ತುಮಕೂರು: ನವದಂಪತಿ ದೇವಾಲಯ ಪ್ರವೇಶಿಸಿದ್ದಕ್ಕೆ ಮೈ ಮೇಲೆ ದೇವರು ಬಂದಂತೆ ನಟಿಸಿ ಜಾತಿ ನಿಂದನೆ, ನ್ಯಾಯಕೊಡಿಸಿದ ತಹಶೀಲ್ದಾರ್ ಅಹಮದ್

Published : Feb 24, 2026, 04:25 PM IST
tumakuru

ಸಾರಾಂಶ

ತುಮಕೂರಿನ ಗೋಣಿತುಮಕೂರಿನಲ್ಲಿ ದೇವಾಲಯ ಪ್ರವೇಶಿಸಿದ ದಲಿತ ನವದಂಪತಿಗಳ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಉಂಟಾದ ಉದ್ವಿಗ್ನತೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯ ಮೂಲಕ ಬಗೆಹರಿಸಲಾಯಿತು.

ತುಮಕೂರು: ದೇವಾಲಯಕ್ಕೆ ಪ್ರವೇಶಿಸಿದ ದಲಿತ ನವದಂಪತಿಗಳ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ತುರುವೆಕೆರೆ ತಾಲೂಕಿನ ಗೋಣಿತುಮಕೂರಿನಲ್ಲಿ ಉಂಟಾಗಿದ್ದ ಉದ್ವಿಗ್ನತೆಗೆ ತಾಲ್ಲೂಕು ಆಡಳಿತ ಶಾಂತಿ ಸಭೆ ನಡೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ತುರುವೇಕೆರೆ ತಹಶೀಲ್ದಾರ್ ಎಂ.ಎನ್. ಕುಂಞಿ ಅಹಮದ್ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು. ಈ ಸಭೆಯಲ್ಲಿ ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು, ಸಾರ್ವಜನಿಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪ್ರತಿನಿಧಿಗಳು ಭಾಗವಹಿಸಿದ್ದರು.

ಘಟನೆ ಹಿನ್ನೆಲೆ

ಗೋಣಿ ತುಮಕೂರು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯಕ್ಕೆ ದಲಿತ ಸಮುದಾಯಕ್ಕೆ ಸೇರಿದ ನವದಂಪತಿಗಳು ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ನಾರಾಯಣಪ್ಪ ಎಂಬ ವ್ಯಕ್ತಿ, ಮೈ ಮೇಲೆ ದೇವರು ಬಂದಿದೆ ಎಂದು ನಟನೆ ಮಾಡುತ್ತಾ, ದಲಿತರು ದೇವಾಲಯ ಪ್ರವೇಶಿಸಿದ್ದಾರೆ ಎಂದು ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ದಲಿತರು ದೇವಾಲಯ ಪ್ರವೇಶಿಸಿರುವುದರಿಂದ ಪುಣ್ಯ ಮಾಡಿಸಬೇಕು ಎಂಬ ಅವಮಾನಕಾರಿ ಹೇಳಿಕೆ ನೀಡಿ, ಸಮಾಜದ ಒಂದು ವರ್ಗದ ಧಾರ್ಮಿಕ ಹಾಗೂ ಮಾನವೀಯ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೆ ದೂರು

ಈ ಘಟನೆದಿಂದ ಮನನೊಂದ ನವದಂಪತಿಗಳು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಾಮಾಜಿಕ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಕಂಡುಬಂದ ಕಾರಣ, ತಾಲೂಕು ಆಡಳಿತವೇ ಮಧ್ಯ ಪ್ರವೇಶ ಮಾಡಿತು.

ಶಾಂತಿ ಸಭೆ

ತಹಶೀಲ್ದಾರ್ ಎಂ.ಎನ್. ಕುಂಞಿ ಅಹಮದ್ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ, ಗ್ರಾಮದಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆ, ಜಾತಿ ಭೇದಭಾವ ಅಥವಾ ಸಮಾಜವನ್ನು ವಿಭಜಿಸುವ ಆಚರಣೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಲಾಯಿತು.

ಸಭೆಯ ಬಳಿಕ, ತಹಶೀಲ್ದಾರ್ ಅವರ ಸಮ್ಮುಖದಲ್ಲೇ ದಲಿತ ನವದಂಪತಿಗಳು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮದ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಎಲ್ಲರ ಸಮ್ಮುಖದಲ್ಲೇ ತಹಶೀಲ್ದಾರ್ ಎಂ.ಎನ್. ಕುಂಞಿ ಅಹಮದ್ ಸಹಿತ  ಪೂಜಾ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿತು.

ತಹಶೀಲ್ದಾರ್ ಎಚ್ಚರಿಕೆ

ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಅವರು, “ಯಾವುದೇ ರೂಪದ ಅಸ್ಪೃಶ್ಯತೆ ಅಥವಾ ಜಾತಿ ನಿಂದನೆ ಕಾನೂನಿನ ಪ್ರಕಾರ ಅಪರಾಧ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರಕರಣಕ್ಕೆ ಸುಖಾಂತ್ಯ

ತಾಲ್ಲೂಕು ಆಡಳಿತದ ಸಮಯೋಚಿತ ಮಧ್ಯಸ್ಥಿಕೆ, ಶಾಂತಿ ಸಭೆ ಹಾಗೂ ದೇವಾಲಯದಲ್ಲಿ ನವದಂಪತಿಗಳಿಂದ ನಡೆದ ಪೂಜಾ ಕಾರ್ಯಕ್ರಮದೊಂದಿಗೆ ಪ್ರಕರಣಕ್ಕೆ ಸುಖಾಂತ್ಯ ಹಾಡಲಾಯಿತು. ಈ ಮೂಲಕ ಗ್ರಾಮದಲ್ಲಿ ಇದ್ದ ಸಮುದಾಯಗಳ ನಡುವಿನ ಕಂದಕಕ್ಕೆ ತೆರೆ ಬಿದ್ದಿದೆ.

PREV
Read more Articles on
click me!

Recommended Stories

ಕಟ್ಟೆ ನಾಗನ ಕಾಮಪುರಾಣ, ಹೆಂಡತಿ ಸೌಮ್ಯಾಳ ಮುಂದೆ ಅನಾವರಣ; ಸೆಲ್ಫಿ ವಿಡಿಯೋ ಮಾಡಿಟ್ಟು ಪ್ರಾಣಬಿಟ್ಟ ಚೇತನ!
ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ; ಅಪಘಾತದಲ್ಲಿ ಬೈಕ್ ಸವಾರ ಸಾವು