ಶೃಂಗೇರಿ ತಾಲೂಕಿನಾದ್ಯಂತ ಸೋಮವಾರವೂ ಗಾಳಿ ಮಳೆಯ ಅಬ್ಬರ ಮುಂದುವರಿದಿತ್ತು. ನಿರಂತರವಾಗಿ ಅಬ್ಬರಿಸುತ್ತಿರುವ ಮಳೆ ಸೋಮವಾರವೂ ಎಡಬಿಡದೆ ಸುರಿಯಿತು. ಗಾಳಿಯ ಆರ್ಭಟಕ್ಕೆ ಬೃಹತ್ ಮರಗಳು ಧರಗುರುಳಿ ಬೀಳುತ್ತಿವೆ. ತುಂಗಾನದಿಯ ಉಗಮಸ್ಥಾನ ಪಶ್ಚಿಮಘಟ್ಟಗಳ ತಪ್ಪಲಿನ ಕೆರೆಕಟ್ಟೆಸುತ್ತಮುತ್ತ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಚಿಕ್ಕಮಗಳೂರು(ಆ.0)6: ಶೃಂಗೇರಿ ತಾಲೂಕಿನಾದ್ಯಂತ ಸೋಮವಾರವೂ ಗಾಳಿ ಮಳೆಯ ಅಬ್ಬರ ಮುಂದುವರಿದಿತ್ತು. ಭಾನುವಾರದಿಂದ ನಿರಂತರವಾಗಿ ಅಬ್ಬರಿಸುತ್ತಿರುವ ಮಳೆ ಸೋಮವಾರವೂ ಎಡಬಿಡದೆ ಸುರಿಯಿತು. ಗಾಳಿಯ ಆರ್ಭಟಕ್ಕೆ ಬೃಹತ್ ಮರಗಳು ಧರಗುರುಳಿ ಬೀಳುತ್ತಿವೆ.
ಭಾನುವಾರ ಹಗಲು ರಾತ್ರಿ ಧಾರಾಕಾರ ಮಳೆ ಸುರಿಯಿತು. ತುಂಗಾನದಿಯ ಉಗಮಸ್ಥಾನ ಪಶ್ಚಿಮಘಟ್ಟಗಳ ತಪ್ಪಲಿನ ಕೆರೆಕಟ್ಟೆಸುತ್ತಮುತ್ತ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ನೀರು ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಸೋಮವಾರ ಬೆಳಗಿನಿಂದಲೇ ಬಿಡುವಿಲ್ಲದೇ ಮಳೆ ಸುರಿಯುತ್ತಿರುವುದರಿಂದ ನೀರಿನ ಮಟ್ಟಹೆಚ್ಚಿ, ತಗ್ಗುಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು.
ಭಾನುವಾರ ರಾತ್ರಿಯಿಂದ ಗಾಳಿ ಮಳೆಯ ಅಬ್ಬರಕ್ಕೆ ತಾಲೂಕಿನ ವಿವಿಧೆಡೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮೀಣ ಪ್ರದೇಶದ ಹಲವೆಡೆ ಭಾನುವಾರ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ಶೃಂಗೇರಿ ತ್ಯಾವಣ ಗಡಿಕಲ್ಲು ಬಳಿ ಬೃಹತ್ ಮರವೊಂದು ರಸ್ತೆಯ ಮೇಲೆ ಉರುಳಿಬಿದ್ದ ಪರಿಣಾಮ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಜಯಪುರ ಎಲೆಮಡ್ಲು ಬಳಿ ನಾಲ್ಕೈದು ಮರಗಳು ರಸ್ತೆಗೆ ಉರುಳಿಬಿದ್ದಿದ್ದರಿಂದ ಬೆಂಗಳೂರು, ಚಿಕ್ಕಮಗಳೂರು, ಬಾಳೆಹೊನ್ನೂರು, ಕಡೆಯಿಂದ ಶೃಂಗೇರಿಗೆ ಬರುವ ವಾಹನಗಳು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.
ಈ ವರ್ಷದಲ್ಲಿ ಸುರಿದ ಮಳೆಗಾಳಿಯ ಅಬ್ಬರ ಇದಾಗಿದ್ದು, ತಾಲೂಕಿನಾದ್ಯಂತ ಕೆಲವೆಡೆ ಮರಗಳು ಉರುಳಿ ಬೀಳುತ್ತಿರುವುದರಿಂದ ಹಾನಿ ಸಂಭವಿಸುತ್ತಿದೆ. ಗಾಳಿಯ ಅಬ್ಬರಕ್ಕೆ ಅಡಕೆ, ಬಾಳೆತೋಟಗಳಲ್ಲಿಯೂ ಮರಗಳು ಧರೆಗುರುಳಿ ವ್ಯಾಪಕ ಹಾನಿ ಸಂಭವಿಸುತ್ತಿದೆ.
ಸೋಮವಾರ ಸಂಜೆಯವರೆಗೂ ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತ, ನೀರು ಅಪಾಯದ ಮಟ್ಟಮೀರಿ ಹರಿಯುತ್ತಿತ್ತು. ಕೆರೆ, ಕಾಲುವೆ, ಹಳ್ಳ, ಕಿರುನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸೋಮವಾರ ಸಂಜೆಯವರೆಗೂ ಮಳೆಯ ಅಬ್ಬರ ಮುಂದುವರಿದಿತ್ತು.