* ಸಾರಿಗೆ ಇಲಾಖೆ ನೌಕರರ ವೇತನ ಪ್ರತಿ ತಿಂಗಳು ಜಮೆ
* ದೇಶದ ಅಭಿವೃದ್ಧಿಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಧಾನಿ ಮೋದಿ
* ರಾಜ್ಯದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ
ಚಿಕ್ಕೋಡಿ(ಸೆ.26): ಸಾರಿಗೆ ಇಲಾಖೆಗೆ(KSRTC) ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಹೊಸ ಬಸ್ ಕೊಡುವ ವ್ಯವಸ್ಥೆಯನ್ನು ಉತ್ತರ ಕರ್ನಾಟಕದ ಗಡಿ ಭಾಗಕ್ಕೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು(Sriramulu) ಹೇಳಿದ್ದಾರೆ.
ಶನಿವಾರ ತಾಲೂಕಿನ ನವಲಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿಕ್ಕೋಡಿ ಪ್ರಾದೇಶಿಕ ಕಚೇರಿಯಿಂದ ಆರಂಭಿಸುತ್ತಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಸಾರಿಗೆ ನೌಕರರು ಈ ಹಿಂದೆ ಕೈಗೊಂಡಿದ್ದ ಮುಷ್ಕರದಿಂದ ಅಮಾನತ್ತುಗೊಂಡಿದ್ದ ಸಾರಿಗೆ ಇಲಾಖೆ ನೌಕರರನ್ನು ಹಂತ, ಹಂತವಾಗಿ ಮತ್ತೆ ಸೇವೆಗೆ ತೆಗೆದುಕೊಳ್ಳಲಾಗುವುದು. ಸಾರಿಗೆ ಇಲಾಖೆ ನೌಕರರ ವೇತನವನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮೆ ಮಾಡಲಾಗುವುದು. ಆದ್ದರಿಂದ ಸಾರಿಗೆ ಇಲಾಖೆಯ ನೌಕರರು ಸಾರ್ವಜನಿಕರಿಗೆ ತೊಂದರೆಯಾಗಂತೆ ಪಾರದರ್ಶಕ ಆಡಳಿತ ನೀಡಲು ಎಲ್ಲರೂ ಕರ್ತವ್ಯ ನಿರ್ವಹಿಸಲು ಬದ್ಧರಾಗಬೇಕೆಂದು ತಿಳಿಸಿದರು.
ಸ್ಥಗಿತವಾದ ಕಡೆ ಬಸ್ ಸಂಚಾರ : ಶಾಲಾ-ಕಾಲೇಜು ಮಾರ್ಗಕ್ಕೆ ಆದ್ಯತೆ
ಪ್ರಧಾನಿ ಮೋದಿ(Narendra Modi) ದೇಶದ ಅಭಿವೃದ್ಧಿಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಹಿನ್ನಲ್ಲೆಯಲ್ಲಿ ಸಾರಿಗೆ ಇಲಾಖೆಯಲ್ಲಿ ವಿನೂತವಾದ ಕಾರ್ಯ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಇಲಾಖೆಯಲ್ಲಿ ಪರಿಸರ ಸ್ನೇಹಿ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಯಲ್ಲೂ ವಾಹನ ಸದೃಢತೆ ಪರೀಕ್ಷಾ (ವ್ಹೇಕಲ್ ಪಿಟ್‌ನೆಸ್) ಕೇಂದ್ರ ಹಾಗೂ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಪರಿಸರಕ್ಕೆ ಹಾನಿಯಾಗುವ ವಾಹನಗಳನ್ನು ಗುಜರಿಗೆ ಹಾಕಬೇಕು ಎನ್ನುವ ಕಾಯ್ದೆ ಕೇಂದ್ರ ಸರ್ಕಾರದಿಂದ ಜಾರಿಗೆ ತರಲಾಗಿದೆ. ವಾಹನ ಚಾಲನೆ ಮಾಡದೇ ಇರುವವರು ಲೈಸನ್ಸ್ ಪಡೆದುಕೊಂಡು ಹೆದ್ದಾರಿಯಲ್ಲಿ ವಾಹನ ಓಡಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸಂಪೂರ್ಣ ಗಣಕೀಕೃತ ಮತ್ತು ಆನಲೈನ್ ಮುಖಾಂತರ ಸಲ್ಲಿಸಿ ಸ್ವಯಂ ವಾಹನ ಚಾಲನಾ ಪರೀಕ್ಷಾ ಪಥ ವಾಹನ ಚಾಲನೆ ಮಾಡುವ ಮೂಲಕವೇ ವಾಹನ ಚಾಲನಾ ಪ್ರಮಾಣ ಪತ್ರ ನೀಡಲಾಗುವುದು ಈ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಪ್ರಥಮ ಬಾರಿಗೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಯಲ್ಲಿ ಜಿಲ್ಲಾ ಮಟ್ಟದ ಸಾರಿಗೆ ಇಲಾಖೆ ಕಚೇರಿ ಆರಂಭಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ವಜಾಗೊಂಡ 4,200 ಸಾರಿಗೆ ನೌಕರರ ಮರುನೇಮಕ!
ಚಿಕ್ಕೋಡಿಯಲ್ಲಿ ಸಾರಿಗೆ ಇಲಾಖೆಯಿಂದ 9 ಕೋಟಿ ರು. ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಹಿಂದೆ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಆರ್‌ಟಿಪಿಸಿಆರ್ ಘಟಕಕ್ಕೆ ಮಂಜೂರು ನೀಡಿರುವುದನ್ನು ಸ್ಮರಿಸಿದರು.
ಬೆಳಗಾವಿ(Belagavi) ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ. ಶೋಭಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ., ಹುಬ್ಬಳ್ಳಿ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿ ಮುಖ್ಯ ಕಾಮಗಾರಿ ಅಭಿಯಂತರ ಎಚ್.ಎಂ.ನಾಗರಾಜಮೂರ್ತಿ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಗ್ರಾಪಂ ಅಧ್ಯಕ್ಷ ದೀಪಾಲಿ ಬುರುಡ, ವಿಜಯ ಪಾಡೀಲ, ಬಾಬು ಮಿರ್ಜೆ, ಕುಮಾರ ಪಾಟೀಲ, ಬಾಳಗೌಡ ಜಯಪ್ಪಗೋಳ, ಮಾರುತಿ ಸಾಮ್ರಾಣಿ, ರವಿ ಬೆಂದೂರ, ವಿದ್ಯಾಧರ ಕಾಗೆ, ವಿಜಯ ಪಾಟೀಲ ಇದ್ದರು.