
ಮಂಗಳೂರು: ತುಳು ನಾಟಕ ಮತ್ತು ಚಿತ್ರರಂಗದ ಮಟ್ಟಿಗೆ ನಂಬರ್ ವನ್ ಹಾಸ್ಯ ಕಲಾವಿದ ಅಂತಾನೇ ಫೇಮಸ್ ಆಗಿರೋ ಅರವಿಂದ ಬೋಳಾರ್ ಅವರ ಭಾಷಣದ ತುಣುಕೊಂದು ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವಿವಾದ ಎಬ್ಬಿಸಿದ್ದು, ತುಳುನಾಡಿನಲ್ಲಿ ಅವರ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಅರವಿಂದ ಬೋಳಾರ್ ಮಾತನಾಡಿರೋ ಕೆಲವೇ ಸೆಕೆಂಡ್ ಗಳ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ತುಳು ಭಾಷೆಯಲ್ಲಿ ಮಾಡಿರೋ ಈ ಭಾಷಣ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ವೈರಲ್ ಆಗಿರೋ ಭಾಷಣದಲ್ಲಿ ಅರವಿಂದ್ ಬೋಳಾರ್, ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು ಎಂದಿರೋ ಬಗ್ಗೆ ಹಲವರು ಆಕ್ಷೇಪ ಎತ್ತಿದ್ದಾರೆ.
ಕಲಾವಿದರೊಬ್ಬರನ್ನ ಬೆಳೆಸಲು ಸರ್ವ ಧರ್ಮದ ಅಭಿಮಾನಿ ವರ್ಗ ಕಾರಣ. ಹೀಗಿರೋವಾಗ ಅರವಿಂದ್ ಬೋಳಾರ್ ಒಂದು ಸಮುದಾಯದ ಓಲೈಕೆಗಾಗಿ ಭಾಷಣ ಮಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ಎತ್ತಲಾಗಿದೆ. ಅಲ್ಲದೇ ಕೆಲವರು ಅರವಿಂದ್ ಬೋಳಾರ್ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಈ ಹೇಳಿಕೆ ಸರಿಯೇ ಎಂದು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಭಾಷಣದ ಸಣ್ಣ ತುಣುಕು ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ. ಕೆಲವರು ಅರವಿಂದ್ ಬೋಳಾರ್ ಅವರ ಸೌಹಾರ್ದ ಭಾಷಣ ಎಂದು ನಟನ ಪರವಾಗಿ ಬ್ಯಾಟ್ ಬೀಸಿದ್ರೆ ಮತ್ತೆ ಕೆಲವರು ತೀವ್ರ ಅಸಮಾಧಾನ ತೋರಿದ್ದಾರೆ.
ಖಾಸಗಿ ಕಾರ್ಯಕ್ರಮದ ಅರವಿಂದ್ ಬೋಳಾರ್ ಅವರ ಭಾಷಣದ ಸಣ್ಣ ತುಣುಕು ಮಾತ್ರ ವೈರಲ್ ಆಗಿದ್ದು, ಅದರಲ್ಲಿ ಅವರು ತುಳುವಿನಲ್ಲೇ ಭಾಷಣ ಮಾಡಿದ್ದಾರೆ. ನನ್ನ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಮರ ಪಾತ್ರ ಮಾಡಿಸಿದ್ದಾರೆ. ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು. ನನ್ನನ್ನ ಹೆಚ್ಚು ಇಷ್ಟ ಪಟ್ಟಿದ್ದೇ ಮುಸ್ಲಿಮರು. ನಾನು ಯಾವ ವೇದಿಕೆಯಲ್ಲಿ ಕೇಳಿದ್ರೂ ಅದನ್ನೇ ಹೇಳಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಅಭಿಮಾನಿ: ಇದು ಅರವಿಂದ್ ಬೋಳಾರ್ ಅವರ ನಂಬರ್ ಅಲ್ವಾ? ಅವರೇ ಮಾತನಾಡೋದಾ?
ಅರವಿಂದ್ ಬೋಳಾರ್: ಹಾ ಹೌದು, ನಾನೇ ಮಾತನಾಡೋದು ಹೇಳಿ
ಅಭಿಮಾನಿ: ನಾನು ಕುಂಬ್ಲೆಯಿಂದ ಮಾತನಾಡ್ತಾ ಇದೀನಿ, ನಾನು ನಿಮ್ಮ ದೊಡ್ಡ ಅಭಿಮಾನಿ, ನೀವು ಒಳ್ಳೆಯ ಕಲಾವಿದ ಅಂತ ನನ್ನ ಮನಸ್ಸಿನಲ್ಲಿ ಇತ್ತು. ಆದರೆ ಯಾವುದೋ ವೇದಿಕೆಯಲ್ಲಿ ಮುಸ್ಲಿಮರ ಓಲೈಕೆ ಮಾಡಲು ಹೋಗಿ ನನಗೆ ಮುಸ್ಲಿಮರೇ ಮೊದಲು ಅಂತ ಹೇಳ್ತೀರಿ. ಆ ವಿಡಿಯೋ ವೈರಲ್ ಆಗ್ತಾ ಇದೆ. ಅದನ್ನ ನಿಮಗೆ ವಾಟ್ಸಪ್ ಮಾಡಿದ್ದೇನೆ. ಆದರೆ ಯಾಕೆ ನೀವು ಹಾಗೆ ಹೇಳಿದ್ದು, ಒಬ್ಬ ಕಲಾವಿದನಾಗಿ ಎಲ್ಲಾ ಧರ್ಮ ನನಗೆ ಒಂದೇ ಎಂದು ಹೇಳಿದ್ದರೆ ಚೆನ್ನಾಗಿತ್ತು.
