
ಬೆಂಗಳೂರಿನ ನಮ್ಮ ಮೆಟ್ರೋದ ಹೊಸ ಕಾರಿಡಾರ್ ಹಳದಿ ಮಾರ್ಗ ವಿಳಂಬ ಖಂಡಿಸಿ ಪ್ರತಿಭಟನೆ ನಡೆಸಿವೆ. 19.1 ಕಿಮೀ ಉದ್ದದ ಉತ್ತರದಲ್ಲಿ ಆರ್‌ವಿ ರಸ್ತೆಯನ್ನು ದಕ್ಷಿಣದಲ್ಲಿ ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುವ ಹಳದಿ ಮಾರ್ಗ ಆಗಸ್ಟ್ ನಲ್ಲಿ ತೆರೆಯಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗವನ್ನು ಶೀಘ್ರ ಆರಂಭಿಸಲು ಒತ್ತಾಯಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಿಎಂಆರ್ಸಿಎಲ್ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿವೆ. ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರೆ, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.
ಬಹು ನಿರೀಕ್ಷಿತ ಹಳದಿ ಮಾರ್ಗ (Yellow Line) ಮೆಟ್ರೋ ಆರಂಭ ವಿಳಂಬಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬೃಹತ್ ಮೆರವಣಿಗೆ ಮೂಲಕ ಲಾಲ್ ಬಾಗ್‌ನಿಂದ ಬಿಎಂಆರ್ಸಿಎಲ್ ಕಚೇರಿಗೆ ಸಾಗಲು ಯೋಜಿಸಿದ್ದರೂ, ಪೊಲೀಸರಿಂದ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಲಾಲ್ ಬಾಗ್ ಹತ್ತಿರವೇ ಜಮಾಯಿಸಿದರು.
ಇಂದು ಬೆಳಗ್ಗೆ 9 ಗಂಟೆಗೆ ಶಾಂತಿನಗರದಲ್ಲಿರುವ BMRCL ಕಚೇರಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಭೇಟಿ ನೀಡಿ, ಮೆಟ್ರೋ ಆರಂಭ ವಿಳಂಬಕ್ಕೆ ಕೇಂದ್ರ ಸರ್ಕಾರವೇ ಹೊಣೆಗಾರ ಎಂದು ಆರೋಪಿಸಿದರು. ಮೆಟ್ರೋ ಬೋಗಿಗಳ ತುರ್ತು ಸರಬರಾಜು ಹಾಗೂ ಪರಿಶೀಲನೆ ತ್ವರಿತಗೊಳಿಸಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಇದಕ್ಕೆ ಪ್ರತಿಯಾಗಿ, ಬಿಜೆಪಿ ಹಳದಿ ಲೈನ್ ಮೆಟ್ರೋಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಮೆಟ್ರೋ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿ ಮೆರವಣಿಗೆ ನಡೆಸಲು ಬಿಜೆಪಿ ಸಿದ್ದತೆ ನಡೆಸಿತ್ತು. ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಮೆಟ್ರೋ ಯೋಜನೆಗೆ ಇರಲೇಬೇಕಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮತಿಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಶಾಸಕರಾದ ರಾಮಮೂರ್ತಿ, ಉಮೇಶ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಸ್ಥಳಕ್ಕಾಗಮಿಸಿದ್ದಾರೆ.
ಸ್ಥಳಕ್ಕೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಬಿಬಿಎಂಪಿ ಆಯುಕ್ತರಾದ ಮಹೇಶ್ವರ್ ರಾವ್ ಆಗಮಿಸಿದರು. ಆಗಸ್ಟ್ 15 ರ ಒಳಗೆ ಹಳದಿ ಮೆಟ್ರೋ ಓಪನ್ ಬಗ್ಗೆ ಮಹೇಶ್ವರ್ ರಾವ್ ಭರವಸೆ ನೀಡಿದರು. ಈ ಸಂದರ್ಭ ಮಾತನಾಡಿದ ತೇಜಸ್ವಿ ಸೂರ್ಯ, “ಈಗಾಗಲೇ ಲಕ್ಷಾಂತರ ನಾಗರಿಕರು ಮೆಟ್ರೋ ಬಳಸುತ್ತಿದ್ದಾರೆ. ಯೆಲ್ಲೋ ಲೈನ್ ಆರಂಭವಾದರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ, ಹಲವು ಬಾರಿ ಡೆಡ್‌ಲೈನ್ ಘೋಷಿಸಿದರೂ ಯಾವುದೇ ಮುನ್ನಡೆ ಕಂಡಿಲ್ಲ,” ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಮೆಟ್ರೋ ದರ ಏರಿಕೆಯ ವಿಷಯವನ್ನೂ ತೀವ್ರವಾಗಿ ಟೀಕಿಸಿದರು. “ಇದಕ್ಕೂ ಎರಡು ತಿಂಗಳ ಹಿಂದೆ ದರ ಏರಿಕೆ ಮಾಡಲಾಗಿದೆ. ಅದರ ಹಿಂದೆ ಇರುವ ಸಮೀಕ್ಷೆ ಅಥವಾ ಆಧಾರವನ್ನು ಜನತೆ ಮುಂದೆ ಬಹಿರಂಗಪಡಿಸಿಲ್ಲ. ಈ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ದರ ಏರಿಕೆಯ ಅಧ್ಯಯನ ವರದಿಯನ್ನು ಕೂಡ ಬಹಿರಂಗ ಮಾಡಬೇಕು,” ಎಂದು ಒತ್ತಾಯಿಸಿದರು.
