ತಾಲೂಕಿನ ಸೊರವನಹಳ್ಳಿ ಗ್ರಾಪಂ ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಆಡಳಿತ ಮತ್ತು ಕಾಮಗಾರಿಗಳ ಕುರಿತು ಸೂಕ್ತ ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗಿದೆ ಎಂದು ಸೊರವನಹಳ್ಳಿ ಗ್ರಾಪಂ ನೋಡಲ್ ಅಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.
ತುರುವೇಕೆರೆ : ತಾಲೂಕಿನ ಸೊರವನಹಳ್ಳಿ ಗ್ರಾಪಂ ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಆಡಳಿತ ಮತ್ತು ಕಾಮಗಾರಿಗಳ ಕುರಿತು ಸೂಕ್ತ ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗಿದೆ ಎಂದು ಸೊರವನಹಳ್ಳಿ ಗ್ರಾಪಂ ನೋಡಲ್ ಅಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗ್ರಾಪಂ ಆವರಣದಲ್ಲಿ ನಡೆಸಲಾದ ಗ್ರಾಮಸಭೆಯಲ್ಲಿಮತ್ತು ಕೆಲವು ಗ್ರಾಪಂ ಸದಸ್ಯರೇ ಪಂಚಾಯ್ತಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರಿದ್ದಾರೆ. ಹಲವಾರು ಕಡೆ ಕಾಮಗಾರಿಗಳೇ ಆಗದೆ ಹಣ ಬಿಡುಗಡೆಯಾಗಿದೆ ಎಂದು ಆರೋಪಿಸಿದ್ದಾರೆ.
undefined
ಈ ಗ್ರಾಮ ಪಂಚಾಯ್ತಿಗೆ ಎಂಟತ್ತುಗಳು ಬಂದು ಹೋಗಿದ್ದಾರೆ. ಅವರು ಏನೇನು ಕಾಮಗಾರಿಗಳನ್ನು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅಧಿಕಾರಿಗಳು ಅಲ್ಲಿನ ಆಡಳಿತ ಮಂಡಳಿಗೂ ಸಹ ಸೂಕ್ತ ತಿಳುವಳಿಕೆ ನೀಡದೆ ವಂಚಿಸಿರುವ ಪ್ರಕರಣವೂ ಇರುವುದರಿಂದ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲು ತಾವು ಜಿಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡುವುದಾಗಿ ರವಿಕುಮಾರ್ ತಿಳಿಸಿದರು.
ತಗಾದೆ: ಸೊರವನಹಳ್ಳಿ ಗ್ರಾಪಂ ನಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಬೇಕೆಂದು ಮತ್ತು ಅವುಗಳ ಪ್ರಗತಿ ಕುರಿತಂತೆ ವಸ್ತುಸ್ಥಿತಿಯನ್ನು ಮಂಡಿಸಬೇಕೆಂದು ಹಲವಾರು ಮಂದಿ ಪಿಡಿಒ ಚಂದ್ರಶೇಖರ್‌ಗೆ ಆಗ್ರಹಿಸಿದರು. ಆ ಸಂಧರ್ಭದಲ್ಲಿ ಪಿಡಿಒ ಚಂದ್ರಶೇಖರ್ ತಾವು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ತಮ್ಮ ಅವಧಿಯಲ್ಲಾಗಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಹಲವು ಗ್ರಾಮಸ್ಥರು ಪ್ರತಿಯೊಬ್ಬ ಪಿಡಿಒಗಳು ಹೀಗೆ ಹೇಳಿದರೆ ಹೇಗೆ, ಪಂಚಾಯ್ತಿಯಿಂದ ಖರ್ಚು ಮಾಡಿರುವುದಕ್ಕೆ ದಾಖಲೆಗಳು ಇವೆ. ಲಕ್ಷಾಂತರ ರು. ಖರ್ಚು ಮಾಡಿರುವಾಗ ಕಾಮಗಾರಿ ಆಗಿರುವುದಕ್ಕೆ ಸೂಕ್ತ ದಾಖಲೆ ಇರಬೇಕಲ್ಲವೇ?. ದಾಖಲೆಗಳಲ್ಲಿರುವ ಕಾಮಗಾರಿ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಸಾರ್ವಜನಿಕರ ಸಮ್ಮುಖ ನಡೆಸಿ ಎಂದು ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿ ರವಿಕುಮಾರ್ ಅವರನ್ನು ಆಗ್ರಹಿಸಿದರು.