ಅರವಿಂದ್ ಬೋಳಾರ್: ಅವರು ಸಿನಿಮಾಗಾಗಿ ನನ್ನತ್ರ ಹೇಳಿಸೋದು. ಅದು ಸಿನಿಮಾ ಗಾಗಿ ಮಾತ್ರ, ರಂಗಭೂಮಿಗಲ್ಲ. ಸಿನಿಮಾ ನೋಡೋದು ಹೆಚ್ಚು ಅವರೇ.
ಅಭಿಮಾನಿ: ಅಣ್ಣಾ ನಿಮ್ಮ ಸಮರ್ಥನೆ ಸರಿ, ಆದರೆ ಕಲಾವಿದರಿಗೆ ಎಲ್ಲಾ ಧರ್ಮದವರೂ ಸಮಾನವಲ್ವಾ? ವೇದಿಕೆಯಲ್ಲಿ ನೀವು ಹಾಗೆ ಹೇಳಿ ನಮಗೆ ಹಿಂದೂಗಳಿಗೆ ಠಕ್ಕರ್ ಕೊಡೋದಾ?
ಅರವಿಂದ್ ಬೋಳಾರ್: ಒಕೆ ಅಣ್ಣಾ...ನೀವು ಹೇಳಿದ್ದು ಅರ್ಥ ಆಯ್ತು...
ಅಭಿಮಾನಿ: ನೀವು ಹೇಳಿದ್ದು ಸರಿ ಅಂತ ಸಮರ್ಥನೆ ಮಾಡ್ತೀರಾ?
ಅರವಿಂದ್ ಬೋಳಾರ್: ಇಲ್ಲಪ್ಪ, ನಾನು ಸರಿ ಅಂತ ಹೇಳಿದ್ನಾ?
ಅಭಿಮಾನಿ: ಸರಿ ಎನ್ನಬೇಡಿ. ನೀವು ಕಲಾವಿದ, ನಿಮ್ಮನ್ನ ಹೃದಯದಲ್ಲಿ ಇಡ್ತೀವಿ. ಆ ಮಾತು ಕೇಳಿ ಹಿಂದೂವಾಗಿ ನನಗೆ ನೋವಾಗಿದೆ. ನೀವೊಬ್ಬ ಗೌರವಾನ್ವಿತ ಕಲಾವಿದ. ನಾನು ಮಾಡಿದ್ರೆ ಅದು ಅಪಮಾನ ಅಲ್ವಾ? ನೀವು ಕ್ಷಮೆ ಕೇಳಿ, ನಾನು ಅಭಿಮಾನದಿಂದ ನಿಮಗೆ ಹೇಳ್ತಾ ಇದೀನಿ. ಇನ್ನು ನನಗೆ ಅಭಿಮಾನ ಇಲ್ಲ.
ಕಲಾಸೇವೆಗೆ ಜಾತಿ, ಧರ್ಮದ ಹಂಗಿಲ್ಲ. ಹಾಗಾಗಿಯೇ ಕಲಾವಿದರು ರಾಜಕೀಯ ನಾಯಕರಂತೆ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದೂ ಇಲ್ಲ. ಇದೇ ಕಾರಣಕ್ಕೆ ತುಳುನಾಡಿನ ಕಲಾವಿದರು ತಮ್ಮ ಪ್ರತೀ ಭಾಷಣಗಳಲ್ಲೂ ಸರ್ವ ಧರ್ಮದ ಕಲಾಭಿಮಾನಿ ಬಂಧುಗಳೇ ಎಂದೇ ಭಾಷಣ ಆರಂಭಿಸುತ್ತಾರೆ. ಈ ಭಾಗದಲ್ಲಿ ಇತ್ತೀಚೆಗೆ ತುಳು ಚಿತ್ರರಂಗ ಒಂದು ಹಂತಕ್ಕೆ ಎದ್ದು ನಿಂತಿದ್ದರೂ ಹಲವು ವರ್ಷಗಳಿಂದ ಈ ಭಾಗದ ಅತೀ ದೊಡ್ಡ ಮನೋರಂಜನೆ ತುಳು ನಾಟಕಗಳು. ದೇವದಾಸ್ ಕಾಪಿಕಾಡ್, ನವೀನ್ .ಡಿ.ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು ಸೇರಿ ಹಲವು ದಿಗ್ಗಜ ಕಲಾವಿದರು ತುಳು ನಾಟಕಗಳ ಮೂಲಕವೇ ಮನೆ ಮಾತಾದವರು.