ಮೆಟ್ರೋ ಫೇಸ್-3 ಯೋಜನೆಯ ಬಗ್ಗೆ ಮಾತನಾಡಿದ ಅವರು, “ವೆಗಾಸಿಟಿ ಮಾಲ್‌ನಿಂದ ಮೆಟ್ರೋ ಆರಂಭವಾದರೆ ದಿನಕ್ಕೆ 8 ರಿಂದ 10 ಲಕ್ಷ ಪ್ರಯಾಣಿಕರು ಪ್ರಯಾಣಿಸಬಹುದು. ನಾವು ಕೇಂದ್ರದಲ್ಲಿ ಅನುಮತಿ ಪಡೆದಿದ್ದೇವೆ. ಆದರೆ ಇನ್ನು ಟೆಂಡರ್ ಕೂಡ ಕರೆಯಲಾಗಿಲ್ಲ. ಕೇಂದ್ರ ಅನುಮತಿ ಸಿಕ್ಕು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಇದು ನಿರ್ಲಕ್ಷ್ಯದ ಲಕ್ಷಣ,” ಎಂದು ಕೇಂದ್ರ ಸರ್ಕಾರದ ಪ್ರಾಯೋಗಿಕ ತ್ವರಿತ ಕ್ರಮಕ್ಕೆ ಬೆಂಬಲ ನೀಡಿ ರಾಜ್ಯ ಸರ್ಕಾರದ ತೀವ್ರ ಟೀಕೆಗೆ ಒಳಪಡಿಸಿದರು.
ಪಿಂಕ್ ಲೈನ್ ಮೆಟ್ರೋ ಬಳಿಯೇ ಸರ್ಕಾರ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಟನಲ್ ರಸ್ತೆ ನಿರ್ಮಾಣದಿಂದ ಮೆಟ್ರೋಗೆ ತೊಂದರೆ ಆಗುತ್ತದೆಯೇ ಎಂಬ ಅಧ್ಯಯನ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಆದರೆ ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು,” ಎಂದು ಅವರು ಒತ್ತಾಯಿಸಿದರು.
ತುಮಕೂರು ಮತ್ತು ಕನಕಪುರಕ್ಕೆ ಮೆಟ್ರೋ ವಿಸ್ತರಣೆಯ ಬಗ್ಗೆ ಮಾತನಾಡಿದ ತೇಜಸ್ವಿ ಸೂರ್ಯ, “ಮೊದಲು ನಗರ ಒಳಭಾಗದಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಳಿಸಿ, ನಂತರ ಹೊರಭಾಗಗಳಿಗೆ ವಿಸ್ತರಿಸಿದರೆ ಜನತೆಗೆ ಹೆಚ್ಚಿನ ಲಾಭ ಆಗುತ್ತದೆ,” ಎಂದು ಅಭಿಪ್ರಾಯಪಟ್ಟರು.
ಮತ್ತೊಂದೆಡೆ, ಮೆಟ್ರೋ ವಿಳಂಬಕ್ಕೆ ವಿರೋಧವಾಗಿ ಕಾಂಗ್ರೆಸ್ ಕಾರ್ಯಕರ್ತರು BMRCL ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ತ್ವರಿತವಾಗಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ನಾಗರಾಜು ಸೇರಿದಂತೆ ಹಲವರು ಪ್ರತಿಭಟನೆಗೆ ಹಾಜರಿದ್ದಾರೆ. ಇದೇ ವೇಳೆ, ಲಾಲ್ ಬಾಗ್ ಬಳಿ ಪ್ರತಿಭಟನೆಗೆ ಸಂಸದ ತೇಜಸ್ವಿ ಸೂರ್ಯ ಜೊತೆಗೆ ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಸಂಸದ ಪಿ.ಸಿ. ಮೋಹನ್ ಕೂಡ ಸೇರ್ಪಡೆಗೊಂಡರು. ಬಿಎಂಆರ್ಸಿಎಲ್ ಕಚೇರಿ ಎದುರು ಇಂದು ಎರಡೂ ಪಕ್ಷಗಳ ಮುಖಾಮುಖಿ ಸಂಘರ್ಷ ಸಂಭವಿಸುವ ಸಾಧ್ಯತೆ ಇರುವುದರಿಂದ, ಶಾಂತಿನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.