
ತುಮಕೂರು (ಜು.30): ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರು ಹಾಗೂ ದೇವಿಹಳ್ಳಿ ಗ್ರಾಮಗಳಲ್ಲಿ ಹಲವು ದಿನಗಳಿಂದ ಜನರಲ್ಲಿ ಭೀತಿಯುಂಟುಮಾಡಿದ್ದ ಚಿರತೆ ಕೊನೆಗೂ ಅರಣ್ಯ ಅಧಿಕಾರಿಗಳ ಬಲೆಗೆ ಸಿಕ್ಕಿದೆ. ಇಂದು ಮಧ್ಯಾಹ್ನ ಏಕಾಏಕಿ ಗ್ರಾಮದೊಳಗೆ ನುಗ್ಗಿದ ಚಿರತೆ ಐವರ ಮೇಲೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಐವರಿಗೆ ಗಾಯ, ಗ್ರಾಮಸ್ಥರಲ್ಲಿ ಆತಂಕ:
ಸಂಜೆ 4 ಗಂಟೆ ಸುಮಾರಿಗೆ ಗೋಣಿತುಮಕೂರು ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಮೊದಲು ವನಜಾಕ್ಷಿ, ಹುಚ್ಚಮ್ಮ ಹಾಗೂ ಬೋರೆಗೌಡ ಎಂಬುವರ ಮೇಲೆ ದಾಳಿ ನಡೆಸಿತು. ಈ ವೇಳೆ ಗ್ರಾಮಸ್ಥರು ಚಿರತೆಯನ್ನು ಬೋರೆಗೌಡನ ಶೇಡ್‌ನಲ್ಲಿ ಕೂಡಿಹಾಕುವಲ್ಲಿ ಯಶಸ್ವಿಯಾದರು. ಆದರೆ ಕೇವಲ ಅರ್ಧ ಗಂಟೆಯಲ್ಲೇ ಶೇಡ್‌ನಿಂದ ಹೊರಬಂದ ಚಿರತೆ ದೇವಿಹಳ್ಳಿ ಗ್ರಾಮದತ್ತ ನುಗ್ಗಿ, ಅಲ್ಲಿನ ಲಿಂಗೇಗೌಡ ಹಾಗೂ ಶೇಖರ್ ಎಂಬುವರ ಮನೆಗೆ ಪ್ರವೇಶಿಸಿತು. ಮನೆಯೊಳಗಿದ್ದ ಶೇಖರ್ ಮೇಲೆ ಚಿರತೆ ದಾಳಿ ನಡೆಸಿದರೂ, ಅವರು ತಪ್ಪಿಸಿಕೊಂಡು ಚಿರತೆಯನ್ನು ಮನೆಯೊಳಗೆ ಕೂಡಿಹಾಕುವಲ್ಲಿ ಯಶಸ್ವಿಯಾದರು.
ಅರಣ್ಯ ಇಲಾಖೆಯ ಸೆರೆ ಕಾರ್ಯಾಚರಣೆ:
ಘಟನೆ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಪೊಲೀಸರು, ಅರವಳಿಕೆ ತಜ್ಞರು ಸಹ ಸ್ಥಳಕ್ಕೆ ಬಂದು ನೆರವಿಗೆ ನಿಂತರು. ರಾತ್ರಿ ಹತ್ತು ಗಂಟೆ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ತಜ್ಞರು ಚಿರತೆಗೆ ಅರವಳಿಕೆ ಮದ್ದು ನೀಡಿ, ಸುರಕ್ಷಿತವಾಗಿ ಸೆರೆಹಿಡಿದರು. ಚಿರತೆ ಸೆರೆಯಾದ ಸುದ್ದಿ ತಿಳಿದ ತಕ್ಷಣ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಶೇಖರ್ ಅವರ ಮನೆ ಬಳಿ ಜಮಾಯಿಸಿ ಚಿರತೆಯನ್ನು ನೋಡಲು ತೊಡಗಿದರು. ಐವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೂಕ್ತ ಸ್ಥಳಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಗೊಳ್ಳದಂತೆ ಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.