ಇಂದು ಸಿನಿಮಾಗಳ ಮೂಲಕವೂ ಮತ್ತಷ್ಟು ಮನೆ ಮನಗಳನ್ನ ತಲುಪಿದವರು. ಕರಾವಳಿಯ ಕೋಮುವಾದ ಈ ಭಾಗದಲ್ಲಿ ಜನರ ಮನಸ್ಸುಗಳನ್ನು ಒಡೆದಾಗಲೂ ತುಳು ನಾಟಕಗಳು ಅವುಗಳನ್ನು ಜೋಡಿಸುವ ಪ್ರಯತ್ನಗಳನ್ನ ಮಾಡಿವೆ ಮತ್ತು ಮಾಡುತ್ತಲೇ ಇವೆ. ಇನ್ನು ಈ ಭಾಗದ ಕಲಾವಿದರೂ ಅಷ್ಟೇ, ಕಲಾಸೇವೆಯಲ್ಲಿ ಈವರೆಗೆ ಜಾತಿ, ಧರ್ಮ ಹಾಗೂ ರಾಜಕೀಯ ನಂಟನ್ನು ಸೇರಿಸೋ ಕೆಲಸ ಮಾಡಿಲ್ಲ. ಹಾಗಾಗಿಯೇ ಈ ಭಾಗದ ತುಳು ಕಲಾವಿದರಿಗೆ ಸಿಗುವ ಗೌರವ, ವೇದಿಕೆಗಳಿಗೆ ಕೋಮುವಾದ ಸ್ಪರ್ಶಿಸಿಲ್ಲ.
ಬ್ಯಾರಿ, ಕ್ರಿಶ್ಚಿಯನ್, ಹಿಂದೂ ಎನ್ನದೇ ಎಲ್ಲಾ ಧರ್ಮ, ಭಾಷೆಗಳ ಮಧ್ಯೆ ಗೌರವಯುತ ಸ್ಥಾನ ಪಡೆದವರು ಈ ಭಾಗದ ಕಲಾವಿದರು ಮಾತ್ರ. ಯಾವುದೇ ವೇದಿಕೆಗಳಲ್ಲಿ ಸರ್ವ ಧರ್ಮದ ಕಲಾಭಿಮಾನಿ ಬಂಧುಗಳೇ ಎನ್ನುವುದೇ ಇವರುಗಳ ಗೌರವಪೂರ್ಣಕ ಮಾತು. ಆದರೆ ಸದ್ಯ ಅರವಿಂದ್ ಬೋಳಾರ್ ಆಡಿರುವ ಮಾತು ಹಲವು ಕಾರಣಗಳಿಗೆ ವಿವಾದದ ಜೊತೆಗೆ ಪರ ವಿರೋಧದ ವೇದಿಕೆ ಸೃಷ್ಟಿಸಿದೆ. ಸೀಮಿತ ಮಾರುಕಟ್ಟೆ ಮತ್ತು ಭಾಷೆಯ ಜನರಿರುವ ತುಳುವಿನ ಸಿನಿಮಾ ಮತ್ತು ನಾಟಕಗಳಿಗೆ ಸರ್ವಧರ್ಮದ ವೀಕ್ಷಕರಿದ್ದಾರೆ.
ಕಲಾವಿದರ ಜಾತಿ, ಧರ್ಮಗಳ ಮೇಲೆ ಇಲ್ಲಿ ಅಭಿಮಾನಿಗಳು ಹುಟ್ಟಿಲ್ಲ. ಆತನ ಕಲೆ ಮತ್ತು ಪ್ರತಿಭೆಗೆ ಸಿಕ್ಕ ಅತ್ಯಮೂಲ್ಯ ಉಡುಗೊರೆಗಳಾಗಿ ಇಲ್ಲಿ ಅಭಿಮಾನಿಗಳಿದ್ದಾರೆ. ಅದನ್ನ ಈ ಭಾಗದ ಕಲಾವಿದರೂ ಅತ್ಯಂತ ಸೂಕ್ಷ್ಮವಾಗಿ ಉಳಿಸಿಕೊಂಡು ಬಂದಿದ್ದಾರೆ. ಮುಂದೆಯೂ ಉಳಿಸಿಕೊಂಡು ಹೋಗಲಿದ್ದಾರೆ ಎನ್ನುತ್ತಾರೆ ವಿವಾದಗಳಿಂದ ದೂರವಿರುವ ಅಭಿಮಾನಿಗಳು. ಆದರೆ ಸದ್ದಿಲ್ಲದೇ ಏಳುವ ಇಂಥಹ ಕೆಲವೊಂದು ವಿವಾದಗಳು ಅನಗತ್ಯ ಚರ್ಚೆಗಳ ಜೊತೆ ಕಲಾಸೇವೆಯಲ್ಲಿ ಮತ್ತೊಂದು ಆಯಾಮದ ಗದ್ದಲ ಹುಟ್ಟಿ ಹಾಕುತ್ತವೆ ಎನ್ನುವುದು ವಾಸ್ತವ. (ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು)