ಶಿವಮೊಗ್ಗದ ಕುಟುಂಬವೊಂದಕ್ಕೆ ತುಮಕೂರಿನ ವ್ಯಕ್ತಿಯೊಬ್ಬ ದೇವರಂತೆ ಕಾಣಿಸಿದ್ದಾನೆ. ಹಾಗೇ ಬಸ್ ನಲ್ಲಿ ಸಿಕ್ಕ ಒಡವೆ ಬ್ಯಾಗ್ ಅನ್ನು ಕುಟುಂಬಸ್ಥರಿಗೆ ಕಂಡಾಕ್ಟರ್ ಮರಳಿಸಿ ರಿಯಲ್ ಹೀರೋ ಆಗಿದ್ದಾರೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಅ.11): ದೇವರು ಇದ್ದಾನೋ, ಇಲ್ವೋ ಅನ್ನೋದನ್ನ ಯಾರೂ ನೋಡಿಲ್ಲ. ಆದ್ರೆ ಜನರು ಮಾತ್ರ ದೇವರು ಇದ್ದಾನೆ ಅನ್ನೋ ನಂಬಿಕೆಯನ್ನ ಬಿಟ್ಟಿಲ್ಲ. ಇನ್ನು ಕೆಲವು ಸಲ ಆ ದೇವರೇ ಮನುಷ್ಯನ ರೂಪದಲ್ಲಿ ಬಂದು ಸಹಾಯ ಮಾಡ್ತಾನೆ ಅನ್ನೋ ಮಾತು ಕೂಡ ಇದೆ. ಇಂಥದ್ದೇ ಎರಡು ಘಟನೆಗಳು ಇದೀಗ ತುಮಕೂರಿನಲ್ಲಿ ನಡೆದಿದೆ. ಶಿವಮೊಗ್ಗದ ಕುಟುಂಬವೊಂದಕ್ಕೆ ತುಮಕೂರಿನ ವ್ಯಕ್ತಿಯೊಬ್ಬ ದೇವರಂತೆ ಕಾಣಿಸಿದ್ದಾನೆ. ಹಾಗೇ ಬಸ್ ನಲ್ಲಿ ಸಿಕ್ಕ ಒಡವೆ ಬ್ಯಾಗ್ ಅನ್ನು ಕುಟುಂಬಸ್ಥರಿಗೆ ಕಂಡಾಕ್ಟರ್ ಮರಳಿಸಿ ರಿಯಲ್ ಹೀರೋ ಆಗಿದ್ದಾರೆ. ಶಿವಮೊಗ್ಗದ ವಿನೋಭಾ ನಗರದ ನಿವಾಸಿ ಅರ್ಪಿತಾ,. ಚಿಂತಾಮಣಿಯ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ಅರ್ಪಿತಾ ಅವರ ಇಡೀ ಕುಟುಂಬ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಂದಿತ್ತು. ಆದ್ರೆ ರೈಲು ಹತ್ತುವ ಭರದಲ್ಲಿ ಈ ಕುಟುಂಬ ಬ್ಯಾಗ್ ಮರೆತಿತ್ತು. ರೈಲು ಹೊರಡಲು ಮುಂದಾದಾಗ ಬ್ಯಾಗ್ ಇಲ್ಲದಿರೋದು ಗೊತ್ತಾಗಿದೆ. ಈ ಘಟನೆ ಇಡೀ ಕುಟುಂಬದ ಸಂಭ್ರಮವನ್ನು ಕಿತ್ತುಕೊಂಡಿತ್ತು. ಕಾರಣ ಆ ಬ್ಯಾಗ್ ನಲ್ಲಿ ಇದ್ದದ್ದು ಕೇವಲ ಬಟ್ಟೆಗಳಲ್ಲ, ಬದಲಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು.
