
ತುಮಕೂರು (ಏ.01): ನಡೆದಾಡುವ ದೇವರು, ಶ್ರೀ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮದಿನೋತ್ಸವದ ಸಂಭ್ರಮದ ನಡುವೆಯೇ ಮಠದಲ್ಲಿ ಇಂದು ಒಂದು ಅತ್ಯಂತ ವಿಷಾದನೀಯ ಘಟನೆ ಸಂಭವಿಸಿದೆ. ಶ್ರೀಗಳ ದರ್ಶನ ಪಡೆಯಲು ಹಾಗೂ ಗುರುವಂದನೆ ಸಲ್ಲಿಸಲು ಬಂದಿದ್ದ ಹಳೆಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಮಠದ ಆವರಣದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಯೂರು ಗ್ರಾಮದ ನಿವಾಸಿ ನಟರಾಜು (60 ವರ್ಷ) ಎಂದು ಗುರುತಿಸಲಾಗಿದೆ. ನಟರಾಜು ಅವರು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು, ಪರಮಪೂಜ್ಯ ಶಿವಕುಮಾರ ಶ್ರೀಗಳ ಮೇಲೆ ಅಪಾರ ಭಕ್ತಿ ಹೊಂದಿದ್ದರು. ಪ್ರತಿ ವರ್ಷ ಶ್ರೀಗಳ ಜನ್ಮದಿನೋತ್ಸವಕ್ಕೆ ಮಠಕ್ಕೆ ಆಗಮಿಸುತ್ತಿದ್ದ ಅವರು, ಈ ವರ್ಷವೂ ಕೂಡ ತಮ್ಮ ಇಬ್ಬರು ಸ್ನೇಹಿತರೊಂದಿಗೆ ನಿನ್ನೆ (ಶುಕ್ರವಾರ) ರಾತ್ರಿಯೇ ಮಠಕ್ಕೆ ಆಗಮಿಸಿದ್ದರು.
ಇಂದು ಮುಂಜಾನೆ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದಾಗ, ಶೌಚಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ನಟರಾಜು ಅವರಿಗೆ ಇದ್ದಕ್ಕಿದ್ದಂತೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಶ್ರೀಗಳ ಗದ್ದುಗೆಯ ಹಿಂಭಾಗದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಸಹಾಯಕ್ಕೆ ಧಾವಿಸಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಟರಾಜು ಅವರು ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದವರು. ಮಠದ ದಾಸೋಹ ಮತ್ತು ಶ್ರೀಗಳ ತತ್ವಗಳಿಂದ ಪ್ರೇರಿತರಾಗಿದ್ದ ಅವರು, ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಅವರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ (Heart Surgery) ಒಳಗಾಗಿದ್ದರು ಎನ್ನಲಾಗಿದೆ. ಆರೋಗ್ಯದ ಸಮಸ್ಯೆ ಇದ್ದರೂ ಸಹ ಶ್ರೀಗಳ ಮೇಲಿನ ಭಕ್ತಿಯಿಂದ ಮಠಕ್ಕೆ ಬಂದಿದ್ದರು. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ತಾವು ವಿದ್ಯಾಭ್ಯಾಸ ಮಾಡಿದ, ತಮಗೆ ಅನ್ನ ನೀಡಿದ ಮಠದ ಆವರಣದಲ್ಲೇ ಅವರು ಕೊನೆಯುಸಿರೆಳೆದಿರುವುದು ಮಠದ ಭಕ್ತರಲ್ಲಿ ಮತ್ತು ಅವರ ಸ್ನೇಹಿತರಲ್ಲಿ ಭಾರೀ ನೋವುಂಟು ಮಾಡಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶ್ರೀಗಳ ಜನ್ಮದಿನೋತ್ಸವದ ಪುಣ್ಯದಿನದಂದೇ ಭಕ್ತನೊಬ್ಬ ಮಠದ ಆವರಣದಲ್ಲಿ ಸಾವನ್ನಪ್ಪಿರುವುದು ಮಠಕ್ಕೆ ಬಂದಿದ್ದ ಇತರೆ ಭಕ್ತರಲ್ಲಿಯೂ ಕೂಡ ವಿಷಾದ ಮೂಡಿಸಿದೆ.