ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್’ ಪಾರ್ಕ್‌ಗೆ ಮತ್ತಷ್ಟು ಮೆರುಗು| ಕೊರೋನಾ ಹಿನ್ನೆಲೆ ಕಳೆದ ವರ್ಷ ಕೆಲ ತಿಂಗಳ ಕಾಲ ‘ಝೂಲಾಜಿಕಲ್ ಪಾರ್ಕ್’ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿತ್ತು| ಅತ್ಯಾಕರ್ಷಕ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಪ್ರವೇಶದ್ವಾರ|
ವೈ.ಎಂ. ಸಿದ್ಧಲಿಂಗಸ್ವಾಮಿ
ಬಳ್ಳಾರಿ(ಜ.21): ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ ಹೊಸಪೇಟೆ ತಾಲೂಕಿನ ಕಮಲಾಪುರದ ‘ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್’ ಪಾರ್ಕ್‌ಗೆ ‘ಲವ್ ಬರ್ಡ್ಸ್’ ಆಗಮಿಸಿದ್ದು, ಇವುಗಳನ್ನು ನೋಡಲು ಪ್ರವಾಸಿಗರು ತಂಡೋಪ ತಂಡವಾಗಿ ದಾಂಗುಡಿ ಇಡುತ್ತಿದ್ದಾರೆ. ಅಲ್ಲಿಗೆ ಬರುವ ಎಲ್ಲರೂ ‘ಲವ್ ಬರ್ಡ್ಸ್’ ಕಂಡು ಪುಳಕಿತರಾಗುತ್ತಿದ್ದಾರೆ. ಅಲ್ಲದೇ ಪಾರ್ಕ್‌ನ ಪ್ರವೇಶದ್ವಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ.
ಕೊರೋನಾ ಹಿನ್ನೆಲೆ ಕಳೆದ ವರ್ಷ ಕೆಲ ತಿಂಗಳ ಕಾಲ ‘ಝೂಲಾಜಿಕಲ್ ಪಾರ್ಕ್’ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ 2020ರ ಜೂನ್ ತಿಂಗಳಿಂದ ಪುನಃ ವೀಕ್ಷಣೆಗೆ ಅನುಮತಿ ದೊರೆತು ಆರಂಭಗೊಂಡ ಬಳಿಕ ವೀಕ್ಷಣೆಗೆ ಬರುವವರ ಸಂಖ್ಯೆ ಇಮ್ಮುಡಿಯಾಗಿದೆ.
ಲವ್ ಬರ್ಡ್ಸ್ ಆಗಮನ:
ವೀಕ್ಷಕರಿಗೆ ಹೆಚ್ಚು ಆಕರ್ಷಿಸುವ ಲವ್ ಬರ್ಡ್ಸ್‌ಗಳನ್ನು ಮೈಸೂರಿನಿಂದ ‘ಝೂಲಾಜಿಕಲ್ ಪಾರ್ಕ್’ಗೆ ತರಲಾಗಿದೆ. ಬಣ್ಣ- ಬಣ್ಣದ ಚಿಕ್ಕ ಗಾತ್ರದ 25 ಜೋಡಿ ಪ್ರೀತಿ ಹಕ್ಕಿಗಳನ್ನು ಈಗಾಗಲೇ ತರಲಾಗಿದ್ದು, ಇದರಿಂದ ಮತ್ತಷ್ಟು ಮೆರುಗು ಹೆಚ್ಚಿದೆ. ಅಲ್ಲದೇ ಪಕ್ಷಿಪ್ರೇಮಿಗಳಲ್ಲಿ ಸಂತಸ ಹೆಚ್ಚಿಸುವಂತೆ ಮಾಡಿದೆ.
ಕೊರೋನಾ ಹಿನ್ನೆಲೆ ಕಳೆದ ವರ್ಷ ಪಾರ್ಕ್ ಕೆಲ ತಿಂಗಳಕಾಲ ಬಂದ್ ಮಾಡಲಾಗಿತ್ತು. ಆದರೆ 2020ರ ಜೂನ್‌ನಿಂದ ವೀಕ್ಷಣೆ ಆರಂಭಗೊಂಡ ಬಳಿಕ ಬರುವ ಸಾರ್ವಜನಿಕರ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಭಾನುವಾರ 900ಕ್ಕೂ ಅಧಿಕ ಜನರು ಝೂ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜ. 1ರಂದು ಹೊಸ ವರ್ಷದ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಣೆಗೆ ಬಂದಿದ್ದು, ಅದೊಂದೇ ದಿನ .1.55 ಲಕ್ಷ ಹಣ ಆದಾಯ ಹರಿದು ಬಂದಿದೆ.
