ತಾಪಮಾನ ಹೆಚ್ಚಳ: ಮೃಗಾಲಯ ಪ್ರಾಣಿಗಳಿಗೆ ನೀರಿನ ಸಿಂಚನ- ಐಸ್ಕ್ಯೂಬ್, ಏರ್ಕೂಲರ್, ಫ್ಯಾನ್ ಅಳವಡಿಕೆ

By Kannadaprabha NewsFirst Published May 6, 2024, 2:06 PM IST
Highlights

ಹೆಚ್ಚುತ್ತಿರುವ ತಾಪಮಾನವು ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳ ಮೇಲೆ ಪರಿಣಾಮ ಬೀರದಿರಲು ಮೃಗಾಲಯವು ಕೆಲವು ಬೇಸಿಗೆ ನಿರ್ವಹಣಾ ಕ್ರಮ ಕೈಗೊಳ್ಳಲಾಗಿದೆ.

  ಮೈಸೂರು :  ಹೆಚ್ಚುತ್ತಿರುವ ತಾಪಮಾನವು ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳ ಮೇಲೆ ಪರಿಣಾಮ ಬೀರದಿರಲು ಮೃಗಾಲಯವು ಕೆಲವು ಬೇಸಿಗೆ ನಿರ್ವಹಣಾ ಕ್ರಮ ಕೈಗೊಳ್ಳಲಾಗಿದೆ.

ನೀರಿನ ಜೆಟ್ ಮತ್ತು ಸಿಂಪರಣೆಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಶಾಖದ ಒತ್ತಡ ತಡೆಗಟ್ಟಲು ಎಲ್ಲಾ ಪ್ರಾಣಿ ಮನೆಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಪಕ್ಷಿ ಮನೆಗಳಲ್ಲಿ ಎಲ್ಲಾ ಪಕ್ಷಿಗಳಿಗೆ ತಂಪಾದ ವಾತಾವರಣ ನಿರಮಿಸಲು ತಂಪಾದ ನೀರಿನ ಸಿಂಪರಣೆ ಒದಗಿಸಲಾಗಿದೆ.

ರಾತ್ರಿ ವೇಳೆ ಪ್ರಾಣಿಗಳು ಒಳಾವರಣಗಳಲ್ಲಿ ಆರಾಮದಾಯಕ ಸ್ಥಿತಿಯಲ್ಲಿರಲು ಫ್ಯಾನ್ ಮತ್ತು ಕೂಲರ್ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ತಂಪಾದ ಆಹಾರ ಕ್ರಮವನ್ನು ಖಾತ್ರಿಪಡಿಸಲು ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ , ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು ನೀರಿನಾಂಶವುಳ್ಳ ತರಕಾರಿ ಮತ್ತು ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಮುಂತಾದವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ನೀಡಲಾಗುತ್ತಿದೆ. ಒಆರ್.ಎಸ್ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ. ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶ ನಿಯಂತ್ರಿಸಲು ನೆರವಾಗುವಂತೆ ಐಸ್ಬ್ಲಾಕ್ ಒದಗಿಸಲಾಗುತ್ತಿದೆ.

ಎಲ್ಲಾ ಬಗೆಯ ಸಸ್ಯಾಹಾರಿ ಪ್ರಾಣಿಮನೆಗಳಲ್ಲಿ ಕೆಸರಿನ ಕೊಳ ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣ ಕಲ್ಪಿಸಲಾಗಿದೆ. ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಪ್ರಾಣಿ ಮನೆಗಳಲ್ಲಿ ಚಪ್ಪರ ಒದಗಿಸಲಾಗಿದೆ.

ಪ್ರಾಣಿಗಳ ಒಳಾವರಣ ತಂಪಾಗಿರಿಸಲು ಒಳಾವರಣದ ತಾರಸಿಗಳಲ್ಲಿ ಟೆರೇಸ್ ಗಾರ್ಡನಿಂಗ್ ಪ್ರಾರಂಭಿಸಲಾಗಿದೆ. ಪ್ರಾಣಿಗಳ ಒಳಾವರಣಗಳು ಸೂರ್ಯನ ಶಾಖ ಹೀರಿಕೊಳ್ಳುವುದನ್ನು ತಪ್ಪಿಸಲು ಒಳಾವರಣಗಳ ತಾರಸಿಗೆ ಸುಣ್ಣ ಹಚ್ಚುವ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪ್ರಾಣಿ ಮನೆಗಳಲ್ಲಿಯೂ ಉಷ್ಣಾಂಶ ತಿಳಿಯಲು ಮಾಪಕ ಅಳವಡಿಸಲಾಗಿದೆ. ಉಷ್ಣಮಾಪಕಗಳು ಏರುತ್ತಿರುವ ತಾಪಮಾನದಿಂದ ಮೃಗಾಲಯದೊಳಗಿರುವ ಎಲ್ಲಾ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿ ರಕ್ಷಿಸಲು ಹಾಗೂ ಅವುಗಳನ್ನು ಕ್ಷೇಮವಾಗಿರಿಸಲು ಸಹಾಯಕವಾದ ಸಾಧನಗಳಾಗಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

click me!