
ತುಮಕೂರು (ಮಾ.31): ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ರಕ್ತಸಂಬಂಧಗಳ ನಡುವಿನ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಒಡಹುಟ್ಟಿದ ತಮ್ಮನನ್ನೇ ಅಣ್ಣ ಚಾಕುವಿನಿಂದ ಇರಿದು ಕೊಂದಿದ್ದಾನೆ. ಇದರಲ್ಲಿ ಕುತೂಹಲದ ವಿಚಾರವೆಂದರೆ, ಮಗನ ಈ ಕ್ರೂರ ಕೃತ್ಯವನ್ನು ಮುಚ್ಚಿಹಾಕಲು ತಂದೆಯೂ ಸಾಥ್ ನೀಡಿದ್ದು, ಪೊಲೀಸರ ಮುಂದೆ ಸುಳ್ಳು ಕಥೆ ಕಟ್ಟಿದ್ದರು. ಆದರೆ, ಚಿಕಿತ್ಸೆ ನೀಡಿದ ವೈದ್ಯರ ಅನುಮಾನದಿಂದಾಗಿ ಅಸಲಿ ಕೊಲೆ ಪ್ರಕರಣ ಬಯಲಿಗೆ ಬಂದಿದೆ.
ಬನಶಂಕರಿ ನಿವಾಸಿ ಜಾನ್ ಪಾಲ್ ಎಂಬುವವರಿಗೆ ನವೀನ್ ಹಾಗೂ ಸ್ಟಾಲಿನ್ (29) ಎಂಬ ಇಬ್ಬರು ಮಕ್ಕಳಿದ್ದಾರೆ. ಕೊಲೆಯಾದ ಸ್ಟಾಲಿನ್ ತನ್ನ ಅಣ್ಣ ನವೀನ್‌ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸ್ವತಃ ಸ್ಟಾಲಿನ್ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಈ ಆರೋಪ ಮಾಡಿದ್ದು, ಮನೆಯಲ್ಲಿ ಕಿಡಿ ಹೊತ್ತಲು ಕಾರಣವಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 22ರಂದು ಅಣ್ಣ-ತಮ್ಮಂದಿರ ನಡುವೆ ಮನೆಯಲ್ಲೇ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ನವೀನ್ ಚಾಕುವಿನಿಂದ ತಮ್ಮ ಸ್ಟಾಲಿನ್‌ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸ್ಟಾಲಿನ್‌ನನ್ನು ತಂದೆ ಜಾನ್ ಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪೊಲೀಸರಿಗೆ ಮಾಹಿತಿ ನೀಡುವಾಗ ಜಾನ್ ಪಾಲ್ ಸತ್ಯ ಮರೆಮಾಚಿದ್ದರು. 'ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಟಾಲಿನ್ ಹೊಟ್ಟೆಗೆ ಗಾಯವಾಗಿದೆ' ಎಂದು ಸುಳ್ಳು ಕಥೆ ಹೇಳಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದರು.
ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಲಿನ್ ಕಳೆದ 6 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾ.28ರಂದು ಮೃತಪಟ್ಟಿದ್ದಾನೆ. ಈ ವೇಳೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೈದ್ಯರು, ಗಾಯದ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸತ್ಯ ಹೊರಬಂದಿದೆ. 'ಇದು ಆಕಸ್ಮಿಕವಾಗಿ ಬಿದ್ದು ಆದ ಗಾಯವಲ್ಲ, ಬದಲಾಗಿ ಹರಿತವಾದ ಆಯುಧದಿಂದ (ಚಾಕು) ಉದ್ದೇಶಪೂರ್ವಕವಾಗಿ ಇರಿದ ಗಾಯ' ಎಂದು ವೈದ್ಯರು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದಾರೆ.
ವೈದ್ಯರ ಹೇಳಿಕೆಯಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ತಂದೆ ಜಾನ್ ಪಾಲ್ ಹಾಗೂ ಅಣ್ಣ ನವೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಕ್ರಮ ಸಂಬಂಧದ ಶಂಕೆಯಿಂದ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಸದ್ಯ ಜಯನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಅಣ್ಣ ನವೀನ್ ಮತ್ತು ಸಾಕ್ಷಿ ನಾಶಕ್ಕೆ ಯತ್ನಿಸಿದ ತಂದೆ ಜಾನ್ ಪಾಲ್ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿಯಿಂದ ಸಂಸಾರ ನಡೆಸಬೇಕಿದ್ದ ಮನೆಯಲ್ಲಿ ಅಕ್ರಮ ಸಂಬಂಧದ ಶಂಕೆ ಒಂದು ಜೀವವನ್ನು ಬಲಿ ಪಡೆದಿದೆ.