ಸಂಚಾರ ನಿಯಮ ಉಲ್ಲಂಘನೆ: ಆ್ಯಪ್‌ನಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ದೂರು

By Kannadaprabha NewsFirst Published Feb 21, 2020, 7:52 AM IST
Highlights

ರಾಜಧಾನಿ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ನಾಗರಿಕರೇ ಕಣ್ಣಿಟ್ಟಿದ್ದು, ಪ್ರತಿ ದಿನ ‘ಪಬ್ಲಿಕ ಐ ಆ್ಯಪ್‌’ನಲ್ಲಿ ಸಂಚಾರ ನಿಯಮ ಮೀರಿದ 417 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು(ಫೆ.21): ರಾಜಧಾನಿ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ನಾಗರಿಕರೇ ಕಣ್ಣಿಟ್ಟಿದ್ದು, ಪ್ರತಿ ದಿನ ‘ಪಬ್ಲಿಕ ಐ ಆ್ಯಪ್‌’ನಲ್ಲಿ ಸಂಚಾರ ನಿಯಮ ಮೀರಿದ 417 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಐದು ವರ್ಷಗಳ ಹಿಂದೆಯೇ ಸಂಚಾರ ಕಾನೂನು ಪಾಲನೆ ಮಾಡುವವರ ಬಗ್ಗೆ ಫೋಟೋ ಕ್ಲಿಕಿಸಿ ದೂರು ನೀಡುವ ಆ್ಯಪ್‌ ಅನ್ನು ಸಂಚಾರ ಪೊಲೀಸರು ಬಿಡುಗಡೆಗೊಳಿಸಿದ್ದು, 2019ರಲ್ಲಿ 1.52 ಲಕ್ಷ ದೂರುಗಳು ಸಲ್ಲಿಕೆಯಾಗಿದೆ. ಈ ಅಂಕಿ-ಸಂಖ್ಯೆಗಳ ವಿಶ್ಲೇಷಿಸಿದಾಗ ಪ್ರತಿ ದಿನ ಸರಾಸರಿ 417 ದೂರುಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಫ್ಟ್‌ವೇರ್‌ ಕಂಪನಿಗಳಿಗೆ ಹಂದಿ ಜ್ವರ ಭೀತಿ! ಆಫೀಸ್‌ಗೆ ಬೀಗ

ನೋ ಪಾರ್ಕಿಂಗ್‌, ದೋಷಯುಕ್ತ ನಂಬರ್‌ ಪ್ಲೇಟ್‌, ಏಕಮುಖ ಸಂಚಾರ, ಫುಟ್‌ಪಾತ್‌ ಮೇಲೆ ವಾಹನ ಚಾಲನೆ, ಚಾಲನೆ ವೇಳೆ ಮೊಬೈಲ್‌ ಬಳಕೆ, ತ್ರಿಬಲ್‌ ರೈಡಿಂಗ್‌, ಹೆಲ್ಮಟ್‌ ರಹಿತ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋ ಸಹಿತ ಸಾರ್ವಜನಿಕರು, ಪಬ್ಲಿಕ್‌ ಐ ಆ್ಯಪ್‌ನಲ್ಲಿ ದೂರು ನೀಡಬಹುದು. ಈ ದೂರು ಸಂಚಾರ ನಿರ್ವಹಣಾ ಕೇಂದ್ರಕ್ಕೆ ರವಾನೆಯಾಗುತ್ತದೆ. ತಕ್ಷಣವೇ ಪೊಲೀಸರು, ಆ ದೂರು ಆಧರಿಸಿ ತಪ್ಪಿತಸ್ಥರ ವಿರುದ್ಧ ದಂಡ ಪ್ರಯೋಗ ಮಾಡುತ್ತಾರೆ.

2015ರಲ್ಲಿ ಸಂಚಾರ ಪೊಲೀಸರು ಹಾಗೂ ಜನಾಗ್ರಹ ಸೆಂಟರ್‌ ಫಾರ್‌ ಸಿಟಿಜನ್‌ಸಿಫ್‌ ಡೆಮಾಕ್ರಸಿ ಸಂಸ್ಥೆ ಜಂಟಿಯಾಗಿ, ‘ಪಬ್ಲಿಕ್‌ ಐ’ ಆ್ಯಪ್‌ ಅಭಿವೃದ್ಧಿಪಡಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದರು. ಅಂದಿನಿಂದ ಇದುವರೆಗೆ 1.26 ಲಕ್ಷ ಮಂದಿ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡಿದ್ದು, 24,222 ಮಂದಿ ಸಕ್ರಿಯವಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ 3.28 ಲಕ್ಷ ದೂರುಗಳು ದಾಖಲಾಗಿದೆ. ವರ್ಷದಿಂದ ವರ್ಷಕ್ಕೆ ದೂರುಗಳ ಪ್ರಮಾಣ ಏರಿಕೆ ಆಗುತ್ತಿದೆ. 2018ರಲ್ಲಿ ದಿನಕ್ಕೆ ಸರಾಸರಿ 166 ದೂರು ದಾಖಲಾಗುತ್ತಿದ್ದವು. 2019ರಲ್ಲಿ 417ಕ್ಕೆ ಹರಿದು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಪ್‌ನಲ್ಲಿ 2019ರಲ್ಲಿ ದೂರು ದಾಖಲಾದ ಪ್ರದೇಶವಾರು ವಿವರ

ಪ್ರದೇಶ ಕೃತ್ಯ ದಾಖಲಾದ ಪ್ರಕರಣಗಳ ಸಂಖ್ಯೆ

ಶಾಂತಲಾನಗರ ಹೆಲ್ಮೆಟ್‌ ರಹಿತ 14,092

ಬೆಳ್ಳಂದೂರು ಏಕಮುಖ ಸಂಚಾರ 11,504

ಕೋರಮಂಗಲ ಹೆಲ್ಮೆಟ್‌ ರಹಿತ 10,293

ದೊಡ್ಡನೆಕ್ಕುಂದಿ ನೋ ಪಾರ್ಕಿಂಗ್‌ 8,841

ಸಂಪಂಗಿರಾಮನಗರ ಹೆಲ್ಮೆಟ್‌ ರಹಿತ 7,527

ಹೊಸಕೆರೆಹಳ್ಳಿ ಹೆಲ್ಮೆಟ್‌ ರಹಿತ 6,160

ಗಿರಿನಗರ ಹೆಲ್ಮೆಟ್‌ ರಹಿತ 6,098

ರಾಜರಾಜೇಶ್ವರಿನಗರ ನೋ ಪಾರ್ಕಿಂಗ್‌ 6,045

ಪಟ್ಟಾಭಿರಾಮನಗರ ನೋ ಪಾರ್ಕಿಂಗ್‌ 5,497

ಸಾರಕ್ಕಿ ಪಾದಚಾರಿ ಮೇಲೆ ಪಾರ್ಕಿಂಗ್‌ 5,391

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ನಾಗರಿಕರು ದೂರು ಸಲ್ಲಿಸಬಹುದಾಗಿದೆ. ಪಬ್ಲಿಕ್‌ ಐ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಕೂಡ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಂಚಾರ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಹೇಳಿದ್ದಾರೆ.

click me!