ತುಮಕೂರು : ಜಿಲ್ಲೆಯಲ್ಲಿ ತೆಂಗು, ಹುಣಸೇ ಪಾರ್ಕ್ ನಿರ್ಮಿಸಲು ಡಿಮ್ಯಾಂಡ್

By Kannadaprabha NewsFirst Published Mar 18, 2024, 10:19 AM IST
Highlights

ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ತೆಂಗು ಮತ್ತು ಹುಣುಸೆ ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಜಿಲ್ಲೆಯಲ್ಲಿ ತೆಂಗು ಮತ್ತು ಹುಣಸೆ ಪಾರ್ಕ್ ಗಳನ್ನು ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪನವರು ಹೇಳಿದರು.

  ತುರುವೇಕೆರೆ :  ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ತೆಂಗು ಮತ್ತು ಹುಣುಸೆ ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಜಿಲ್ಲೆಯಲ್ಲಿ ತೆಂಗು ಮತ್ತು ಹುಣಸೆ ಪಾರ್ಕ್ ಗಳನ್ನು ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪನವರು ಹೇಳಿದರು.

ಇವರು ತಾಲೂಕಿನ ಮಾಯಸಂದ್ರದ ರಂಗಮಂದಿರದ ಆವರಣದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತರೊಂದಿಗೆ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ಗ್ರಾಮಾಂತರ, ಕುಣಿಗಲ್ ನಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಈ ಎಲ್ಲಾ ತಾಲೂಕುಗಳಿಗೆ ಅನುಕೂಲವಾಗುವಂತೆ ಕೆ. ಬಿ. ಕ್ರಾಸ್ ನಲ್ಲಿ ತೆಂಗು ಪಾರ್ಕ್ ನಿರ್ಮಿಸಿದರೆ ತೆಂಗು ಬೆಳೆಯುವ ರೈತರಿಗೆ ಹಾಗೂ ಈ ಬೆಳೆಗಳಿಂದಾಗುವ ವಿವಿಧ ಉತ್ವನ್ನಗಳ ಬಗ್ಗೆ ಅರಿವು ಮೂಡಿಸಬಹುದು. ಕೋಲ್ಡ್ ಸ್ಟೋರೇಜ್ ಸೇರಿ ಹಲವಾರು ಬಗೆಯ ಪ್ರಯೋಜನಗಳ ಕುರಿತು ಆ ಪಾರ್ಕ್ ನಲ್ಲಿರಿಗೆ ತಿಳಿಸಲು ಸಹಾಯಕವಾಗುವುದು ಎಂದು ಹೇಳಿದರು.

ಹಾಗೆಯೇ ಮಧುಗಿರಿ, ಶಿರಾ, ಕೊರಟಗೆರೆ, ತುಮಕೂರು ಸೇರಿ ಇತರೆಡೆ ಹುಣಸೆ ಬೆಳೆ ಹೆಚ್ಚಾಗಿದೆ. ಆದ್ದರಿಂದ ಈ ಎಲ್ಲಾ ತಾಲೂಕುಗಳಿಗೆ ಅನುಕೂಲವಾಗುವಂತೆ ಒಂದು ಪ್ರದೇಶದಲ್ಲಿ ಹುಣಸೆ ಪಾರ್ಕ್ ನಿರ್ಮಾಣವಾದರೆ ಎಲ್ಲಾ ರೈತರಿಗೆ ಅನುಕೂಲವಾಗಲಿದೆ ಎಂದು ಮುರುಳೀಧರ್ ಹಾಲಪ್ಪ ಹೇಳಿದರು.

ತಮ್ಮ ಸಂಸ್ಥೆ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಲಭ್ಯವಿರುವ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ರೈತರೊಂದಿಗೆ ನಾವು ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಹಮ್ಮಿಕೊಂಡು ರೈತರ ನೆರವಿಗೆ ಬರುತ್ತಿದೆ. ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿ ಮಾಡುವಂತಾಗಬೇಕು. ರೈತರ ಕಷ್ಟಗಳನ್ನು ಅರಿತು ಸರ್ಕಾರ ನೀಡುವ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಮುರುಳೀಧರ್ ಹಾಲಪ್ಪ ಹೇಳಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರೈತರ ಪರ ಚಿಂತನೆ, ಹೆಚ್ಚು ಕಳಕಳಿ ಇರುವಂತಹ ಮುರುಳೀಧರ್ ಹಾಲಪ್ಪನವರಿಗೆ ರಾಜಕೀಯವಾಗಿ ಜನರ ಸೇವೆ ಮಾಡುವ ಅಧಿಕಾರದ ಸಿಗದೇ ಹೋಗಿದ್ದು ನೋವಿನ ಸಂಗತಿ ಎಂದು ಹೇಳಿದರು.

ಹಾಲಪ್ಪನವರು ರೈತರ ಪರ ಹೋರಾಡಿದ್ದಾರೆ. ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ಸವಲತ್ತು ಸಿಗುವಂತೆ ಮಾಡುತ್ತಿದ್ದಾರೆ. ಮುರುಳೀಧರ್ ಹಾಲಪ್ಪ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಭಾವಿಸಿದ್ದೆ. ಆದರೆ ಎಲ್ಲ ಪಕ್ಷ ಸುತ್ತಿ ಬಂದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಪರೋಕ್ಷವಾಗಿ ಮುದ್ದಹನುಮೇಗೌಡರ ಬಗ್ಗೆ ಹೇಳಿದರು. ಕಾಂಗೆಸ್ ಪಕ್ಷವೇ ಹಾಗೆ. ದುಡಿಯುವರಿಗೆ ಟಿಕೆಟ್ ನೀಡಲ್ಲ. ಇದು ನಮ್ಮ ವೈಯಕ್ತಿಕ ಅನುಭವವೂ ಕೂಡ ಎಂದರು.

ಕಾರ್ಯಕ್ರಮದಲ್ಲಿ ಬದರಿಕಾಶ್ರಮ ಮಠದ ಮಂಗಳಾನಾಥ ಸ್ವಾಮೀಜಿ, ಹಳ್ಳಿಕಾರ್ ಮಠದ ಬಾಲಕೃಷ್ಣ ಸ್ವಾಮೀಜಿ, ಎಸ್.ಬಿ.ಐ ವ್ಯವಸ್ಥಾಪಕ ಸುರೇಶ್ ಮುಖಂಡರಾದ ಪಂಚಾಕ್ಷರಿ, ಶಿವಾನಂದ್, ಸುಬ್ಬಣ್ಣ, ಕೃಷಿ, ತೋಟಗಾರಿಕೆ, ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ನೂರಾರು ರೈತರು ಇದ್ದರು.

click me!