ವಿರಾಜಪೇಟೆ (ಸೆ.26): ಅಳಿವಿನಂಚಿನಲ್ಲಿರುವ ವನ್ಯಜೀವಿ ಚಿಪ್ಪು ಹಂದಿ ( Pangolin)ಯನ್ನು ಅಕ್ರಮವಾಗಿ ಹಿಡಿದು ಮಾರಾಟಕ್ಕೆ ಯತ್ನಿಸುತಿದ್ದ ಮೂವರನ್ನು ವಿರಾಜಪೇಟೆ ಸಿಐಡಿ (CID) ಪೊಲೀಸ್ ಅರಣ್ಯ ಘಟಕ ಸಿಬ್ಬಂದಿ ಬಂಧಿಸಿದ್ದಾರೆ.
ಸೋಮವಾರಪೇಟೆ ಹಮ್ಮಿಯಾಲ ಗ್ರಾಮದ ನಿವಾಸಿ ಕೆ.ರಾಮಪ್ಪ (28,) ಸಕಲೇಶಪುರ ಹೊಸಕೋಟೆ ಮಗ್ಗೆ ಗ್ರಾಮ ನಿವಾಸಿ ಎಲ್. ವಸಂತ್ ಕುಮಾರ್ (39) ಮತ್ತು ಹಾಸನ (Hassan) ಜಿಲ್ಲೆಯ ಅಲೂರು ಹೊಸಕೋಟೆಯ ನಿವಾಸಿ ಕೆ.ಬಿ. ಸುರೇಶ್ (39) ಬಂಧಿತರು.
ಮೈಸೂರಿನಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ.
ಶುಕ್ರವಾರ ಮುಂಜಾನೆ ಆರೋಪಿಗಳು ಜೊತೆಯಾಗಿ ಹಮ್ಮಿಯಾಲ ಕುಶಾಲನಗರ ಮಾರ್ಗವಾಗಿ ಮಾರುತಿ ವ್ಯಾನ್ ವಾಹನದಲ್ಲಿ ಕೇರಳ ರಾಜ್ಯಕ್ಕೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಖಚಿತ ಮಾಹಿತಿ ಆಧರಿಸಿ ಅಮ್ಮತ್ತಿ ಬಳಿಯಲ್ಲಿ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ವಾಹನ ತಪಸಾಣೆ ಮಾಡಿದಾಗ ವಾಹನದಲ್ಲಿ ಚೀಲವೊಂದರಲ್ಲಿ ಇರಿಸಲಾಗಿದ್ದ ಅಳವಿನಂಚಿನಲ್ಲಿರುವ ವನ್ಯಜೀವಿಯಾದ ಪೆಂಗೋಲಿನ್ ಪತ್ತೆಯಾಗಿದೆ.
ಇದಕ್ಕೆ ಅಂತಾರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರಾಟ ಮಾಡುವ ಉದ್ದೇಶದಿಂದ ಕಳ್ಳ ಸಾಗಾಣಿಕೆ ಮಾಡುತ್ತಿದ್ದರೆಂಬುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಅರಣ್ಯ ಸಂಚಾರಿ ದಳದ ಸಿಬ್ಬಂದಿ ತಿಳಿಸಿದ್ದಾರೆ. ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕದ ಪೊಲೀಸ್ ಮಹಾ ನಿರೀಕ್ಷಕರಾದ ಕೆ.ವಿ. ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ (Forest Department) ಪೊಲೀಸ್ ಅಧೀಕ್ಷಕರಾದ ಎಸ್. ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕರಾದ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನಾ ಮತ್ತು ಎಸ್.ಎಂ. ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.