ಪಡೆದರು.

ರೋಣ: ಎಕ್ಸೆಲ್‌ ಕಟ್ಟಾಗಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್‌, ತಪ್ಪಿದ ಭಾರೀ ದುರಂತ

ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಪ್ರತಿ ತಿಂಗೊಳಿಗೊಮ್ಮೆ ಟ್ಯಾಂಕ್‌ ಸ್ವಚ್ಛಗೊಳಿಸಲಾಗುತ್ತಿದೆ. ಘಟನೆ ಬಳಿಕ ಟ್ಯಾಂಕರ್‌ ಮೂಲಕ ಗ್ರಾಮದಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಪೈಪ್‌ಲೈನ್‌ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಮೃತಪಟ್ಟ ಕಳಕಪ್ಪ ಹಾಗೂ ಶರಣಪ್ಪ ಮೇಟಿ ಸಹೋದರರು ಚಿಕಿತ್ಸೆ ಪಡೆಯುತ್ತಿರುವ ಕುರಿತೂ ಸಹ ಮಾಹಿತಿ ಪಡೆದರು. ಒಬ್ಬರು ಡಯಾಲಿಸಿಸ್‌ಗೆ ಒಳಪಡುತ್ತಿದ್ದರು, ಇನ್ನೊಬ್ಬರು ರೀನಲ್‌ ಫೆಲ್ಯುವರ್‌ (ಪಿಟ್ಸ್‌) ಆಗಿದ್ದರಿಂದ ಅಸು ನೀಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆರೋಗ್ಯ ಕೇಂದ್ರದ ಅಧಿಕಾರಿಗಳ ತಂಡ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಮೊಬೈಲ್‌ ಕ್ಲಿನಿಕ್‌ ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಪಿಡಿಒ ತರಾಟೆಗೆ:

ದಿಂಡೂರು ಗ್ರಾಮಕ್ಕೆ ಭೇಟಿ ನೀಡಿದ ಪಿಡಿಒ ಬಿ.ಎನ್‌. ಇಟಗಿಮಠ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. 8 ತಿಂಗಳಿನಿಂದ ಗ್ರಾಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಇತ್ತ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿಲ್ಲ. ಪರಿಣಾಮ ಗ್ರಾಮಸ್ಥರು ನರಳಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪಿಡಿಒ ಸ್ಥಳದಿಂದ ಕಾಲ್ಕಿತ್ತರು.

ಈ ವೇಳೆ ಡಾ. ಪ್ರವೀಣ ನಿಡಗುಂದಿ, ಡಾ. ಶರಣು ಗಾಣಗೇರ, ಡಾ. ರೇಖಾ ಹೊಸಮನಿ, ಕೆ.ಎ. ಹಾದಿಮನಿ, ಆರ್‌.ಎಫ್‌. ಅರಹುಣಸಿ, ಎಂ.ಎಸ್‌. ರಬ್ಬನಗೌಡರ, ಮನೋಹರ ಕಣ್ಣಿ, ಮಂಜುನಾಥ ವರಗಾ ಇತರರು ಇದ್ದರು.
 

click me!