ಪ್ರತಿ ಮಂಗಳವಾರದಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿಲ್ಲ. ಆದರೆ ಈ ಬಾರಿ ಜ. 26 ಮಂಗಳವಾರ ಬಂದಿರುವ ಹಿನ್ನೆಲೆ ವಿಶೇಷ ಅನುಮತಿ ಮೇರೆಗೆ ಗಣರಾಜ್ಯೋತ್ಸವದ ಪ್ರಯುಕ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವುದರಿಂದ ಈ ವಾರ ಮಾತ್ರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರವಾಸಿಗರಿಗೆ ವಾಹನ ವ್ಯವಸ್ಥೆ:
ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದಿಂದ (ಡಿಎಂಎಫ್) 5 ಕೋಟಿ ವೆಚ್ಚದಲ್ಲಿ ಮುಖ್ಯ ಪ್ರವೇಶದ್ವಾರದ ಕಾಮಗಾರಿ ಒಂದೂವರೆ ತಿಂಗಳಿನಿಂದ ಪ್ರಾರಂಭವಾಗಿದ್ದು, ನಾಲ್ಕು ತಿಂಗಳೊಳಗೆ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅತ್ಯಾಕರ್ಷಕ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಪ್ರವೇಶದ್ವಾರವು ಇಡೀ ಪಾರ್ಕ್ ಕಂಗೊಳಿಸುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರ .5 ಕೋಟಿ ಮಂಜೂರು ಮಾಡಿದೆ. ಇದರಲ್ಲಿ ಪಾರ್ಕ್ನ ಒಳಭಾಗದ ರಸ್ತೆಗಳ ಅಭಿವೃದ್ಧಿಗೆ ಆದೇಶ ನೀಡಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆತ ಬಳಿಕ ಆರಂಭವಾಗಲಿದೆ. ಇದರಿಂದ ಪ್ರವಾಸಿಗರಿಗೆ ಮೃಗಾಲಯದ ವೀಕ್ಷಣೆ ಹಾಗೂ ಸಫಾರಿಗೆ ಅನುಕೂಲವಾಗಲಿದೆ. ಜತೆಗೆ ಈ ಮೊದಲು ಉಂಟಾಗುತ್ತಿದ್ದ ಧೂಳಿಗೆ ಬ್ರೇಕ್ ಬೀಳಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಝೂಗೆ 11 ಕೋಟಿ ಮಂಜೂರು ಮಾಡಿದ್ದು, ಸಾರ್ವಜನಿಕರು ಝೂ ವೀಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ಎಲೆಕ್ಟ್ರಿಕ್ ಕಾರು, ಎರಡು ಬಸ್‌ಗಳು ಹಾಗೂ ಮೃಗಾಲಯ ಆಸ್ಪತ್ರೆಗೆ ಎಕ್ಸ್‌ರೇ ಮಿಷನ್ ಸಹ ಮಂಜೂರಾಗಿದ್ದು, ಇನ್ನು ತಿಂಗಳೊಳಗೆ ಎಲೆಕ್ಟ್ರಿಕ್ ಕಾರು ಹಾಗೂ ಬಸ್‌ಗಳು ಝೂಗೆ ಸೇರಲಿವೆ ಎಂದು ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿರಣ್ ಎಂ.ಎನ್. ತಿಳಿಸುತ್ತಾರೆ.
140.917 ಹೆಕ್ಟೇರ್ ವ್ಯಾಪ್ತಿ ಪ್ರದೇಶ ಹೊಂದಿರುವ ಈ ಝೂಲಾಜಿಕಲ್ ಪಾರ್ಕ್‌ನಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಮಟ್ಟದಲ್ಲಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಪಾರ್ಕ್ನಲ್ಲಿ ನಡೆಯುತ್ತಿದ್ದು, 5 ಕೋಟಿ ವೆಚ್ಚದಲ್ಲಿ ಆಕರ್ಷಕವಾಗಿ ಮುಖ್ಯ ಪ್ರವೇಶದ್ವಾರದ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಸಫಾರಿಗಾಗಿ ಎರಡು ಎಲೆಕ್ಟ್ರಿಕ್ ಕಾರು, ಎರಡು ಬಸ್‌ಗಳನ್ನು ಸಹ ತರಲಾಗುತ್ತಿದೆ ಎಂದು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್ ಎಂ.ಎನ್ ತಿಳಿಸಿದ್ದಾರೆ.