ಶಿವಮೊಗ್ಗ ರೈಲ್ವೆ ನಿಲ್ದಾಣದ ಲಿಫ್ಟ್ ನಲ್ಲಿಯೇ ಅರ್ಪಿತಾ ಕುಟುಂಬ ಸುಮಾರು 300 ಗ್ರಾಂ ಚಿನ್ನದ ಒಡವೆಯಿದ್ದ ಬ್ಯಾಗನ್ನ ಮರೆತುಹೋಗಿತ್ತು. ಲಿಫ್ಟ್ ನಲ್ಲಿದ್ದ ಈ ಬ್ಯಾಗನ್ನ ಗಮನಿಸಿದ ತುಮಕೂರಿನ ಗುರುರಾಜ್, ರೈಲ್ವೆ ನಿಲ್ದಾಣದಲ್ಲಿಯೇ ವಾರಸುದಾರರನ್ನ ಹುಡುಕಿ ಅವರಿಗೆ ತಲುಪಿಸುವ ಪ್ರಯತ್ನ ಮಾಡಿದ್ರು. ಯಾರಾದರೂ ಗುರುತಿಸಿ ಕೇಳಬಹುದು ಅಂತಾ ಆ ಬ್ಯಾಗನ್ನ ಹಿಡಿದು ಟ್ರೈನ್ ನ ಬಹುತೇಕ ಭೋಗಿಗಳಲ್ಲಿ ಓಡಾಡಿದ್ರು. ಆದ್ರೆ ವಾರಸುದಾರರ ಸುಳಿವು ಮಾತ್ರ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ರೈಲು ಕೂಡ ಹೊರಟುಬಿಟ್ಟಿತ್ತು. ಹೀಗಾಗಿ ಈ ವಿಚಾರವನ್ನು ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿದ್ದ ರೈಲ್ವೆ ಪೊಲೀಸ್ ಗೆ ತಿಳಿಸಿ, ಯಾರಾದರೂ ಈ ಬ್ಯಾಗ್ ಹುಡುಕಿಕೊಂಡು ಬಂದರೆ ತನ್ನನ್ನು ಸಂಪರ್ಕಿಸಲು ಮೊಬೈಲ್ ನಂಬರ್ ನೀಡಿ ಅಲ್ಲಿಂದ ತುಮಕೂರಿಗೆ ಬಂದಿದ್ರು.
ಇನ್ನೊಂದೆಡೆ ಚಿನ್ನದ ಒಡವೆಗಳಿದ್ದ ಬ್ಯಾಗ್ ಕಳೆದುಕೊಂಡು ಅರ್ಪಿತಾ ಕುಟುಂಬ ಕಂಗಾಲಾಗಿತ್ತು. ಹೀಗಾಗಿ ಮುಂದಿನ ನಿಲ್ದಾಣದಲ್ಲಿಯೇ ಇಳಿದ ಅರ್ಪಿತಾ ಕುಟುಂಬ, ವಾಪಾಸ್ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿತ್ತು. ಈ ವೇಳೆ ಗುರುರಾಜ್ ಎಂಬುವವರಿಗೆ ಬ್ಯಾಗ್ ಸಿಕ್ಕಿರುವುದು ಗೊತ್ತಾಗಿತ್ತು. ಮತ್ತವರು ತುಮಕೂರಿನವರು ಅನ್ನೋ ವಿಚಾರ ಗೊತ್ತಾಗಿ ಒಬ್ಬ ರೈಲ್ವೆ ಪೊಲೀಸ್ ಜೊತೆ ಅರ್ಪಿತಾ ಕುಟುಂಬ ತುಮಕೂರಿಗೆ ಬಂದಿತ್ತು.
ನ್ಯಾಯಾಲಯದಲ್ಲಿ ಎಫ್ ಡಿಎ ಆಗಿ ಕೆಲಸ ಮಾಡುತ್ತಿರುವ ಗುರುರಾಜ್ ಅವರನ್ನು ಅಲ್ಲಿಯೇ ಭೇಟಿ ಮಾಡಿದ ಕುಟುಂಬದ ಸದಸ್ಯರು ಎಲ್ಲಾ ವಿಚಾರ ತಿಳಿಸಿದರು. ಬಳಿಕ ಅವರನ್ನ ಮನೆಗೆ ಕರೆದುಕೊಂಡು ಬಂದ ಗುರುರಾಜ್, ಅವರಿಂದ ಒಡವೆಗಳ ಮಾಹಿತಿ ಪಡೆದು, ಅವು ಸರಿಯಾಗಿವೆ ಅನ್ನೋದನ್ನ ಖಾತರಿಪಡಿಸಿಕೊಂಡು, ಆ ಬ್ಯಾಗನ್ನ ಅವರಿಗೆ ಹಿಂದುರುಗಿಸಿದರು. ಈ ವೇಳೆ ಭಾವುಕರಾದ ಅರ್ಪಿತಾ ದಂಪತಿ ಗುರುರಾಜ್ ಕಾಲಿಗೆ ಬಿದ್ದು ನಮಸ್ಕರಿಸಿದ್ರು.
