ಹೊಸವರ್ಷದ ಅಂಗವಾಗಿ ಮೈಸೂರು ಮತ್ತು ಬೆಂಗಳೂರಿನ ಕೆಲವು ಪ್ರವಾಸಿತಾಣಗಳಿಗೆ ತೆರಳಲು ನಿರ್ಬಂಧಿಸಿರುವುದರಿಂದ ಪ್ರವಾಸಿಗರು ಕಾಫಿನಾಡಿಗೆ ದಾಂಗುಡಿ ಇಡುತ್ತಿದ್ದು, ಗಿರಿಪ್ರದೇಶ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.31): ಹೊಸವರ್ಷದ ಅಂಗವಾಗಿ ಮೈಸೂರು ಮತ್ತು ಬೆಂಗಳೂರಿನ ಕೆಲವು ಪ್ರವಾಸಿತಾಣಗಳಿಗೆ ತೆರಳಲು ನಿರ್ಬಂಧಿಸಿರುವುದರಿಂದ ಪ್ರವಾಸಿಗರು ಕಾಫಿನಾಡಿಗೆ ದಾಂಗುಡಿ ಇಡುತ್ತಿದ್ದು, ಗಿರಿಪ್ರದೇಶ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಹೊಸವರ್ಷ ಭಾನುವಾರ ರಜೆದಿನ ಬಂದಿರುವುದರಿಂದ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಬೆಟ್ಟ ಪ್ರದೇಶದ ವಿಹಂಗಮ ನೋಟವನ್ನು ವೀಕ್ಷಿಸಲು ಸಹಸ್ರಾರು ಪ್ರವಾಸಿಗರು ಗಿರಿಗೆ ಲಗ್ಗೆಇಟ್ಟಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಸಾವಿರಕ್ಕೂ ಅಧಿಕ ವಾಹನಗಳ ಭೇಟಿ ನೀಡಿವೆ.
ಸಾವಿರಾರು ಸಂಖ್ಯೆಯಲ್ಲಿ ಗಿರಿ ಪ್ರದೇಶಕ್ಕೆ ಲಗ್ಗೆ ಇಟ್ಟಿರೋ ಪ್ರವಾಸಿಗರು:
ಗಿರಿ ಪ್ರದೇಶದಲ್ಲಿರುವ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾ, ಮಾಣಿಕ್ಯಧಾರಕ್ಕೆ ಭಾರೀ ಸಂಖ್ಯೆಯ ಪ್ರವಾಸಿಗರು ಕಂಡುಬಂದರು. ಕೊರೊನಾ ಸೋಂಕಿನ 4ನೇ ಅಲೆಯ ಆತಂಕವನ್ನು ಲೆಕ್ಕಿಸದೆ ಕಾಫಿನಾಡಿಗೆ ಆಗಮಿಸಿದ್ದಾರೆ. ರಾಜ್ಯದ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ ಏರ್ಪಟ್ಟಿದ್ದು, ವಾಹನಗಳ ದಟ್ಟಣೆಯಿಂದ ಕಿಲೋಮೀಟರ್ ಗಟ್ಟಲೆ ಸಂಚಾರಸ್ಥಗಿತಗೊಂಡಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರು ಶನಿವಾರ ಹೈರಣಾದರು.
ಕರ್ನಾಟಕ ಸೇರಿದಂತೆ ಹೊರರಾಜ್ಯಗಳಿಂದ ಪ್ರವಾಸಿಗರು ಕಾಫಿನಾಡಿಗೆ ಆಗಮಿಸಿದ್ದು, ರೆಸಾರ್ಟ್, ಹೋಂಸ್ಟೇ ಮತ್ತು ವಸತಿಗೃಹಗಳು ಭರ್ತಿಯಾಗಿವೆ. ಕೆಲವರಿಗೆ ಉಳಿದುಕೊಳ್ಳಲು ಸ್ಥಳಾವಕಾಶವಿಲ್ಲದೆ. ಗಿರಿಪ್ರದೇಶದಲ್ಲಿರುವ ಪ್ರವಾಸಿತಾಣಗಳನ್ನು ವೀಕ್ಷಿಸಿ ಬಂದದಾರಿಗೆ ಸುಂಕವಿಲ್ಲದಂತೆ ರಾಜಧಾನಿ ಬೆಂಗಳೂರಿಗೆ ಮರಳಿದ್ದಾರೆಂದು ಹೇಳಲಾಗಿದೆ. ಯುವಕರು ಹೊಸವರ್ಷವನ್ನು ಆಚರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮದ್ಯಸೇವಿಸಿ, ಫೈಯರ್ ಕ್ಯಾಂಪ್ ಮಾಡಿಕೊಂಡು, ಕುಣಿದು ಕುಪ್ಪಳಿಸಲಿದ್ದಾರೆ. ಮೊಬೈಲ್ನಲ್ಲಿರುವ ಕಾಡುಗಳಿಗೆ ಸ್ಟೆಪ್ ಹಾಕಲು ಮುಂದಾಗಿದ್ದಾರೆ. ಅದಕ್ಕಾಗಿ ಈಗಾಗಲೇ ಮದ್ಯದಂಗಡಿಗಳಲ್ಲಿ ತಮಗೆ ಇಷ್ಟವಾದ ಬಿಯರ್ ಮತ್ತು ಹಾರ್ಡ್ ಡ್ರಿಂಗ್ಸ್ಗಳನ್ನು ಕೇಸ್ಗಟ್ಟಲೆ ಖರೀದಿಸಿ ಕೊಂಡೊಯ್ದಿದ್ದಾರೆ. ರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆಗೆ ಸರ್ಕಾರ ಅವಕಾಶಮಾಡಿಕೊಟ್ಟಿದ್ದು, ಅಷ್ಟರೊಳಗೆ ಹೊಸವರ್ಷಾಚರಣೆಯನ್ನು ಆಚರಿಸಲು ಯುವಜನರಿಗೆ ಸಂಭ್ರಮ ಮನೆಮಾಡಿದೆ.
