ಕಟ್ಟೆ ನಾಗನ ಕಾಮಪುರಾಣ, ಹೆಂಡತಿ ಸೌಮ್ಯಾಳ ಮುಂದೆ ಅನಾವರಣ; ಸೆಲ್ಫಿ ವಿಡಿಯೋ ಮಾಡಿಟ್ಟು ಪ್ರಾಣಬಿಟ್ಟ ಚೇತನ!

Published : Feb 24, 2026, 04:04 PM IST
Tumakuru Katte Nagaraju and Chethan

ಸಾರಾಂಶ

ತುಮಕೂರು ತಾಲೂಕಿನ ಯುವಕನೊಬ್ಬ, ವ್ಯಕ್ತಿಯೊಬ್ಬನ ಅಕ್ರಮ ಸಂಬಂಧವನ್ನು ಆತನ ಪತ್ನಿಗೆ ತಿಳಿಸಿದ್ದಕ್ಕೆ ಪ್ರಾಣ ಬೆದರಿಕೆ ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸಿದ್ದು, ಇದೀಗ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.

ತುಮಕೂರು (ಫೆ.24): ಗಂಡನ ಅಕ್ರಮ ಸಂಬಂಧದ ವಿಚಾರವನ್ನು ಆತನ ಹೆಂಡತಿಗೆ ತಿಳಿಸಿ ನ್ಯಾಯ ಕೊಡಿಸಲು ಹೋದ ಯುವಕನೊಬ್ಬ, ಪ್ರಾಣ ಬೆದರಿಕೆಗೆ ಹೆದರಿ ಆತ್ಮ*ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು ತಾಲೂಕಿನ ರಾಮೇನಹಳ್ಳಿಯಲ್ಲಿ ನಡೆದಿದೆ. ಸಾಯುವ ಮುನ್ನ ಯುವಕ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಬಿಚ್ಚಿಟ್ಟಿದ್ದಾನೆ.

ಘಟನೆಯ ಹಿನ್ನೆಲೆ:

ರಾಮೇನಹಳ್ಳಿ ಗ್ರಾಮದ ನಿವಾಸಿ ಚೇತನ್ (ಮೃತ ಯುವಕ) ಅದೇ ಗ್ರಾಮದ ಕಟ್ಟೆ ನಾಗರಾಜು ಎಂಬಾತನ ಅಕ್ರಮ ಸಂಬಂಧದ ಬಗ್ಗೆ ಆತನ ಪತ್ನಿ ಸುಮಾಗೆ ಮಾಹಿತಿ ನೀಡಿದ್ದನು. ಕಟ್ಟೆ ನಾಗರಾಜು ಮತ್ತೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರವನ್ನು ಚೇತನ್, ಸುಮಾಗೆ ತಿಳಿಸಿದ್ದರಿಂದ, ದಂಪತಿಗಳ ನಡುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಸುಮಾ, ಚೇತನ್ ತನಗೆ ಈ ವಿಚಾರ ತಿಳಿಸಿದ್ದಾಗಿ ಗಂಡನಿಗೆ ಹೇಳಿದ್ದಾಳೆ.

ಜೀವ ಬೆದರಿಕೆ ಮತ್ತು ಅವಮಾನ:

ತನ್ನ ಗುಟ್ಟು ರಟ್ಟಾದದ್ದಕ್ಕೆ ಕೆಂಡಾಮಂಡಲವಾದ ಕಟ್ಟೆ ನಾಗರಾಜು, ಚೇತನ್ ಮೇಲೆ ಎರಗಿ ಬಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪತ್ನಿ ಸುಮಾಳ ಮೊಬೈಲ್‌ನಿಂದಲೂ ಚೇತನ್‌ಗೆ ಬೆದರಿಕೆ ಸಂದೇಶಗಳು ಬಂದಿವೆ. 'ನನ್ನ ಗಂಡ ನಿನ್ನ ಕಾಲು ಮುರಿಯುತ್ತಾನೆ ಎಚ್ಚರ' ಎಂದು ಸಂದೇಶ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಆತ್ಮ*ಹತ್ಯೆಗೆ ಶರಣಾದ ಯುವಕ:

ಕಟ್ಟೆ ನಾಗನ ಬೆದರಿಕೆ ಹಾಗೂ ಮಾನಸಿಕ ಕಿರುಕುಳದಿಂದ ನೊಂದ ಚೇತನ್, ವಿಷಕಾರಿ ಮಾತ್ರೆಗಳನ್ನು ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ. ಮಾತ್ರೆ ಸೇವಿಸುವ ಮುನ್ನ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿರುವ ಆತ, ತನ್ನ ಸಾವಿಗೆ ಕಟ್ಟೆ ನಾಗರಾಜು ಹಾಗೂ ಆತನ ಪತ್ನಿಯೇ ಕಾರಣ ಎಂದು ವಿವರಿಸಿದ್ದಾನೆ. ಕೂಡಲೇ ಆತನನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಒಂದು ದಿನದ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಮೃತಪಟ್ಟಿದ್ದಾನೆ.

ಪೊಲೀಸರ ನಡೆಗೆ ಆಕ್ರೋಶ:

ಮಗನ ಸಾವಿನಿಂದ ಕಂಗಾಲಾದ ಚೇತನ್ ತಂದೆ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸುವ ಬದಲಿಗೆ ಕೇವಲ ಅಸ್ವಾಭಾವಿಕ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿರುವುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ‘ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕಟ್ಟೆ ನಾಗರಾಜನನ್ನು ರಕ್ಷಿಸುತ್ತಿದ್ದಾರೆ’ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಕ್ಕಾಗಿ ಎಸ್ಪಿ ಮೊರೆ:

ಹೆಬ್ಬೂರು ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಚೇತನ್ ಕುಟುಂಬಸ್ಥರು, ಇಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ದೂರು ನೀಡಿದ್ದಾರೆ. ಮಗನ ಸಾವಿಗೆ ಕಾರಣರಾದ ಕಟ್ಟೆ ನಾಗರಾಜು ಹಾಗೂ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಚೇತನ್ ಮಾಡಿದ ಸೆಲ್ಫಿ ವಿಡಿಯೋ ಈಗ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಪೊಲೀಸರು ಮುಂದಿನ ಕ್ರಮ ಏನೆಂದು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ; ಅಪಘಾತದಲ್ಲಿ ಬೈಕ್ ಸವಾರ ಸಾವು
ಚನ್ನಪಟ್ಟಣ ತಾಲೂಕಿನಲ್ಲಿ ಸಂಜೆ ಆದ್ರೆ ಸಾಕು ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟೋ ತಹಶೀಲ್ದಾರ್!