Hampi Utsav: ಹಂಪಿ ಆಗಸದಲ್ಲಿ ಲೋಹದ ಹಕ್ಕಿಯ ಹಾರಾಟ!

By Kannadaprabha News  |  First Published Jan 28, 2023, 11:41 AM IST

ಹಂಪಿ ಉತ್ಸವದ ನಿಮಿತ್ತ ವಿಜಯನಗರ ಜಿಲ್ಲಾಡಳಿತ ಹಂಪಿ ಬೈ ಸ್ಕೈ ಯೋಜನೆ ರೂಪಿಸಿದ್ದು, ಬಾನಿನಲ್ಲಿ ಲೋಹದ ಹಕ್ಕಿಗಳು ಹಾರಾಟ ನಡೆಸಿವೆ. ಎರಡು ಹಕ್ಕಿಗಳು. ಹಂಪಿ, ಕಮಲಾಪುರ, ಕಂಪ್ಲಿ, ಸೀತಾರಾಂ ತಾಂಡಾ, ಕೆರೆ ತಾಂಡಾ, ಕಡ್ಡಿರಾಂಪುರ ತಾಂಡಾ, ರಾಮಸಾಗರ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಜನರು ಕಂಡು ಸಂತಸಪಟ್ಟರು.


ಕೃಷ್ಣ ಎನ್‌. ಲಮಾಣಿ

ಹಂಪಿ (ಜ.28) : ಅಗೋ ಅಲ್ಲಿ ನೋಡು, ಆಗಸದಲ್ಲಿ ಹಾರಾಡುತ್ತಿದೆ, ಹೆಲಿಕಾಪ್ಟರ್‌. ಓಹೋ ನನ್ನ ನೆತ್ತಿ ಮೇಲಿಂದಲೇ ಹೋಯಿತು. ಓ, ನನ್ನ ತಲೆ ಮೇಲೆ ಹಾಯ್ದು ಹೋಯಿತು. ಏ ಕರೀ ಹೆಲಿಕಾಪ್ಟರ್‌ ನೋಡೋ, ಆ ಬಿಳಿದೂ ನೋಡೋ, ಹೇಂಗ್‌ ಹೋಗ್ತದ್‌ ಇದು. ಲೋಹದ ಹಕ್ಕಿಗಳು ಹಾರಾಟ ನಡೆಸುತ್ತಿರುವ ಮಯೂರ ಭುವನೇಶ್ವರಿ ಹೋಟೆಲ್‌ ಆವರಣದ ಹೆಲಿಪ್ಯಾಡ್‌ ಬಳಿ ಕೇಳಿ ಬಂದ ಮಾತುಗಳು.

Latest Videos

undefined

ಹಂಪಿ ಉತ್ಸವದ ನಿಮಿತ್ತ ವಿಜಯನಗರ ಜಿಲ್ಲಾಡಳಿತ ಹಂಪಿ ಬೈ ಸ್ಕೈ ಯೋಜನೆ ರೂಪಿಸಿದ್ದು, ಬಾನಿನಲ್ಲಿ ಲೋಹದ ಹಕ್ಕಿಗಳು ಹಾರಾಟ ನಡೆಸಿವೆ. ಎರಡು ಹಕ್ಕಿಗಳು (ಹೆಲಿಕಾಪ್ಟರ್‌) ಆಗಸದಲ್ಲಿ ಹಾರಾಟ ನಡೆಸುತ್ತಿರುವುದನ್ನು ಹಂಪಿ, ಕಮಲಾಪುರ, ಕಂಪ್ಲಿ, ಸೀತಾರಾಂ ತಾಂಡಾ, ಕೆರೆ ತಾಂಡಾ, ಕಡ್ಡಿರಾಂಪುರ ತಾಂಡಾ, ರಾಮಸಾಗರ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಜನರು ಕಂಡು ಸಂತಸಪಟ್ಟರು.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

₹3800 ಕೊಟ್ಟು ಹೆಲಿಕಾಪ್ಟರ್‌ ಏರಿದ ಜನ:

