ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಬ್ಬರದ ನಡುವೆಯೂ ಪ್ರವಾಸಿಗರ ಹುಚ್ಚಾಟ

By Govindaraj SFirst Published Jun 25, 2022, 12:40 AM IST
Highlights

ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿರೋ ಹಿನ್ನೆಲೆ ಕರಾವಳಿ ಭಾಗದಲ್ಲಂತೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರೊಂದಿಗೆ ಕಡಲ ಅಬ್ಬರ ಕೂಡಾ ಹೆಚ್ಚಾಗಿದ್ದು, ಈಗಾಗಲೇ ಕೆಲವರನ್ನು ಬಲಿ ಪಡೆದುಕೊಂಡಿದೆ. 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.25): ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿರೋ ಹಿನ್ನೆಲೆ ಕರಾವಳಿ ಭಾಗದಲ್ಲಂತೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರೊಂದಿಗೆ ಕಡಲ ಅಬ್ಬರ ಕೂಡಾ ಹೆಚ್ಚಾಗಿದ್ದು, ಈಗಾಗಲೇ ಕೆಲವರನ್ನು ಬಲಿ ಪಡೆದುಕೊಂಡಿದೆ. ಈ ಕಾರಣಗಳಿಂದ ಉತ್ತರಕನ್ನಡ ಜಿಲ್ಲಾಡಳಿತ ಯಾರೂ ಕೂಡಾ ಕಡಲತೀರಕ್ಕೆ ತೆರಳಬಾರದು ಎಂಬ ಎಚ್ಚರಿಕೆಯನ್ನು ಕೂಡಾ ನೀಡಿದೆ. ಇಷ್ಟಿದ್ದರೂ ಜಿಲ್ಲೆಗೆ ಭೇಟಿ ನೀಡುವ ಕೆಲವು ಪ್ರವಾಸಿಗರ ಹುಚ್ಚಾಟ ಮುಂದುವರಿದಿದ್ದು, ಭಾರೀ ಅಲೆಗಳು ನಡುವೆಯೂ ಚಿಕ್ಕ ಮಕ್ಕಳ ಜತೆ ಮೋಜಿನಾಟ ನಡೆಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. 

ಒಂದೆಡೆ ದೈತ್ಯಾಕಾರದಲ್ಲಿ ಬಂದು ದಡಕ್ಕೆ ಅಪ್ಪಳಿಸುತ್ತಿರುವ ಅಲೆಗಳು. ಇನ್ನೊಂದೆಡೆ ಅಲೆಗಳಲ್ಲಿ ಮೈಮರೆತು ಆಟವಾಡುತ್ತಿರುವ ಪ್ರವಾಸಿಗರು ಹಾಗೂ ಮಕ್ಕಳು. ಮತ್ತೊಂದೆಡೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿರುವ ಪ್ರವಾಸಿಗರು. ಈ ಎಲ್ಲಾ ದೃಶ್ಯಗಳು ಕಂಡುಬಂದಿರೋದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲ ತೀರಗಳಲ್ಲಿ. ಹೌದು, ಮಳೆಗಾಲ ಪ್ರಾರಂಭವಾಗುತ್ತಿದ್ದಂತೇ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರಗಳು ರೌದ್ರಾವತಾರ ತಾಳಿದ್ದು, ಪ್ರವಾಸಿಗರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.  ಅಲೆಗಳ ಅಬ್ಬರ ಅಧಿಕ ಇರುವ ಈ ಸಮಯದಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. 

