ಶಿಕ್ಷಕನಿಂದ ಅಶ್ಲೀಲ ಸಂದೇಶ ರವಾನೆ ಆರೋಪ : ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ

By Kannadaprabha News  |  First Published Jan 9, 2024, 10:17 AM IST

ರಾಜಕೀಯ ಮಾಡುವ, ಶಾಲೆಗೆ ಸರಿಯಾಗಿ ಬಾರದ, ಮಕ್ಕಳಿಗೆ, ಶಿಕ್ಷಕರಿಗೆ ಅಶ್ಲೀಲವಾಗಿ ಮಾತನಾಡುವ ಶಿಕ್ಷಕ ನಮಗೆ ಬೇಡ ಎಂದು ತಾಲೂಕಿನ ಅಜ್ಜನಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.


 ತುರುವೇಕೆರೆ :  ರಾಜಕೀಯ ಮಾಡುವ, ಶಾಲೆಗೆ ಸರಿಯಾಗಿ ಬಾರದ, ಮಕ್ಕಳಿಗೆ, ಶಿಕ್ಷಕರಿಗೆ ಅಶ್ಲೀಲವಾಗಿ ಮಾತನಾಡುವ ಶಿಕ್ಷಕ ನಮಗೆ ಬೇಡ ಎಂದು ತಾಲೂಕಿನ ಅಜ್ಜನಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.

ಈ ಸಮಾಜ ವಿಜ್ಞಾನ ವಿಷಯದ ಶಿಕ್ಷಕ ರವಿಕುಮಾರ್ ಎಂಬುವವರು ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಬಂದ ವೇಳೆ ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಗೈರು ಹಾಜರಿಯ ಬಗ್ಗೆ ಆಕ್ಷೇಪಿಸಿದರೆ ಅವರನ್ನು ವಾಗಿ ನಿಂದಿಸುವುದಲ್ಲದೇ, ತಮಗೆ ಶಾಸಕರ ಬೆಂಬಲವಿದೆ. ನೀವೇನೂ ನನ್ನನ್ನು ಮಾಡಲು ಸಾಧ್ಯವಿಲ್ಲ. ನಾನು ಶಾಲೆಗೆ ಬರುವುದೇ ಹೀಗೆ. ಏನಾದರೂ ಮಾಡಿಕೊಳ್ಳಿ ಎಂದು ಉಡಾಫೆಯ ಮಾತುಗಳನ್ನು ಆಡುತ್ತಾರೆ ಎಂದು ಶಾಲೆಯ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

 ಅಶ್ಲೀಲ ಸಂದೇಶ  ಈ ಶಿಕ್ಷಕ ರವಿಕುಮಾರ್ ಶಾಲೆಯ ಕೆಲವು ಶಿಕ್ಷಕರಿಗೆ ಅಶ್ಲೀಲ ದೃಶ್ಯಗಳನ್ನು ಮತ್ತು ಸಂದೇಶಗಳನ್ನು ವ್ಯಾಟ್ಸಾಪ್ ಮೂಲಕ ರವಾನೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ವಾರದಲ್ಲಿ ಮೂರು ದಿನಗಳ ಕಾಲ ಬರುವ ಈ ಶಿಕ್ಷಕ ರವಿಕುಮಾರ್‌, ಶಾಲೆಗೆ ಬಂದು ಕೆಲವೇ ಗಂಟೆಗಳ ಕಾಲ ಶಾಲೆಯಲ್ಲಿ ಇದ್ದು ವಾಪಸ್ಸಾಗುತ್ತಾರೆ. ವಿಚಾರಿಸಿದರೆ ನಾನು ಬರುವುದೇ ಹೀಗೆ, ನನಗೆ ಅಕ್ಷರ ದಾಸೋಹದ ಜವಾಬ್ದಾರಿ ಇದೆ. ನಾನು ಯಾರಿಗೇನೂ ಉತ್ತರ ಕೊಡಬೇಕಿಲ್ಲ. ನಾನು ಶಾಸಕರ ಕ್ಯಾಂಡಿಡೇಟ್. ನಾನೇ ಬಿಇಒ ಅವರನ್ನು ೬ ಲಕ್ಷ ರು. ಕೊಟ್ಟು ಹಾಕಿಸಿಕೊಂಡು ಬಂದಿದ್ದೇನೆ. ಅವರೂ ಸಹ ನನ್ನನ್ನು ಏನೂ ಮಾಡಲು ಆಗಲ್ಲ ಎಂದು ದರ್ಪದಿಂದ ಉತ್ತರ ಕೊಡುತ್ತಾರೆಂದು ಗ್ರಾಮದ ಹಿರಿಯ ಮುಖಂಡ ಕಪನಯ್ಯ ದೂರಿದರು.

