ಸಿಲಿಂಡರ್‌ ಪಿನ್‌ ತೆಗೆದ ಮಕ್ಕಳು: ಸೋರಿದ ಅನಿಲ ಸೇವಿಸಿ ಅಸ್ವಸ್ಥ

By Kannadaprabha NewsFirst Published Sep 13, 2021, 9:21 AM IST
Highlights

*  ಮಾಲೀಕನಿಲ್ಲದ ಅಂಗಡಿಯಲ್ಲಿ ಮಕ್ಕಳ ಅವಾಂತರ
*  ಅಂಗಡಿ ಮಾಲೀಕನ ವಿರುದ್ದ ಎಫ್‌ಐಆರ್‌
*  ಬೆಂಗ್ಳೂರಿನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ 
 

ಬೆಂಗಳೂರು(ಸೆ.13): ಮಾಲೀಕನಿಲ್ಲದ ವೇಳೆ ಗ್ಯಾಸ್‌ ಅಂಗಡಿಗೆ ನುಗ್ಗಿದ ಇಬ್ಬರು ಮಕ್ಕಳು ಅಲ್ಲಿದ್ದ ಸಿಲಿಂಡರ್‌ ಪಿನ್‌ ತೆಗೆದಿದ್ದರಿಂದ ಸೋರಿಕೆಯಾದ ಅನಿಲ ಸೇವಿಸಿ ಅಸ್ವಸ್ಥರಾಗಿರುವ ಘಟನೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂಬಾರ ಓಣಿ ನಿವಾಸಿಗಳಾದ ಫೈಜಾನ್‌ (14) ಮತ್ತು ರಿಯಾನ್‌ (15) ಅಸ್ವಸ್ಥರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಅಂಗಡಿ ಮಾಲೀಕ ಇಮ್ರಾನ್‌ ವಿರುದ್ಧ ನಿರ್ಲಕ್ಷ್ಯ ಪ್ರಕರಣದಡಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್‌ ಹಲ್ಲೆಯಿಂದ ಮಾನಸಿಕ ಅಸ್ವಸ್ಥ ಸಾವು ಆರೋಪ : ಸಿಐಡಿ ತಂಡದಿಂದ ತನಿಖೆ

ಇಮ್ರಾನ್‌ ಕುಂಬಾರ ಓಣಿಯಲ್ಲಿ ಕಮರ್ಷಿಯಲ್‌ ಗ್ಯಾಸ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಅಂಗಡಿ ಬಾಗಿಲು ಹಾಕದೇ ಸಮೀಪದ ಮಸೀದಿಗೆ ನಮಾಜ್‌ ಮಾಡಲು ಇಮ್ರಾನ್‌ ತೆರಳಿದ್ದಾರೆ. ಈ ವೇಳೆ ಈ ಇಬ್ಬರು ಮಕ್ಕಳು ಆಟವಾಡುತ್ತಾ ಅಂಗಡಿಗೆ ಬಂದಿದ್ದಾರೆ. ಅಂಗಡಿಯಲ್ಲಿ ಯಾರು ಇಲ್ಲದನ್ನು ನೋಡಿದ ಬಾಲಕರು ಅಂಗಡಿಯಲ್ಲಿದ್ದ ಸಿಲಿಂಡರ್‌ನ ಪಿನ್‌ ತೆಗೆದಿದ್ದಾರೆ. ಈ ವೇಳೆ ಸೋರಿಕೆಯಾದ ಅನಿಲ ಸೇವಿಸಿ ಇಬ್ಬರು ರಾಗಿದ್ದಾರೆ. ಕೂಡಲೇ ಸ್ಥಳೀಯರು ಬಾಲಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಇಬ್ಬರು ಬಾಲಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಫೈಜಾನ್‌ ಮತ್ತು ರಿಯಾನ್‌ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಖಾಲಿಯಾದ ಸಿಲಿಂಡರ್‌ನಲ್ಲಿ ಅಲ್ಪ ಪ್ರಮಾಣದ ಅನಿಲ ಇತ್ತು. ಹೀಗಾಗಿ ಹೆಚ್ಚಿನ ಅನಾಹುತವಾಗಿಲ್ಲ ಎಂದು ಕಲಾಸಿಪಾಳ್ಯ ಠಾಣೆ ಪೊಲೀಸರು ಮಾಹಿತಿ ನೀಡಿದರು.
 

click me!