ಜಿಲ್ಲೆಯ 4 ತಾಲೂಕುಗಳ 7 ಸರ್ಕಾರಿ ಪ್ರೌಢ ಶಾಲೆ ಹಾಗೂ 18 ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 25 ಶಾಲೆಗಳು ಕರ್ನಾಟಕ ಮಾದರಿ ಶಾಲೆಗಳ ಮಾರ್ಗದರ್ಶಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು ತಿಳಿಸಿದರು.
ತುಮಕೂರು : ಜಿಲ್ಲೆಯ 4 ತಾಲೂಕುಗಳ 7 ಸರ್ಕಾರಿ ಪ್ರೌಢ ಶಾಲೆ ಹಾಗೂ 18 ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 25 ಶಾಲೆಗಳು ಕರ್ನಾಟಕ ಮಾದರಿ ಶಾಲೆಗಳ ಮಾರ್ಗದರ್ಶಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ ಕರ್ನಾಟಕ ಮಾದರಿ ಳ ಮಾರ್ಗದರ್ಶಿ ಕಾರ್ಯಕ್ರಮದ ಜಿಲ್ಲಾ ಹಂತದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಮಾದರಿ ಶಾಲೆಗಳ ಮಾರ್ಗದರ್ಶಿ ಕಾರ್ಯಕ್ರಮವನ್ನು ಯುವ, ಶಿಕ್ಷಣ ಫೌಂಡೇಶನ್, ಉದ್ಯಮ, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ಮತ್ತು ಕ್ವೆಸ್ಟ್ ಅಲೆಯನ್ಸ್ ಸೇರಿದಂತೆ ಒಟ್ಟು 5 ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಿಸಲಾಗುವುದು ಎಂದು ತಿಳಿಸಿದರು.
undefined
ಪ್ರಸಕ್ತ ವರ್ಷದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿರುವ ಶಾಲೆಗಳಲ್ಲಿ ಕಲ್ಪಿಸಿರುವ ಸೌಕರ್ಯಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಗತಿ ಪರಿಶೀಲಿಸಲಾಯಿತಲ್ಲದೆ, ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಶೌಚಾಲಯ ಮತ್ತು ಹ್ಯಾಂಡ್ ವಾಶ್ ನಿರ್ಮಾಣ, ಮಕ್ಕಳ ಸ್ನೇಹಿ ಗ್ರಂಥಾಲಯ, ವಿಜ್ಞಾನ ಕಿಟ್, ಸ್ಪೋಕನ್ ಇಂಗ್ಲಿಷ್ ತರಬೇತಿ, ವೃತ್ತಿ ಮಾರ್ಗದರ್ಶನ, ಡಿಜಿಟಲ್ ಕಂಟೆಂಟ್, ಬುನಾದಿ ಸಾಕ್ಷರತೆ, ಸಮುದಾಯ ಪಾಲ್ಗೊಳ್ಳುವಿಕೆ, ೨೧ನೇ ಶತಮಾನದಲ್ಲಿ ಮಕ್ಕಳು ಬೆಳೆಸಿಕೊಳ್ಳಬೇಕಾದ ಜೀವನ ಕೌಶಲ್ಯಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಜಿಲ್ಲೆಯ ಶಾಲಾ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಡಯಟ್(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಸಿದ್ಧಪಡಿಸಿರುವ 29 ‘ಅನುಭವಾತ್ಮಕ ಕಲಿಕೆ’ ಮಾಡ್ಯುಲ್‌ಗಳ ಕುರಿತು ಚರ್ಚಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮುಂದುವರೆದು, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನವಾಗಿರುವುದು ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಿದ್ದು, ಈ ಕಾರ್ಯಕ್ರಮವನ್ನು ಜಿಲ್ಲೆಯ ಉಳಿದ ತಾಲೂಕುಗಳಿಗೂ ವಿಸ್ತರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.
ಮಾಡ್ಯುಲ್‌ಗಳನ್ನು ಸಿದ್ಧಪಡಿಸುವಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ ಮಾಡಿದ ಕೀರ್ತಿ ಡಯಟ್‌ಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಈ ಮಾಡ್ಯುಲ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಉತ್ತಮಗೊಳಿಸಲು ಸಿ.ಎಸ್.ಆರ್. ನಿಧಿ ಬಳಸಿ ಎಲ್ಲಾ ಕೆ.ಪಿ.ಎಸ್. ಶಾಲೆ, ಸರ್ಕಾರಿ ಪ್ರೌಢ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಜಿಲ್ಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷವನ್ನು ‘ಅನುಭವಾತ್ಮಕ ಕಲಿಕಾ ವರ್ಷ’ವನ್ನಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಕರ್ನಾಟಕ ಸಮಗ್ರ ಶಿಕ್ಷಣದ ಸಹ ನಿರ್ದೇಶಕ ಪ್ರಸಾದ್ ಇವರು ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ, ಡಯಟ್ ಪ್ರಾಂಶುಪಾಲ ಮಂಜುನಾಥ್, ಡಿವೈಪಿಸಿ ರಂಗಧಾಮಪ್ಪ, ಸ್ವಯಂ ಸೇವಾ ಸಂಸ್ಥೆಗಳಾದ ಸತ್ವ ಸಂಸ್ಥೆಯ ವೈ.ಡಿ. ರಕ್ಷಿತ್, ಯುವ, ಶಿಕ್ಷಣ ಫೌಂಡೇಶನ್, ಉದ್ಯಮ, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ವತಿಯಿಂದ ಹರೀಶ್ ಕೆ. ಮತ್ತು ಕ್ವೆಸ್ಟ್ ಅಲೆಯನ್ಸ್ ಸಂಸ್ಥೆಗಳ ವಿವಿದ ಹಂತದಲ್ಲಿ ಕಾರ್ಯ ನಿರ್ವಹಿಸುವ ಪ್ರತಿನಿಧಿಗಳು, ಬಿಇಒಗಳು, ಬಿಆರ್‌ಸಿಗಳು, ಡಯಟ್ ಹಿರಿಯ ಉಪನ್ಯಾಸಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.