ಈ ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಎಸ್.ಸಿ.ಇಂದಿರಾ ಕೃಷ್ಣಸ್ವಾಮಿ ವಹಿಸಿದ್ದರು. ಉಪಾಧ್ಯಕ್ಷ ಆರ್.ಮಂಜುನಾಥ್, ಸದಸ್ಯರಾದ ಜಿ.ಗೋವಿಂದಯ್ಯ, ಮಹಾಲಿಂಗಪ್ಪ, ಎಸ್.ಡಿ.ಸಿದ್ದಗಂಗಮ್ಮ, ಮಹೇಶ್, ಜಯಲಕ್ಷ್ಮಮ್ಮ, ನೂರ್ ಆಯಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಭಟನೆ: ಸೊರವನಹಳ್ಳಿ ಗ್ರಾಪಂ ಗ್ರಾಮಸಭೆಯ ಪಕ್ಕದಲ್ಲೇ ಇದೇ ಗ್ರಾಮ ಪಂಚಾಯ್ತಿಯ ೮ ಸದಸ್ಯರು ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಗ್ರಾಮಸಭೆಯನ್ನು ವಿರೋಧಿಸಿ ಪ್ರತಿಟನೆ ನಡೆಸಿದರು. ಗ್ರಾಮಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಗ್ರಾಮಸಭೆ ನಡೆಸುವ ಸಂಬಂಧ ಯಾವುದೇ ಚರ್ಚೆ ಮಾಡಿಲ್ಲ. ಅಲ್ಲದೇ ವಾರ್ಡ್ ಸಭೆಯನ್ನು ಕರೆಯದೇ ಗ್ರಾಮಸಭೆ ಕರೆಯುವುದು ಸರಿಯಲ್ಲ ಎಂದು ಆರೋಪಿ ಪ್ರತಿಭಟನೆ ನಡೆಸಿದರು.
ಗ್ರಾಪಂ ನಲ್ಲಿ ಹಲವಾರು ಪಿಡಿಒ ಗಳು ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಬೇರೆಯವರಿಗೆ ಅಧಿಕಾರ ನೀಡುವ ಸಂಧರ್ಭದಲ್ಲಿ ಎನ್‌ಆರ್‌ಇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಾಗಿಲ್ಲ. ಎಲ್ಲ ಪಿಡಿಒಗಳೂ ಸಹ ಜವಾಬ್ದಾರಿಯಿಂದ ನುಳುಚಿಕೊಳ್ಳುತ್ತಿದ್ದಾರೆ. ಸೂಕ್ತ ದಾಖಲೆ ಕೇಳಿದರೆ ಸದಸ್ಯರ ವಿರುದ್ಧವೂ ಪಿತೂರಿ ನಡೆಸಿ ಅವರನ್ನು ಪೋಲಿಸ್ ಠಾಣೆಗೆ ಅಲೆಯುವಂತೆ ಮಾಡಲಾಗುತ್ತಿದೆ ಎಂದು ಸದಸ್ಯ ಸಂದೇಶ್ ದೂರಿದರು.
ಇಲ್ಲಿಯ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓ ರವರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಸದಸ್ಯರಿಗೆ ಗೌರವ ನೀಡುತ್ತಿಲ್ಲ ಸೂಕ್ತ ದಾಖಲಾತಿಗಳನ್ನೂ ಸಹ ನೀಡುತ್ತಿಲ್ಲ. ಯಾರಿಂದ ದಾಖಲೆ ಪಡೆಯಬೇಕೆಂಬ ಗೊಂದಲ ಕಾಡುತ್ತಿದೆ. ಸದಸ್ಯರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ತರಬೇತಿ ನೀಡಲಾಗುತ್ತಿದೆ. ಅದನ್ನೂ ಸಹ ಗೌಪ್ಯವಾಗಿಟ್ಟು ಇತರೆ ಸದಸ್ಯರನ್ನು ವಂಚಿಸಲಾಗುತ್ತಿದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನರಿಂದ ಆಯ್ಕೆಯಾಗಿರುವ ನಾವು ಜನರಿಗೆ ಉತ್ತರ ನೀಡಲು ಅಸಹಾಯಕರಾಗಿದ್ದೇವೆ ಎಂದು ಸಂದೇಶ್ ದೂರಿದರು.
ಗ್ರಾಮಪಂಚಾಯ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒ ಅ ಇದೇ ಪ್ರವೃತ್ತಿಯನ್ನು ಮುಂದುವರೆದಲ್ಲಿ ತಾಲೂಕು ಪಂಚಾಯ್ತಿ ಅಥವಾ ಜಿಲ್ಲಾ ಪಂಚಾಯ್ತಿಯ ಎದುರೇ ಪ್ರತಿಭಟನೆಯನ್ನು ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂದೇಶ್ ಎಚ್ಚರಿಸಿದರು.
ಆಗ್ರಹ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆಗಿರುವ ಎಲ್ಲಾ ಕಾಮಗಾರಿಗಳ ಕುರಿತು ತನಿಖೆ ನಡೆಸಬೇಕು. ತಪ್ಪಿತತ್ಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಸಹ ಸಂದೇಶ್ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸದಸ್ಯರಾದ ಮಹಾಲಕ್ಷ್ಮಮ್ಮ, ಸುಶೀಲಾ, ಎಸ್.ವಿ.ಸುರೇಶ್, ಬಾಲಾಜಿ, ಎನ್.ವಿ.ಶಶಿಕಲಾ, ಜಾಬೀರ್ ಹುಸೇನ್ ಮತ್ತು ಹೆಚ್.ಎಸ್.ಗೀತಾ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಒಂದೆಡೆ ಗ್ರಾಮ ಸಭೆ ನಡೆದರೆ, ಪಕ್ಕದಲ್ಲೇ ಗ್ರಾಮಪಂಚಾಯ್ತಿ ಸದಸ್ಯರೇ ಪ್ರತಿಭಟನೆ ನಡೆಸಿದ ಪರಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.