ತಾರಕಕ್ಕೇರಿದ ಹಾಲಿ, ಮಾಜಿ ಶಾಸಕರ ಗುದ್ದಾಟ

By Kannadaprabha News  |  First Published Mar 16, 2021, 12:45 PM IST

ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. 


ವರದಿ : ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಮಾ.16): ತಾಪಂ, ಜಿಪಂ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಜಿಲ್ಲೆಯ ರಾಜಕಾರಣದ ದಿಕ್ಕು ದಿಸೆ ಬದಲಾಗುತ್ತಿದೆ. ಚುನಾವಣೆಗಳಲ್ಲಿ ಸೋತ ಹಾಗೂ ಗೆದ್ದವರು ಸಕ್ರಿಯ ರಾಜಕಾರಣಕ್ಕೆ ಮರಳಿದ್ದು, ಪರಸ್ಪರ ತಮ್ಮ ಎದುರಾಳಿಗಳ ವೈಫಲ್ಯಗಳ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರುವ ಪರಿಣಾಮ ರಾಜಕಾರಣ ಹಾದಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

Tap to resize

Latest Videos

ಹೌದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಸಾಲ ವಿತರಣೆ ವಿಚಾರದಲ್ಲಿ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಹಾಲಿ, ಮಾಜಿ ಶಾಸಕರ ನಡುವೆ ಮುಸುಕಿನ ಗುದ್ದಾಟ ತಾರಕ್ಕೇರಿ ಪರಸ್ಪರ ಬೀದಿ ಕಾಳಗ ಸೃಷ್ಟಿಸುವ ವಾತಾವರಣಕ್ಕೆ ಬಂದು ನಿಂತಿದೆ.

ಡಿಸಿಸಿ ಬ್ಯಾಂಕ್‌ ಸ್ತ್ರೀಶಕ್ತಿ ಸಂಘಗಳಿಗೆ ನೀಡುವ ಸಾಲ ವಿತರಣೆ ಮಾಜಿ ಶಾಸಕರ ಮನೆಯಲ್ಲಿ ನಡೆಯುತ್ತಿದೆಯೆಂದು ಚಿಂತಾಮಣಿ ಹಾಲಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ಅವರ ಬೆಂಬಲಿಗರು ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ವಿರುದ್ಧ ಕಿಡಿಕಾರುತ್ತಿದ್ದರೆ ಇತ್ತ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಹಾಗೂ ಬೆಂಬಲಿಗರು ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಶಾಸಕರ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆಯೆಂದು ಆರೋಪಿಸುವ ಮೂಲಕ ಪರಸ್ಪರ ಹಾಲಿ, ಮಾಜಿ ಶಾಸಕರ ಬೆಂಬಲಿಗರು ಕಾಲಳೆದುಕೊಳ್ಳುವ ಮೂಲಕ ರಾಜಕೀಯ ಕೆಸರು ಎರಚಾಟದಲ್ಲಿ ತೊಡಗಿರುವುದು ಎದ್ದು ಕಾಣುತ್ತಿದೆ.

ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ .

ಪರ, ವಿರುದ್ಧ ಪ್ರತಿಭಟನೆಗೆ ವೇದಿಕೆ:

ಡಿಸಿಸಿ ಬ್ಯಾಂಕ್‌ ಸಾಲ ವಿತರಣೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ. ಸಾಲ ವಿತರಣೆ ವೇಳೆ ಸ್ತ್ರಿಶಕ್ತಿ ಸಂಘಗಳನ್ನು ಮನೆಗೆ ಕರೆಸಿಕೊಂಡು ತಮಗೆ ಮತ ನೀಡುವಂತೆ ಅಣೆ ಪ್ರಮಾಣ ಮಾಡಿಸಲಾಗುತ್ತಿದೆಯೆಂಬ ಗಂಭೀರ ಆರೋಪ ನಡೆಸಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಹಾಗೂ ಅಧ್ಯಕ್ಷರ ಧೋರಣೆ ಖಂಡಿಸಿ ಚಿಂತಾಮಣಿಯಲ್ಲಿ ಮಾ.6ರಂದು ಶಾಸಕ ಜೆಕೆ ಕೃಷ್ಣಾರೆಡ್ಡಿ ಬೆಂಬಲಿಗರು ಡಿಸಿಸಿ ಬ್ಯಾಂಕ್‌ ಎದುರು ಭಾರಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲೇ ಶಾಸಕ ಜೆಕೆ ಕೃಷ್ಣಾರೆಡ್ಡಿ ವಿರುದ್ಧ ಪ್ರತಿಭಟನೆಗೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಬೆಂಬಲಿಗರು ಸಜ್ಜಾಗುತ್ತಿದ್ದಾರೆ. ಮಂಗಳವಾರ ನಗರದಲ್ಲಿ ಶಾಸಕರ ವಿರುದ್ಧ ಸುಧಾಕರ್‌ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಚಿಂತಾಮಣಿ ಕ್ಷೇತ್ರದ ರಾಜಕೀಯ ಸಂಘರ್ಷ ಜಿಲ್ಲೆಯ ರಾಜಕೀಯ ವಲಯದ ಗಮನ ಸೆಳೆದಿದ್ದು, ಕ್ಷೇತ್ರದ ಹಾಲಿ, ಮಾಜಿ ಶಾಸಕರಿಬ್ಬರು ಸೇರಿ ಡಿಸಿಸಿ ಬ್ಯಾಂಕ್‌ನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ಕೂಡ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಹಾಲಿ, ಮಾಜಿ ಶಾಸಕರ ರಾಜಕೀಯ ಕದನ ಮುಂಬರುವ ತಾಪಂ, ಜಿಪಂ ಚುನಾವಣೆಗಳ ಘೋಷಣೆ ವೇಳೆಗೆ ಇನ್ನೂ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇಂದು ಸುಧಾಕರ್‌ ಬೆಂಬಲಿಗರ ಪ್ರತಿಭಟನೆ:

ಮಾ.6ರಂದು ಶಾಸಕ ಜೆಕೆ ಕೃಷ್ಣಾರೆಡ್ಡಿ ಬೆಂಬಲಿಗರು ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆಯಲ್ಲಿ ಪಕ್ಷಪಾತ ಧೋರಣೆ ಅನುರಿಸಲಾಗುತ್ತಿದೆಯೆಂದು ಆರೋಪಿಸಿ ಭಾರಿ ಪ್ರತಿಭಟನೆ ನಡೆಸಿ ಡಿಸಿಸಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ದರು. ಇದೀಗ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಬೆಂಬಲಿಗರು ಶಾಸಕರ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ಚಿಂತಾಮಣಿ ತಾಲೂಕು ಕಚೇರಿಯ ಮುಂದೆ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಭದ್ರತೆ ಆಯೋಜಿಸಲಾಗಿದೆ.

click me!