ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ 'ವಿದ್ಯಾ ಕಾಫಿ' ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ!

Published : Mar 31, 2026, 06:50 PM IST
Chikkamagaluru Alduru Hospital

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ 'ವಿದ್ಯಾ ಕಾಫಿ' ಎಂಬ ಖಾಸಗಿ ಸಂಸ್ಥೆಯು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಮುಂದಾಗಿದೆ. ಸಂಸ್ಥೆಯು ಕೇವಲ ಎಂಟು ತಿಂಗಳಲ್ಲಿ ಆಸ್ಪತ್ರೆ ನಿರ್ಮಿಸುವುದಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದೆ.

ವರದಿ : ಆಲ್ದೂರು‌ ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.31): ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಸರ್ಕಾರ ಮತ್ತು ಜನಪ್ರತಿನಿಧಿಗಳೇ ಬೆರಗಾಗುವಂತಹ ಕೆಲಸಕ್ಕೆ ಕೈಹಾಕಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು 'ವಿದ್ಯಾ ಕಾಫಿ' ಸಂಸ್ಥೆ ಮುಂದೆ ಬಂದಿದ್ದು, ಇಂದು ನೂತನ ಕಟ್ಟಡಕ್ಕೆ ಅದ್ದೂರಿಯಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ.

ಮಾದರಿಯಾದ ವಿದ್ಯಾ ಕಾಫಿ ಸಂಸ್ಥೆ:

ಆಲ್ದೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಗೆ 'ವಿದ್ಯಾ ಕಾಫಿ ಮತ್ತು ಹರ್ಬ್ ಪ್ರೈವೆಟ್ ಲಿಮಿಟೆಡ್' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ಯಾಮ್ ಪ್ರಸಾದ್ ಹಾಗೂ ಅವರ ಪತ್ನಿ ವೀಣಾ ಶ್ಯಾಮ್ ಪ್ರಸಾದ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಉಪಸ್ಥಿತರಿದ್ದು, ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕೂಲಿ ಕಾರ್ಮಿಕರಿಗೆ ವರದಾನ:

ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶ್ಯಾಮ್ ಪ್ರಸಾದ್ ಅವರು, 'ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಬಡ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿದ್ದಾರೆ. ಅವರಿಗೆ ತುರ್ತು ಸಂದರ್ಭದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುವುದೇ ನಮ್ಮ ಗುರಿಯಾಗಿದೆ' ಎಂದು ತಿಳಿಸಿದರು. ಆಲ್ದೂರಿನ ಜನರ ಸಹಕಾರ ಮತ್ತು ಶಾಸಕಿಯರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

8 ತಿಂಗಳಲ್ಲಿ ಆಸ್ಪತ್ರೆ ಸಿದ್ಧ:

ಈ ಆಸ್ಪತ್ರೆ ನಿರ್ಮಾಣಕ್ಕೆ ಕೇವಲ ಎಂಟು ತಿಂಗಳ ಗಡುವು ವಿಧಿಸಿಕೊಳ್ಳಲಾಗಿದೆ. ಮುಂದಿನ ಸಂಕ್ರಾಂತಿ ಹಬ್ಬದ ವೇಳೆಗೆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ವಿಶೇಷವೆಂದರೆ, ಆಸ್ಪತ್ರೆಯನ್ನು ಕೇವಲ ನಿರ್ಮಿಸಿ ಕೊಡುವುದು ಮಾತ್ರವಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಕೂಡ ಸಂಸ್ಥೆಯೇ ವಹಿಸಿಕೊಳ್ಳಲಿದೆ. ವಿದ್ಯಾ ಕಾಫಿ ಸಂಸ್ಥೆಯು ಈಗಾಗಲೇ ಚಿಕ್ಕಮಗಳೂರಿನ ಹಿರೇಮಂಗಳೂರು ಮತ್ತು ಬೇಲೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟು ಜನೋಪಕಾರಿ ಕೆಲಸ ಮಾಡಿದೆ.

ಜಾಗತಿಕ ಮಟ್ಟದಲ್ಲಿ ವಿದ್ಯಾ ಕಾಫಿ:

ವಿದ್ಯಾ ಕಾಫಿ ಸಂಸ್ಥೆಯು ಇನ್‌ಸ್ಟಂಟ್ ಕಾಫಿ ಮತ್ತು ಗಿಡಮೂಲಿಕೆಯುಕ್ತ ಕಾಫಿ ಸಂಶೋಧನೆಯಲ್ಲಿ ತೊಡಗಿದ್ದು, ತನ್ನ ಉತ್ಪನ್ನಗಳನ್ನು ಅಮೆರಿಕ, ಯುರೋಪ್ ಮತ್ತು ಗಲ್ಫ್ ದೇಶಗಳಿಗೆ ರಫ್ತು ಮಾಡುತ್ತಿದೆ. ಈ ಸಂಸ್ಥೆಯ ಮೂಲಕ ನೂರಾರು ಜನರಿಗೆ ಉದ್ಯೋಗಾವಕಾಶ ದೊರೆತಿದೆ. ತಾವು ಗಳಿಸಿದ ಲಾಭದ ಒಂದು ಪಾಲನ್ನು ಸಮಾಜದ ಆರೋಗ್ಯ ಸುಧಾರಣೆಗೆ ಬಳಸುತ್ತಿರುವುದು ಆಲ್ದೂರು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗಣ್ಯರಿಂದ ಅಭಿನಂದನೆ:

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಆಸ್ಪತ್ರೆಯ ಅವಶ್ಯಕತೆಯನ್ನು ಶ್ಯಾಮ್ ಪ್ರಸಾದ್ ಅವರ ಗಮನಕ್ಕೆ ತಂದು ಅದನ್ನು ಸಾಕಾರಗೊಳಿಸಲು ಶ್ರಮಿಸಿದ ಜೋಸೆಫ್, ಭಾನುಪ್ರಕಾಶ್ ಮತ್ತು ತಂಡವನ್ನು ಅಭಿನಂದಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಶ್ವತ್ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ ಅವರು ಈ ಸುಸಜ್ಜಿತ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಆಗಲಿರುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಕುಟುಂಬದವರನ್ನು ವಿವಿಧ ಸಂಘಟನೆಗಳು ಮತ್ತು ಮಸೀದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಇಂತಹ ಖಾಸಗಿ ಸಂಸ್ಥೆಗಳು ಕೈಜೋಡಿಸಿದರೆ ಗ್ರಾಮಗಳ ಚಿತ್ರಣವೇ ಬದಲಾಗುವುದರಲ್ಲಿ ಸಂಶಯವಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ

PREV
Read more Articles on
click me!

Recommended Stories

ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು!
ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