
ಮಂಗಳೂರು(ಡಿ.24): ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆ ಸಲುವಾಗಿ ಕಡಲ ತಡಿಯ ಮಂಗಳೂರಿಗೆ ಪ್ರವಾಸಿಗರು ಈಗಲೇ ಲಗ್ಗೆ ಇಟ್ಟಿದ್ದಾರೆ. ಮೂಡುಬಿದಿರೆ ಆಳ್ವಾಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ವೀಕ್ಷಣೆಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮಂಗಳೂರು ನಗರದ ಹೊಟೇಲ್, ಹೊರವಲಯದ ರೆಸಾರ್ಟ್, ಹೋಂಸ್ಟೇಗಳು ಜನವರಿ 2ರ ವರೆಗೆ ಬುಕ್ಕಿಂಗ್ ಆಗಿವೆ. ದುಬಾರಿ ಬಾಡಿಗೆಯಿಂದ ಸಾಮಾನ್ಯ ಬಾಡಿಗೆ ವರೆಗಿನ ಎಲ್ಲ ಹೊಟೇಲ್‌ಗಳೂ ಭರ್ತಿಯಾಗಿವೆ. ದ.ಕ.ಜಿಲ್ಲೆಯಲ್ಲಿ 80 ನೋಂದಾಯಿತ ಹೋಂಸ್ಟೇಗಳಿದ್ದು, ಇವುಗಳಲ್ಲಿ ಹೆಚ್ಚಿನವು ಮಂಗಳೂರಿನಲ್ಲೇ ಇವೆ. ನೋಂದಣಿ ಆಗದ ಹೋಂಸ್ಟೇಗಳೂ ಇದ್ದು, ಎಲ್ಲವೂ ಮುಂಗಡ ಬುಕ್ಕಿಂಗ್ ಆಗಿವೆ. ಹಾಗಾಗಿ ಬುಕ್ಕಿಂಗ್ ರಹಿತವಾಗಿ ಬಂದವರಿಗೆ ಹೋಂಸ್ಟೇಗಳು ಸಿಗುತ್ತಿಲ್ಲ.
ನಗರದಲ್ಲಿ 100ಕ್ಕೂ ಅಧಿಕ ಹೊಟೇಲ್‌ಗಳು ಅಸೋಸಿಯೇಷನ್ ಸದಸ್ಯತ್ವ ಹೊಂದಿವೆ. ಅವುಗಳು ಕೂಡ ಬುಕ್ ಆಗಿವೆ. ಮಂಗಳೂರಿಗೆ ಸರ್ವಋುತು ಬಸ್, ರೈಲು, ಜಲ ಸಾರಿಗೆ ಹಾಗೂ ವಿಮಾನ ಸೌಲಭ್ಯ ಇರುವುದರಿಂದ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತದೆ ಎನ್ನುತ್ತಾರೆ ಹೊಟೇಲ್ ಅಸೋಸಿಯೇಷನ್ ಪದಾಧಿಕಾರಿಗಳು.
GDP ಯಲ್ಲಿ ಮಂಗಳೂರಿಗೆ ಎರಡನೇ ಸ್ಥಾನ: ನಳಿನ್ ಕುಮಾರ್‌ಕಟೀಲ್
ದರ ಹೆಚ್ಚಳ ಬಿಸಿ:
ಇದೇ ವೇಳೆ ಕ್ರಿಸ್ಮಸ್ ರಜಾಕಾಲದ ಪ್ರವಾಸ ಹಾಗೂ ಹೊಸ ವರ್ಷಾಚರಣೆಗೆ ಆಗಮಿಸುವವರು ದುಬಾರಿ ದರ ತೆತ್ತು ಕೊಠಡಿ ಕಾದಿರಿಸಿದ್ದಾರೆ. ಸಾಮಾನ್ಯ ಬಾಡಿಗೆ ಕೊಠಡಿಗಳ ಬಾಡಿಗೆ 2.5 ಸಾವಿರ ರು.ನಿಂದ 5 ಸಾವಿರ ರು. ವರೆಗೆ ದಿಢೀರ್ ಹೆಚ್ಚಳ ಕಂಡಿದೆ. ಇದೇ ರೀತಿ ಖಾಸಗಿ ಟೂರಿಸ್ಟ್ ಬಸ್‌ಗಳು ಕೂಡ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿವೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಲಿವೆ. ಹೀಗಾಗಿ ಕೆಲವು ಮಂದಿ ರಜೆ ಇದ್ದರೂ ಬಾಡಿಗೆ ಕೊಠಡಿ ಸಿಗದೆ ಪ್ರಯಾಣವನ್ನೇ ರದ್ದುಪಡಿಸಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ.
ಬಿಲ್ಲವರ 3 ಬೇಡಿಕೆ ಈಡೇರಿಸಿದರೆ ಪಾದಯಾತ್ರೆ ವಾಪಸ್: ಪ್ರಣವಾನಂದ ಶ್ರೀ
ಇದೇ ಸಂದರ್ಭ ಬಳಸಿಕೊಂಡು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಕೇರಳ ಪ್ಯಾಕೇಜ್ (ವಿವಿಧ ದೇವಸ್ಥಾನ, ಪ್ರೇಕ್ಷಣೀಯ ಸ್ಥಳಗಳಿಗೆ) ಹಾಗೂ ಮಡಿಕೇರಿ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಡಿ.31ರ ವರೆಗೆ ಆಯೋಜಿಸಿದೆ.
ದೇವಸ್ಥಾನಗಳಲ್ಲಿ ರೂಂ ಖಾಲಿ ಇಲ್ಲ:
ಕ್ರಿಸ್ಮಸ್ ರಜೆಯಲ್ಲಿ ಕರಾವಳಿಯ ಧಾರ್ಮಿಕ, ಪ್ರೇಕ್ಷಣೀಯ, ಕಡಲು ಹಾಗೂ ಆಹಾರ ಸವಿಯಲೆಂದೇ ಬೇರೆ ಬೇರೆ ಊರುಗಳಿಂದ ಪ್ರವಾಸಕ್ಕೆ ಆಗಮಿಸುವವರು ಜಾಸ್ತಿ. ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ಇದಕ್ಕೆ ಆಸ್ಪದ ಇರಲಿಲ್ಲ. ಈ ಬಾರಿ ಕೋವಿಡ್ ಕಟ್ಟುನಿಟ್ಟು ಇನ್ನೂ ಜಾರಿಯಾಗಿಲ್ಲ. ಆದರೂ ಪ್ರವಾಸಿಗಳು ಸಾಕಷ್ಟುಸಂಖ್ಯೆಯಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಮುಖ್ಯವಾಗಿ ದೇವಸ್ಥಾನಗಳ ವಸತಿಗೃಹಗಳು ಈಗಲೇ ಫುಲ್ ಆಗಿವೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ವಸತಿಗೃಹಗಳು ಭರ್ತಿಯಾಗಿವೆ. ಆದರೂ ಬೇಡಿಕೆ ಕಡಿಮೆಯಾಗಿಲ್ಲ.