\Bಕ್ರಮ ಭರವಸೆ:\B ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಪೋಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಮಾಡಿದ ಆರೋಪವನ್ನು ಆಲಿಸಿದರು. ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರವಿ ಕುಮಾರ್ ಅವರು ಪ್ರಭಾರ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರು ಶಾಲೆಗೆ ಬರಲು ತೊಂದರೆಯಾಗಿದೆ. ಆದರೆ ಅವರು ಶಾಲೆಯಲ್ಲಿರುವ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು. ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

\Bಮಕ್ಕಳ ಗತಿ ಏನು:\B ಇನ್ನು ಎರಡು ಮೂರು ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆ ಬರಲಿದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಇಲ್ಲಿ ಪಾಠ ಮಾಡದ ಕಾರಣ ಮಕ್ಕಳು ಏನನ್ನು ಕಲಿಯಲು ಸಾಧ್ಯ. ಮುಂಬರುವ ಪರೀಕ್ಷೆಯಲ್ಲಿ ಮಕ್ಕಳು ಪರೀಕ್ಷೆ ಬರೆಯುವುದಾದರೂ ಏನನ್ನು ಎಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್‌ ರವರನ್ನು ಪ್ರಶ್ನಿಸಿದರು. ಇದಕ್ಕೆ ಬಿಇಒ ಸೋಮಶೇಖರ್‌ ನಿರುತ್ತರರಾದರು.

ಬೇರೆ ಶಿಕ್ಷಕ: ಶಾಲೆಯಲ್ಲಿರುವ ಸುಮಾರು 58 ಮಕ್ಕಳ ಹಿತದೃಷ್ಠಿಯಿಂದ ನಾಳೆಯಿಂದಲೇ ಬೇರೊಬ್ಬ ಶಿಕ್ಷಕರನ್ನು ಈ ಶಾಲೆಗೆ ನೇಮಿಸಿ ಮಕ್ಕಳಿಗೆ ಸೂಕ್ತ ಪಾಠ ಪ್ರವಚನವನ್ನು ಮಾಡಿಸುವುದಾಗಿಯೂ ಬಿಇಒ ಸೋಮಶೇಖರ್ ಗ್ರಾಮಸರಿಗೆ ಮನವರಿಕೆ ಮಾಡಿಕೊಟ್ಟು ಶಾಲೆಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಿದರು.

ಸಮಾಜ ವಿಜ್ಞಾನ ಶಿಕ್ಷಕ ರವಿಕುಮಾರ್ ಅವರ ಧೋರಣೆಯಿಂದ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ. ಇದರಿಂದಾಗಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದೆ. ಕೂಡಲೇ ಉತ್ತಮ ಶಿಕ್ಷಕರನ್ನು ಈ ಶಾಲೆಗೆ ನೇಮಿಸಬೇಕು ಎಂದು ಆಗ್ರಹಿಸಿದರು.

ತಮಗೆ ಶಾಸಕರ ಬೆಂಬಲವಿದೆ ಎಂಬ ಅಹಂನಿಂದ ಶಿಕ್ಷಕ ರವಿಕುಮಾರ್ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ರವಿಕುಮಾರ್ ಶಾಲೆಯ ಶಿಕ್ಷಕರಿಗೆ ಬೆದರಿಕೆ ಒಡ್ಡಿದ ಬಗ್ಗೆ ದೂರು ಕೇಳಿ ಬಂದಲ್ಲಿ ಬಿಇಒ ಕಚೇರಿ ಮುಂದೆಯೇ ವಿದ್ಯಾರ್ಥಿಗಳ ಸಹಿತ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ತಾಲೂಕು ರೈತ ಸಂಘದ ಕಾರ್ಯದರ್ಶಿ ಶೇಖರ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಲಕ್ಷ್ಮಮ್ಮ, ಕುಮಾರ್, ಮಂಜುಳಾದೇವಿ, ಸವಿತಾ, ಲೋಕೇಶ್, ಗ್ರಾಮ ಪಂಚಾಯ್ತಿ ಸದಸ್ಯ ಚೇತನ್, ಪೋಷಕರಾದ ಗಂಗಣ್ಣ, ವರದೇಗೌಡ, ಸಣ್ಣಯ್ಯ, ಅಶ್ವತ್ಥ ನಾರಾಯಣ್, ಪಾಪೇಗೌಡ, ಸದಾನಂದಗೌಡ, ಕಂಚೀವರದಯ್ಯ, ಮಹಾಲಿಂಗಯ್ಯ, ಶಿವಣ್ಣ, ಉಷಾ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು 

click me!