
ತುಮಕೂರು (ಜೂ.26): ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಹೊರ ರಾಜ್ಯಕ್ಕೆ ತೆರಳಿರುವುದು ಈ ಕಠಿಣ ಕ್ರಮಕ್ಕೆ ಕಾರಣವಾಗಿದೆ.
ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ (PSI) ಸಾಗರ್ ಅಸ್ಕಿ, ಎಎಸ್ಐ (ASI) ಚಂದ್ರಶೇಖರ್, ಮತ್ತು ಪೊಲೀಸ್ ಕಾನ್ಸ್ಟೇಬಲ್ ರಂಗಧಾಮಯ್ಯ ಅವರು ಅಮಾನತುಗೊಂಡ ಅಧಿಕಾರಿಗಳು. ಕೇಂದ್ರ ವಲಯ ಐಜಿಪಿ ಗಿರೀಶ್ ಅವರು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಣವನ್ನು ರಿಕವರಿ ಮಾಡುವ ಉದ್ದೇಶದಿಂದ ಎಎಸ್ಐ ಚಂದ್ರಶೇಖರ್ ಮತ್ತು ಕಾನ್ಸ್ಟೇಬಲ್ ರಂಗಧಾಮಯ್ಯ ಅವರು ಪಿಎಸ್ಐ ಸಾಗರ್ ಅಸ್ಕಿ ಅವರ ಸೂಚನೆಯಂತೆ ಅಸ್ಸಾಂಗೆ ತೆರಳಿದ್ದರು. ಅಲ್ಲಿಗೆ ಹೋಗಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಆದರೆ, ಈ ಕಾರ್ಯಾಚರಣೆಯ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಎಎಸ್ಪಿ (ASP) ಅಥವಾ ಡಿವೈಎಸ್‌ಪಿ (DySP) ಅವರಿಗೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡಿರಲಿಲ್ಲ.
ಹುಳಿಯಾರು ಪೊಲೀಸರು ಅಸ್ಸಾಂನಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಾಗ, ಈ ಬಗ್ಗೆ ಅಸ್ಸಾಂ ಪೊಲೀಸರು ತುಮಕೂರು ಎಸ್‌ಪಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಇಲಾಖೆಯ ಸಿಬ್ಬಂದಿ ತಮ್ಮ ಗಮನಕ್ಕೆ ತರದೆ ಹೊರ ರಾಜ್ಯಕ್ಕೆ ತೆರಳಿರುವುದು ಎಸ್‌ಪಿ ಅವರಿಗೆ ತಿಳಿದುಬಂದಾಗ ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿರುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ, ಐಜಿಪಿ ಅವರು ಈ ಮೂವರನ್ನು ಅಮಾನತುಗೊಳಿಸಿದ್ದಾರೆ.