
ಬಳ್ಳಾರಿ/ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಆಗುತ್ತಿರುವ ಪರಿಣಾಮ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನದಿಪಾತ್ರ ಪ್ರದೇಶಗಳಿಗೆ ಮುಳುಗಡೆ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಮನೆಮಾಡಿದೆ. ಟಿಬಿ ಡ್ಯಾಂ ನಿಂದ ಬರೋಬ್ಬರಿ 80 ಸಾವಿರ ಕ್ಯುಸೆಕ್‌ನಷ್ಟು ನೀರು ಹೊರಬಿಡಲಾಗುತ್ತಿದ್ದು, ಜಿಲ್ಲಾಡಳಿತ ನಿವಾಸಿಗಳಿಕೆ ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಜಲಾಶಯದಿಂದ 80 ಸಾವಿರ ಕ್ಯುಸೆಕ್‌ನಷ್ಟು ನೀರು ಹೊರಬಿಡಲಾಗಿದ್ದು, ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಗಂಗಾವತಿ ನಡುವಿನ ಸೇತುವೆಗೆ ಮುಳುಗಡೆಯ ಭೀತಿ ಎದುರಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ತುಂಗಭದ್ರಾ ಜಲಾ ಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಕ್ರಸ್ಟ್ ಗೇಟ್ ಗಳು ಮುಕ್ಕಾಗಿವೆ ಎಂಬ ವರದಿಯ ಬೆನ್ನಲ್ಲೇ ತಜ್ಞರು ನೀಡಿದ ಸಲಹೆಯಂತೆ ಈ ಬಾರಿ 80 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಲಾಗಿದ್ದು, ಉಳಿದ ನೀರನ್ನು ನದಿ ಮೂಲಕ ಹೊರಗೆ ಬಿಡಲಾಗುತ್ತದೆ. ಸದ್ಯ ಸೇತುವೆಗೆ ಕೇವಲ 2 ರಿಂದ 3 ಅಡಿಗಳಷ್ಟು ಮಾತ್ರ ಮುಳುಗಲು ಬಾಕಿ ಇದೆ. ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ, ಸೇತುವೆಯ ಸಂಪರ್ಕ ಕಡಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಪ್ರತಿ ಬಾರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವ ಸಂದರ್ಭದಲ್ಲಿ ಈ ಸೇತುವೆ ಮುಳುಗಡೆಯಾಗುತ್ತದೆ. ಜನರು ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಸೇತುವೆ ಮುಳುಗಡೆಯಾದರೆ ಜನರು ಸುಮಾರು 30 ಕಿ.ಮೀ ಸುತ್ತುವರಿದು ಗಂಗಾವತಿಗೆ ಹೋಗಬೇಕಾದ ಸ್ಥಿತಿ ಎದುರಾಗುತ್ತದೆ. ಜಿಲ್ಲಾಡಳಿತ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿದ್ದು, ಯಾವುದೇ ಅನಾಹುತ ಸಂಭವಿಸದಂತೆ ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಪ್ರದೇಶದಲ್ಲಿ ತುಂಗಭದ್ರಾ ನದಿಯ ತಟದಲ್ಲಿರುವ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ್ ಶ್ರೀಕೃಷ್ಣದೇವರಾಯ ಅವರ ಸಮಾಧಿ ಮಂಟಪ ಮುಳುಗಡೆಯ ಭೀತಿಯಲ್ಲಿ ಸಿಲುಕಿದೆ. ಟಿ.ಬಿ. ಬೋರ್ಡ್ ಅಧಿಕಾರಿಗಳು ಜಲಾಶಯದಿಂದ 64 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡುತ್ತಿರುವುದರಿಂದ, ಐತಿಹಾಸಿಕ ಸ್ಮಾರಕಗಳು ಮತ್ತು ಸ್ಮಾರಕ ಪ್ರದೇಶಗಳಿಗೆ ಹಾನಿ ಸಂಭವಿಸುವ ಆತಂಕ ಉಂಟಾಗಿದೆ.
ನದಿಗೆ ನೀರು ಬಿಡುವುದರಿಂದ ನದಿಪಾತ್ರದ ರೈತರಿಗೆ ಸಹ ಸಂಕಷ್ಟ ಎದುರಾಗಿದ್ದು, ಕೃಷಿಗಾಗಿ ನದಿಯಲ್ಲಿ ಹಾಕಿದ್ದ ಮೋಟಾರ್ ಪಂಪ್ ಸೆಟ್‌ಗಳು ಮತ್ತು ಪೈಪ್‌ಗಳು ಕೋಚಿಹೋಗುವ ಪರಿಸ್ಥಿತಿ ಎದುರಾಗುತ್ತಿದೆ. ಪಂಪ್ ಸೆಟ್ ಹಾಗೂ ಪೈಪ್ಲೈನ್‌ಗಳನ್ನು ರಕ್ಷಿಸಲು ರೈತರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ಸೂಚನೆ ನೀಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಲಾಗಿದೆ.
ತುಂಗಭದ್ರಾ ಜಲಾಶಯದಿಂದ ನಿರಂತರವಾಗಿ ನೀರು ಬಿಡುಗಡೆ ಆಗುತ್ತಿರುವುದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನದಿಪಾತ್ರ ಪ್ರದೇಶಗಳಿಗೆ ದೊಡ್ಡ ಆತಂಕವಾಗಿ ಪರಿಣಮಿಸಿದೆ. ಸೇತುವೆಗಳು ಮುಳುಗಡೆಯ ಅಪಾಯ ಎದುರಿಸುತ್ತಿದ್ದು, ಐತಿಹಾಸಿಕ ಸ್ಮಾರಕಗಳು ಸಹ ಹಾನಿಗೊಳಗಾಗುವ ಸಾಧ್ಯತೆ ಕಾಡುತ್ತಿದೆ. ಜನರ ಜೀವ ರಕ್ಷಣೆ ಹಾಗೂ ಸ್ಮಾರಕಗಳ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.