ಹಂಪಿ ಉತ್ಸವ ನೋಡಲು ಸಿಂಧನೂರು, ಗಂಗಾವತಿ, ಕೊಪ್ಪಳ, ಹೊಸಪೇಟೆ, ಸಂಡೂರು ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಜನರು ತಲಾ ಒಬ್ಬರಿಗೆ .3800 ನೀಡಿ ಹೆಲಿಕಾಪ್ಟರ್‌ ಏರಿದರು. ಸಿಂಧನೂರಿನಿಂದ ಆಗಮಿಸಿದ್ದ ದಂಪತಿ, ಮಕ್ಕಳೊಂದಿಗೆ ಹೆಲಿಕಾಪ್ಟರ್‌ ಏರಿ ಖುಷಿಪಟ್ಟರು. ಇನ್ನು ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಪ್ರವಾಸಿಗರ ತಂಡ, ಕಂಪ್ಲಿ, ರಾಮಸಾಗರದ ರೈತರು ಕೂಡ ಹೆಲಿಕಾಪ್ಟರ್‌ ಏರಿದರು. ಅನ್ನದಾತರು ಕೂಡ ಲೋಹದ ಹಕ್ಕಿ ಮೇಲೇರಿ ಹಂಪಿ ಸ್ಮಾರಕಗಳ ವಿಹಂಗಮ ನೋಟ ವೀಕ್ಷಿಸಿದರು.

ಆಗಸದಿಂದ ಸ್ಮಾರಕಗಳ ವಿಹಂಗಮ ನೋಟ

ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ ಆವರಣದಿಂದ ಚಿಪ್ಸನ್‌ ಏವಿವೇಶನ್‌ ಹಾಗೂ ತಂಬಿ ಕಂಪೆನಿಗಳ ಎರಡು ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ. ಈ ಲೋಹದ ಹಕ್ಕಿಗಳನ್ನು ಏರಿ ಹಂಪಿಯ ಸ್ಮಾರಕಗಳ ಸೊಬಗನ್ನು ಆಗಸದಿಂದಲೇ ಜನರು ಸವಿಯುತ್ತಿದ್ದಾರೆ. ಅದರಲ್ಲೂ ವಿಜಯ ವಿಠ್ಠಲ ದೇಗುಲ, ಕಲ್ಲಿನ ತೇರು, ಕಮಲ ಮಹಲ್‌, ಗಜಶಾಲೆ, ಶ್ರೀವಿರೂಪಾಕ್ಷೇಶ್ವರ ದೇವಾಲಯ, ಹಂಪಿಯ ನಾಲ್ಕು ವೇದಿಕೆ ವೀಕ್ಷಿಸಿ ಖುಷಿಪಡುತ್ತಿದ್ದಾರೆ.

ಫುಲ್‌ ಬುಕ್ಕಿಂಗ್‌:

ಲೋಹದ ಹಕ್ಕಿಗಳ ಹಾರಾಟ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯುತ್ತಿದೆ. ತಲಾ ಒಬ್ಬರಿಗೆ .3800 ಟಿಕೆಟ್‌ ಮಾಡಿದರೂ ಮುಂಗಡ ಬುಕ್ಕಿಂಗ್‌ ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದೆ. ವಿಮಾನ ಏರಿದವರೂ ದುಬಾರಿಯಾದರೂ ಸರಿ. ಹಂಪಿ ಸ್ಮಾರಕಗಳನ್ನು ಆಗಸದಿಂದ ನೋಡುವುದು ಯಾವಾಗ? ಎಂದು ಸ್ಮಾರಕಗಳನ್ನು ಲೋಹದ ಹಕ್ಕಿಗಳನ್ನು ಏರಿ ನೋಡುತ್ತಿದ್ದಾರೆ.

ಆಗಸದಲ್ಲಿ ಹಾರಾಟ ನಡೆಸುತ್ತಿರುವ ಲೋಹದ ಹಕ್ಕಿಗಳನ್ನು ನೋಡಲು ಶಾಲಾ ಮಕ್ಕಳು ಕೂಡ ಮಯೂರ ಭುವನೇಶ್ವರಿ ಹೋಟೆಲ್‌ ಆವರಣಕ್ಕೆ ದೌಡಾಯಿಸುತ್ತಿದ್ದಾರೆ. ಪೊಲೀಸರು ಕೂಡ ಜನರನ್ನು ಸಂಭಾಳಿಸಲು ಹೈರಾಣಾಗುತ್ತಿದ್ದಾರೆ.