Karwar: ಖಾಲಿಯಾದ ಸೂಪಾ ಜಲಾಶಯ: 40 ವರ್ಷಗಳಿಗೂ ಹಿಂದಿನ ಅವಶೇಷಗಳು ಪತ್ತೆ

ಅಲ್ಲದೇ, ಅಲ್ಲಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ಮುಂದೆ ಸಾಗದಂತೆ ಸೂಚನೆಯನ್ನು ಕೂಡಾ ನೀಡಿದೆ‌. ಆದರೆ, ಇದನ್ನು ಲೆಕ್ಕಿಸದೇ ಮೋಜು ಮಸ್ತಿಗಾಗಿ ಕಡಲಿಗೆ ಇಳಿಯುವ ಪ್ರವಾಸಿಗರು ಅಲೆಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ನಾಲ್ವರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಜಿಲ್ಲಾಡಳಿತ ಹೆಚ್ಚಿನ ಲೈಫ್ ಗಾರ್ಡ್ಸ್‌ಗಳನ್ನು ನೇಮಿಸಬೇಕಲ್ಲದೇ, ಪ್ರವಾಸಿಗರ ರಕ್ಷಣೆ ನಿಟ್ಟಿನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ. ಇನ್ನು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಕ್ಕೆಂದು ಬರುವ ಜನರಿಗೆ ಕಡಲ ತೀರದಲ್ಲಿ ಆಗುವ ಬದಲಾವಣೆಯ ಬಗ್ಗೆ ಸರಿಯಾದ ಮಾಹಿತಿ ಇರಲ್ಲ. 

ಕೆಲವು ಪ್ರವಾಸಿಗರಿಗೆ ಅಲೆಗಳ ಅಬ್ಬರ ಹೆಚ್ಚಿರುವ ಬಗ್ಗೆ ತಿಳಿಯದೇ ಮುಂದೆ ಹೋಗಿ ಪ್ರಾಣ ಕಳೆದುಕೊಂಡರೆ, ಇನ್ನು ಕೆಲವರು ಮೋಜು ಮಸ್ತಿಗಾಗಿ ಮುಂದೆ ಸಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಡಲ ತೀರದಲ್ಲಿ ಈ ಹಿಂದೆ ಲೈಫ್ ಗಾರ್ಡ್ ಗಳ ನೇಮಕ ಮಾಡಿ ಪ್ರವಾಸಿಗರ ರಕ್ಷಣೆ ಮಾಡುವ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಸದ್ಯ ಲೈಫ್ ಗಾರ್ಡ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರವಾಸಿಗರ ಸಾವು ಹೆಚ್ಚಾಗುತ್ತಿದೆ ಎನ್ನುವುದು ಕೆಲವರ ಆರೋಪ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೇಳಿದರೆ, ಈಗಾಗಲೇ ಲೈಫ್ ಗಾರ್ಡ್ಸ್‌ಗಳ ಸಂಖ್ಯೆಯನ್ನು ಮೊದಲಿಗಿಂತ ಹೆಚ್ಚು ಮಾಡಲಾಗಿದೆ.‌ 

ನನಗೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ: ಸುಪ್ರೀಂ ಮೊರೆ ಹೋದ ಎಂಜಿನಿಯರ್..!

ಮರುಡೇಶ್ವರದಲ್ಲಿ ನಡೆದ ಘಟನೆ ಜನರ ನಿರ್ಲಕ್ಷ್ಯದಿಂದ ನಡೆದಿರುವಂತದ್ದು. ಈ ಪ್ರಕರಣದ ಬಳಿಕ ಕಟ್ಟುನಿಟ್ಟಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರ ರಕ್ಷಣೆಗೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ. ಒಟ್ಟಿನಲ್ಲಿ ಸದ್ಯ ಮಳೆಗಾಲ ಪ್ರಾರಂಭವಾಗಿದ್ದು,  ಇನ್ನು ಎರಡು ಮೂರು ತಿಂಗಳುಗಳ ಕಾಲ ಕಡಲಿನ ಅಲೆಗಳ ಅಬ್ಬರ ಹೆಚ್ಚಾಗಿಯೇ ಇರಲಿದೆ. ಈ ನಡುವೆ ಹೊರಜಿಲ್ಲೆಗಳಿಂದ ಬರುವಂತಹ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿಯೇ ಇರಲಿರೋದ್ರಿಂದ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ರಕ್ಷಣೆಯ ನಿಟ್ಟಿನಲ್ಲಿ ಶೀಘ್ರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. 

click me!