ಹಳೆಯ ವರ್ಷವನ್ನು ಮರೆತು ಹೊಸವರ್ಷವನ್ನು ಸ್ವಾಗತಿಸಲು ಜಿಲ್ಲೆಯ ಜನರು ಸಜ್ಜಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸಂಭ್ರಮದಿಂದ ಆಚರಿಸದಿದ್ದ ಹೊಸ ವರ್ಷಾಚರಣೆಯನ್ನು ಈ ವರ್ಷ ಅದ್ದೂರಿಯಾಗಿ ಆಚರಿಸಲು ಯುವಕರು ನಿರ್ಧರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ವರ್ಷಾಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ. ಯಾವುದೇ ಅವಘಡ ಸಂಭವಿಸದಂತೆ ಎಚ್ಚರವಹಿಸಲು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸೂಚಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನಗಳನ್ನು ನಿಲ್ಲಿಸಬಾರದೆಂದು ತಿಳಿಸಿದ್ದು, ಹೊಸ ವರ್ಷಾಚರಣೆ ನೆಪದಲ್ಲಿ ಮೋಜು, ಮಸ್ತಿ ಅತಿರೇಕಕ್ಕೆ ಹೋಗದಂತೆ ಕಣ್ಗಾವಲಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿ ನಿಯೋಜಿಸುತ್ತಿದ್ದು, ಜಿಲ್ಲೆಯ ಗಡಿಪ್ರದೇಶದಲ್ಲಿ ಚೆಕ್ಪೋಸ್ಟ್ ತೆರೆಯಲು ಎಸ್ಪಿ ಉಮಾಪ್ರಶಾಂತ್ ಮುಂದಾಗಿದ್ದಾರೆ.
ಹೊಸ ವರ್ಷಚಾರಣೆ ಪ್ರಯುಕ್ತ ನಮ್ಮ ಮೆಟ್ರೋ ಅವಧಿ ವಿಸ್ತರಣೆ, ಮುಂಜಾವು 2 ಗಂಟೆಯವರೆಗೆ ಸೇವೆ ಲಭ್ಯ
ಕೇಕ್ ಗಳಿಗೆ ಹೆಚ್ಚಿದ ಬೇಡಿಕೆ:
ಬಗೆಬಗೆಯ ಕೇಕ್ ಗಳಿಗೆ ಈಗಾಗಲೇ ಬೇಡಿಕೆ ಹೆಚ್ಚಿದ್ದು, ಆರ್ಡರ್ ಮೇಲೆ ಕೇಕ್ ತಯಾರಿಸಲು ಬೇಕರಿ ಮಾಲೀಕರು ಮುಂದಾಗಿದ್ದಾರೆ. ಬಸವನಹಳ್ಳಿ ಶಾಲೆಯ ಎದುರಿಗಿರುವ ಕೇಕ್ ಕಾರ್ನರ್‌ನಲ್ಲಿ ಈಗಾಗಲೇ 4ಸಾವಿರ ಕೇಕ್ ಗಳನ್ನು ತಯಾರಿಸಿದ್ದು, ಇವುಗಳು ಖಾಲಿಯಾದರೆ ಸಂಜೆ ವೇಳೆ ಮತ್ತೆ ತಯಾರಿಸಲಾಗುವುದು ಎಂದು ಮಾಲೀಕ ನಿಂಗೇಗೌಡ ಹೇಳಿದರು.
ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ
ವಿವಿಧ ಕೇಕ್ ಗಳಲ್ಲಿ ನೂತನ ವರ್ಷದ ಶುಭಾಶಯಗಳನ್ನು ಕೋರುವ ಕೇಕ್ ಗಳನ್ನು ಗ್ರಾಹಕರು ಖರೀದಿ ಮಾಡುವ ದ್ರಶ್ಯ ಸಾಮಾನ್ಯವಾಗಿದೆ. 2022ಕ್ಕೆ ಗುಡ್ ಬೈ ಹೇಳಿ 2023ಕ್ಕೆ ಸ್ವಾಗತಿಸಿಲು ಕೇಕ್ ಗಳ ಮೂಲಕವೂ ಅಣಿಯಾಗಿದ್ದಾರೆ. ಪೇಸ್ಟ್ರಿ ಕೇಕ್ ಗಳಿಗೆ ಬೇಡಿಕೆ ಬಂದಿದ್ದು ವೆನಿಲ್ಲಾ , ಚಾಕ್ಲೆಟ್ ಫ್ಲೇವರ್ ಕೇಕ್ ಗಳ ಸೇಲ್ ಭರ್ಜರಿ ನಡೆಯುತ್ತಿದೆ.