ಹಂಪಿ ಬೈಸ್ಕೈ ಯೋಜನೆ ಶಾಶ್ವತ ಯಾವಾಗ?

ಹಂಪಿ ಉತ್ಸವದ ಸಮಯದಲ್ಲಿ ಮಾತ್ರ ಎರಡು ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತವೆ. ಆದರೆ, ಈ ಯೋಜನೆಯನ್ನು ಶಾಶ್ವತ ಸಾಕಾರಗೊಳಿಸಬೇಕು ಎಂಬುದು ಪ್ರವಾಸಿಗರ ವಲಯದಿಂದ ಕೇಳಿ ಬಂದ ಮಾತುಗಳು. ಈ ಯೋಜನೆಯನ್ನು ಈ ಹಿಂದೆ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ, ಬರೀ ಬಾಯಿ ಮಾತಿನಲ್ಲೇ ಈ ಯೋಜನೆ ಉಳಿದಿದ್ದು, ಹಂಪಿಯಲ್ಲಿ ಶಾಶ್ವತ ಆಗಸದಿಂದ ಸ್ಮಾರಕಗಳನ್ನು ವೀಕ್ಷಿಸುವ ಯೋಜನೆ ಕೈಗೊಳ್ಳಬೇಕು ಎಂದು ಪ್ರವಾಸಿಗರಾದ ನವೀನ್‌ಕುಮಾರ, ನಂದಿನಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಡಿಯೋ ಮಾಡಿಕೊಂಡ ಜನ:

ಹಂಪಿ ಉತ್ಸವದದಲ್ಲಿ ಹೆಲಿಕಾಪ್ಟರ್‌ಗಳ ಹಾರಾಟವನ್ನು ಜನರು ವಿಡಿಯೋ ಮಾಡಿಕೊಂಡರು. ಇನ್ನೂ ಕೆಲವರು ಫೋಟೊಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.ಲೋಹದ ಹಕ್ಕಿಗಳ ಬಳಿ ಫೋಟೊ ಕ್ಲಿಕ್ಕಿಸಿಕೊಳ್ಳುವುದೇ ಒಂದು ಪುಳಕ

Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ.

ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿರುವುದು ಸಂತಸ ತಂದಿದೆ. ದುಬಾರಿ ಏನಿಸಿದರೂ ಮಕ್ಕಳೊಂದಿಗೆ ಕುಟುಂಬ ಸಮೇತ ಹೆಲಿಕಾಪ್ಟರ್‌ ಏರಿ, ವಿಜಯನಗರದ ರಾಜಧಾನಿ ಹಂಪಿಯ ಸ್ಮಾರಕ ವೀಕ್ಷಿಸಿದೇವು ಎಂಬ ನೆನಪು ಶಾಶ್ವತವಾಗಿ ಉಳಿಯಲಿದೆ.

ಶಾಂತಕುಮಾರ, ಸುಮಿತ್‌ಕುಮಾರ, ಮೇಘಾ ಪ್ರವಾಸಿಗರು.

ಹಂಪಿ ಉತ್ಸವದಲ್ಲಿ ಎರಡು ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿವೆ. ಮುಂಗಡ ಬುಕ್ಕಿಂಗ್‌ ಕೂಡ ಆಗುತ್ತಿವೆ. ಪ್ರತಿ ಉತ್ಸವದಲ್ಲೂ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಈ ಸಲವೂ ಜನರಿಂದ ಉತ್ತಮ ಸ್ಪಂದನೆ ಇದೆ.

ನಜೀರಿಯಾ, ಅಶ್ವಿನ್‌, ಚಿಪ್ಸನ್‌ ಏವಿವೇಶನ್‌ ಕಂಪನಿ ಸಿಬ್ಬಂದಿ

click me!