ಹರೇಶಂಕರ ದ್ವಾರ ಬಾಗಿಲು ಬಳಸಿಯೇ ಪ್ರವಾಸಿ ಬಸ್ ಪಯಣ, ಐತಿಹಾಸಿಕ ದ್ವಾರಗಳ ಸಂರಕ್ಷಣೆಗೆ ನಿರ್ಲಕ್ಷ್ಯ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಸೆ.11): ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇಗುಲಕ್ಕೆ ತೆರಳುವ ಮಾರ್ಗದ ತಳವಾರಿ ಘಟ್ಟದ ಹರೇಶಂಕರ ದ್ವಾರ ಬಾಗಿಲು ಮೂಲಕವೇ ಪ್ರವಾಸಿಗರ ಬಸ್‌ಗಳು ತೆರಳುತ್ತಿವೆ. ಈ ಐತಿಹಾಸಿಕ ಬಾಗಿಲಿಗೆ ಧಕ್ಕೆಯಾಗುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಮತ್ತೆ ನಿರ್ಲಕ್ಷ್ಯ ವಹಿಸುತ್ತಿವೆ. ಹಂಪಿಯ ತಳವಾರಿ ಘಟ್ಟದ ಹರೇಶಂಕರ ದ್ವಾರಬಾಗಿಲು ಮೂಲಕ ಘನ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಎಂದು ಯುನೆಸ್ಕೊ ಈ ಹಿಂದೆಯೇ ಸೂಚಿಸಿತ್ತು. ಆದರೂ ಮೇಲಿಂದ ಮೇಲೆ ಘನ ವಾಹನಗಳು ಈ ಬಾಗಿಲು ಮೂಲಕವೇ ಬರಲಾರಂಭಿಸಲಿವೆ. ಹಲವು ಬಾರಿ ಪ್ರವಾಸಿ ವಾಹನಗಳು ಈ ದ್ವಾರದ ಕಲ್ಲುಗಳನ್ನು ಬೀಳಿಸಿದ್ದು, ಮರಳಿ ಪ್ರತಿಷ್ಠಾಪಿಸಲಾಗಿದೆ. ಹೀಗಿದ್ದರೂ ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ.
undefined
ಶೂಟಿಂಗ್ ಪ್ಯಾಕಪ್:
ಹರೇ ಶಂಕರ ದ್ವಾರಬಾಗಿಲು ಹಾಗೂ ವಿಜಯ ವಿಠ್ಠಲ ದೇಗುಲದ ಬಳಿ ದೊಡ್ಡ ದೊಡ್ಡ ಕ್ರೇನ್‌ಗಳನ್ನು ಬಳಸುವಂತಿಲ್ಲ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದರಿಂದ; ಪರವಾನಗಿ ಇದ್ದರೂ ಬಾಲಿವುಡ್ ನಟ ಅಕ್ಷಯ್ ಕುಮಾರ ನಟನೆಯ ‘‘ರೌಡಿ ರಾಠೋಡ’’ ಚಿತ್ರದ ಶೂಟಿಂಗ್ ನಿಲ್ಲಿಸಿ, ಪ್ಯಾಕಪ್ ಮಾಡಲಾಗಿತ್ತು. ಆಗ ಇದ್ದ ಖಡಕ್ ಆಡಳಿತ ಈಗ ಕಾಣಿಸದೇ ಇರುವುದು ಅಚ್ಚರಿ ಮೂಡಿಸಿದೆ.
ಹೊಸಪೇಟೆ: ಧಾರಾಕಾರ ಮಳೆಗೆ ಧರೆಗುರುಳಿದ ಹಂಪಿ ಶಿವಾಲಯ ಮಂಟಪ
ಹಂಪಿಯಲ್ಲಿ ಆಂಧ್ರಪ್ರದೇಶ ಮೂಲದ ಪ್ರವಾಸಿ ಬಸ್‌ಯೊಂದು ದ್ವಾರ ಬಾಗಿಲಿನ ಕಲ್ಲುಗಳನ್ನು ಬೀಳಿಸಿತ್ತು. ಬಳಿಕ ಮಂತ್ರಾಲಯದಿಂದ ಬಂದ ಭಕ್ತರ ವಾಹನಗಳನ್ನು ಶ್ರೀರಘುನಂದನ ತೀರ್ಥರ ಆರಾಧನೋತ್ಸವಕ್ಕೆ ತೆರಳಲು ಬಿಟ್ಟಿರಲಿಲ್ಲ. ಆದರೆ, ಈಗ ಮಾತ್ರ ಪ್ರವಾಸಿ ಬಸ್‌ಗಳು ಹಾಗೂ ಬೃಹತ್ ವಾಹನಗಳು ಬಂದರೂ ಸೆಕ್ಯೂರಿಟಿ ಗಾರ್ಡ್‌ಗಳು ಸುಮ್ಮನೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಹಂಪಿಯ ಶ್ರೀಕೃಷ್ಣ ದೇಗುಲದ ಬಳಿಯ ಪ್ರವೇಶ ದ್ವಾರದಲ್ಲೂ ಈ ಹಿಂದೆ ಪ್ರವಾಸಿ ಬಸ್‌ಗಳು ಪ್ರವೇಶದ್ವಾರದ ಕಲ್ಲುಗಳನ್ನು ಬೀಳಿಸಿದ್ದವು. ಹಂಪಿಯ ಈ ಪ್ರದೇಶದಲ್ಲಿ ಹಾಗೂ ತಳವಾರಿ ಘಟ್ಟದ ಹರೇಶಂಕರ ಪ್ರವೇಶದ್ವಾರದ ಬಳಿ ಘನ ವಾಹನಗಳು ಹಾಗೂ ಬಸ್‌ಗಳು ಬಾರದಂತೇ ಕ್ರಮವಹಿಸಬೇಕು ಎಂಬುದು ಚರಿತ್ರೆಪ್ರಿಯರ ಆಗ್ರಹವಾಗಿದೆ.