ಮದುವೆಗೆ ಸಂಬಂಧಿಯಂತೆ ಬರ್ತಿದ್ದ; ಚಿನ್ನಾಭರಣ ಎಗರಿಸುತ್ತಿದ್ದ ನಯವಂಚಕ ನಯಾಜ್ ಖಾನ್!
ಬಸ್ ನಲ್ಲಿ ಸಿಕ್ಕ ಒಡವೆ ಬ್ಯಾಗ್ ವಾಪಸ್ ನೀಡಿದ ಕಂಡಾಕ್ಟರ್: ಇನ್ನೊಂದು ಕಡೆ ಬಸ್ ನಲ್ಲಿ ಸಿಕ್ಕ ಒಡವೆ ಬ್ಯಾಗ್ ಅನ್ನು ಮಾಲೀಕರಿಗೆ ಕಂಡಾಕ್ಟರ್ ಹಸ್ತಾಂತರಿಸಿ ಪ್ರಾಮಾಣಿಕತೆ ತೋರಿದ್ದಾರೆ. ಶ್ರೀಧರ್, ಪ್ರಾಮಾಣಿಕತೆ ಮೆರೆದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್, ಮಧುಗಿರಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಕಂಡಕ್ಟರ್ ಆಗಿರುವ ಶ್ರೀಧರ್, ಮಧುಗಿರಿಯಿಂದ ಬೆಂಗಳೂರಿಗೆ ಹೋಗುವಾಗ ಬಸ್ ನಲ್ಲಿ ಸಿಕ್ಕಿದ್ದ ಚಿನ್ನಾಭರಣವಿರುವ ಬ್ಯಾಗ್ ಸಿಕ್ಕಿತ್ತು. ಇರಕಸಂದ್ರ ಕಾಲೋನಿಯ ಲಲಿತಾ ಎಂಬುವರು ಬ್ಯಾಗ್ ಮರೆತು ಹೋಗಿದ್ದರು, ಬ್ಯಾಗ್ ನಲ್ಲಿ ಒಂದು ಜೊತೆ ಕಿವಿ ಓಲೆ, ಕಾಲ್ಗೆಜ್ಜೆ ಇತ್ತು. ಬಸ್ ನಲ್ಲಿ ಸಿಕ್ಕ ಬ್ಯಾಗ್ ಅನ್ನು ಕಳೆದುಕೊಂಡಿದ್ದ ಮಹಿಳೆಗೆ ಹಸ್ತಾಂತರ ಮಾಡಲಾಗಿದೆ.
ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ; 2.11 ಕೋಟಿ ರೂ. ಕಸಿದು ಪರಾರಿಯಾದ ದರೋಡೆಕೋರರು!
ಒಟ್ಟಿನಲ್ಲಿ ಮಾನವೀಯತೆ ಅನ್ನೋದು ಇಂದಿಗೂ ಜೀವಂತವಾಗಿದೆ ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ. ಕಳೆದುಕೊಂಡಿದ್ದ ಚಿನ್ನಾಭರಣ ಸಿಕ್ಕ ಖುಷಿಯಲ್ಲಿ ಅರ್ಪಿತಾ ಕುಟುಂಬ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ರೆ, ಬೇರೆಯವರ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಆತ್ಮತೃಪ್ತಿ ಗುರುರಾಜ್ ಕುಟುಂಬಕ್ಕೆ ಇದೆ.