ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಮಹಿಳಾ ಮತಗಟ್ಟೆ, ಎರಡು ಯುವ ಮತದಾರರ ಮತಗಟ್ಟೆಮತ್ತು ವಿಶೇಷ ಚೇತನರಿಗಾಗಿ ಒಂದು ಮತಗಟ್ಟೆಯನ್ನು ಕಡ್ಡಾಯವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು : ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಮಹಿಳಾ ಮತಗಟ್ಟೆ, ಎರಡು ಯುವ ಮತದಾರರ ಮತಗಟ್ಟೆಮತ್ತು ವಿಶೇಷ ಚೇತನರಿಗಾಗಿ ಒಂದು ಮತಗಟ್ಟೆಯನ್ನು ಕಡ್ಡಾಯವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ-2023ರ ಸಂಬಂಧವಾಗಿ ಮಂಗಳವಾರ ನಡೆದ ವಿವಿಧ ನೋಡೆಲ್ ಅಧಿಕಾರಗಳ ಸಮನ್ವಯ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಹಿಳಾ ಸಿಬ್ಬಂದಿ, ಯುವ ಮತದಾರರ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಯುವ ಸಿಬ್ಬಂದಿಯನ್ನು ನೇಮಿಸುವಂತೆ ನೋಡೆಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಸೂಚಿಸಿದರು.
ಒಟ್ಟು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 55 ಮಹಿಳಾ ಮತಗಟ್ಟೆಗಳು, 22 ಯುವ ಮತದಾರರ ಮತಗಟ್ಟೆಗಳು ಮತ್ತು ವಿಶೇಷ ಚೇತನರಿಗಾಗಿ 11 ಮತಗಟ್ಟೆಇರುವಂತೆ ನೋಡಿಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಪೂರೈಸುವ ಚುನಾವಣಾ ಸಾಮಗ್ರಿಗಳ ಪಟ್ಟಿತಯಾರಿಸುವಂತೆ ಹಾಗೂ ಚುನಾವಣಾ ಸಾಮಾಗ್ರಿಗಳನ್ನು ಪಡೆಯಲು ಹಾಗೂ ವಿಧಾನಸಭಾ ಕ್ಷೇತ್ರವಾರು ವಿಂಗಡಿಸಲು ತಂಡಗಳ ರಚನೆ ಮಾಡುವಂತೆ ನೋಡೆಲ್ ಅಧಿಕಾರಿ ಹಾಗೂ ಜಂಟಿನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚಿಸಿದರು.
ಚುನಾವಣಾ ದಿನ ಅವಶ್ಯವಿರುವ ವಾಹನಗಳ ಪಟ್ಟಿಸಿದ್ಧಪಡಿಸಿ, ವಾಹನಗಳನ್ನು ವಿಧಾನಸಭಾವಾರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ನೊಡೆಲ್ ಅಧಿಕಾರಿ ಹಾಗೂ ಸಾರಿಗೆ ಅಧಿಕಾರಿ ರಾಜು ಅವರಿಗೆ ಸೂಚಿಸಿದರು. ಚುನಾವಣಾ ಆಯೋಗದ ತಂತ್ರಾಂಶಗಳಾದ ಸುವಿಧಾ, ಸಮಾಧಾನ, ಎನ್ ಕೋರ್(ಮತ ಎಣಿಕೆ) ಬಗ್ಗೆ ಸಿಬ್ಬಂದಿಯನ್ನು ತರಬೇತಿಗೊಳಿಸುವುದು ಮತ್ತು ಸ್ವೀಪ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿದಿನ ಅಪ್‌ಡೇಟ್ ಮಾಡುವುದು, ಡಿಇಓ ವೆಬ್‌ಸೈಟ್, ಟ್ವೀಟರ್ ಖಾತೆ ಅಪ್‌ಡೇಟ್ ಮಾಡುವಂತೆ ನೋಡೆಲ್ ಅಧಿಕಾರಿ ಹಾಗೂ ಎನ್.ಐ.ಸಿ.ಅಧಿಕಾರಿ ಅಜಯ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡಿರುವ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಂಟ್ರೋಲ್ ರೂಮ್ ಸ್ಥಾಪಿಸಿ : ಡೀಸಿ
ಚುನಾವಣಾ ವೆಚ್ಚ ತಂಡ ನಿರ್ವಹಿಸಲು ಅಗತ್ಯವಾದ ನಮೂನೆಗಳು ಹಾಗೂ ರಿಜಿಸ್ಟರ್‌ಗಳು, ಸಿಡಿ, ಡಿವಿಡಿ ಸಮರ್ಪಕ ನಿರ್ವಹಣೆ, ಅಂಚೆ ಮತಪತ್ರಕ್ಕೆ ಸಂಬಂಧಿಸಿದಂತೆ ನಮೂನೆ-12 ಹಾಗೂ ನಮೂನೆ-12ಎ ಗಳ ಅವಶ್ಯಕತೆಯ ಅನುಗುಣವಾಗಿ ಸಂಗ್ರಹಿಸುವುದು, ಅಂಚೆ ಮತಪತ್ರಗಳ ಎಣಿಕೆಗೆ ಸಿಬ್ಬಂದಿ ತರಬೇತಿ, ವಿಧಾನಸಭಾವಾರು ವೆಬ್ ಕಾಸ್ಟಿಂಗ್‌ಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಮ್ ಸ್ಥಾಪಿಸುವುದು, ವಿಧಾನಸಭಾವಾರು ದೋಷ ರಹಿತ ಮತಪಟ್ಟಿತಯಾರಿಸಲು ಅವಶ್ಯಕ ಕ್ರಮಕೈಗೊಳ್ಳುವುದು, ಮತದಾರರಿಗೆ ಚುನಾವಣೆಯ ದಿನ ಸಹಾಯವಾಣಿ ತೆರೆಯಲು ಅವಶ್ಯಕ ಕ್ರಮಕೈಗೊಳ್ಳುವುದು, ಚುನಾವಣೆ ವೀಕ್ಷಕರ ಶಿಷ್ಟಾಚಾರಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸುವುದು, ವಿಶೇಷ ಚೇತನ ಮತದಾರರ ಅನುಕೂಲಕ್ಕಾಗಿ ವೀಲ್ ಚೇರ್ ಇತ್ಯಾದಿಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.