ಸೆಕ್ಯೂರಿಟಿ ಗಾರ್ಡ್‌ಗಳು ಮಾಯ:
ಹಂಪಿಯ ಹರೇಶಂಕರ ಬಾಗಿಲು ಬಳಿ ಪ್ರವಾಸಿಗರ ಬಸ್ ಬಂದರೂ ಸೆಕ್ಯೂರಿಟಿ ಗಾರ್ಡ್‌ಗಳು ಇರಲಿಲ್ಲ. ಸೆ. 10ರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲದ ವೇಳೆ ಈ ಘಟನೆ ನಡೆದಿದೆ. ವೆಂಕಟಾಪುರದ ಮಾರ್ಗದ ಮೂಲಕ ವಿಜಯ ವಿಠ್ಠಲ ದೇಗುಲಕ್ಕೆ ತೆರಳಿದ್ದ ಬಸ್, ಮರಳಿ ಬರುವಾಗ ಅದೇ ಮಾರ್ಗದ ಮೂಲಕ ತೆರಳದೆ, ಹರೇಶಂಕರ ಬಾಗಿಲು ಮೂಲಕ ಹೋಗಿದೆ. ಈ ಬಾಗಿಲು ದಾಟಲು 15 ನಿಮಿಷ ಚಾಲಕ ಸಮಯ ತೆಗೆದುಕೊಂಡರೂ, ಅಲ್ಲಿ ಕಾವಲುಗಾರರು ಹಾಗೂ ಪೊಲೀಸರು ಸುಳಿಯದೇ ಇರುವುದು ಅಚ್ಚರಿಯನ್ನುಂಟು ಮಾಡಿದೆ. ಒಪ್ಪಂದದ ಮೇರೆಗೆ ಶಾಲಾ ಮಕ್ಕಳನ್ನು ಸರ್ಕಾರಿ ಬಸ್ ಹಂಪಿ ಪ್ರವಾಸಕ್ಕೆ ಬಂದಿದೆ. ಮಾರ್ಗ ತೋರಬೇಕಿದ್ದ ಕಾವಲುಗಾರರೇ ಇಲ್ಲದ್ದರಿಂದ, ಈ ಬಸ್ ತಿಳಿಯದೇ ನಿರ್ಬಂಧಿತ ಪ್ರದೇಶದಿಂದಲೇ ಬಂದಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೂ ಶೇ.40 ಕಮಿಷನ್..!
ಇನ್ನೂ ಹಂಪಿಯಲ್ಲಿ ರಾತ್ರಿ ಹೊತ್ತಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಗಸ್ತು ತಿರುಗುವುದು ಕಡಿಮೆಯಾಗಿದೆ. ಈ ಹಿಂದೆ ದಿನಗೂಲಿ ಮೇಲೆ ನೇಮಕವಾಗಿದ್ದ ಕಾವಲುಗಾರರನ್ನು ರಾತ್ರಿ ಪಾಳಿಗೆ ಹಾಕಲಾಗುತ್ತಿತ್ತು. ಈಗ ಸೆಕ್ಯೂರಿಟಿಯನ್ನು ಏಜೆನ್ಸಿಯೊಂದಕ್ಕೆ ವಹಿಸಲಾಗಿದೆ. ಆದರೆ, ರಾತ್ರಿ ಹೊತ್ತು ಈ ಏಜೆನ್ಸಿ ಕಾವಲುಗಾರರಿಗೆ ಬ್ಯಾಟರಿ ಹಿಡಿದು ಹುಡುಕುವಂತಾಗಿದೆ ಎಂಬುದು ಸ್ಥಳೀಯರ ದೂರಾಗಿದೆ.
ಹಂಪಿಯ ತಳವಾರಿ ಘಟ್ಟದ ಹರೇಶಂಕರ ಬಾಗಿಲು ಹಾಗೂ ಶ್ರೀಕೃಷ್ಣ ದೇಗುಲದ ಬಳಿಯ ಇಂಥ ಘಟನೆಗಳು ನಡೆಯದಂತೆ ತಡೆ ಹಿಡಿಯಬೇಕು. ಭಾರಿ ವಾಹನಗಳು ಹಾಗೂ ಬಸ್‌ಗಳು ಈ ದ್ವಾರಗಳ ಮೂಲಕ ತೆರಳದಂತೇ ಕಟ್ಟುನಿಟ್ಟಾಗಿ ನಿರ್ಬಂಧವಿಧಿಸಬೇಕು. ಸಡಿಲಿಸಿದರೆ, ಐತಿಹಾಸಿಕ ಈ ಪ್ರವೇಶದ್ವಾರಗಳು ಉಳಿಯುವುದಿಲ್ಲ. ಅವುಗಳ ಸಂರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕು ಅಂತ ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ತಿಳಿಸಿದ್ದಾರೆ.