ಗಿರಿಗಳಲ್ಲಿ ಪ್ರವಾಸಿಗರ ಹಿಂಡು; ಜನರಲ್ಲಿ ಕೊರೋನಾ ಆತಂಕ

Kannadaprabha News   | Asianet News
Published : Jun 29, 2020, 03:46 PM IST
ಗಿರಿಗಳಲ್ಲಿ ಪ್ರವಾಸಿಗರ ಹಿಂಡು; ಜನರಲ್ಲಿ ಕೊರೋನಾ ಆತಂಕ

ಸಾರಾಂಶ

ತುಂತುರು ಮಳೆ, ಮೇಘ ಮಾಲೆಯಲ್ಲಿ ಮುಚ್ಚಿರುವ ಬೃಹತ್‌ ಬೆಟ್ಟಗಳ ಸೊಬಗನ್ನು ನೋಡಲು ಕೋವಿಡ್‌-19 ಹಾಟ್‌ ಸ್ಪಾಟ್‌ ಆಗಿರುವ ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ತಾಣಗಳಿಗೆ ಬರುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪ್ರವಾಸಿ ಕೇಂದ್ರಗಳಿಗೆ ಬರುತ್ತಿರುವುದು ಕೊರೋನಾ ಆತಂಕ ಹೆಚ್ಚುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜೂ.29): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕೊರೋನಾ ಮಿಂಚಿನ ಓಟ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ತುಂತುರು ಮಳೆ, ಮೇಘ ಮಾಲೆಯಲ್ಲಿ ಮುಚ್ಚಿರುವ ಬೃಹತ್‌ ಬೆಟ್ಟಗಳ ಸೊಬಗನ್ನು ನೋಡಲು ಕೋವಿಡ್‌-19 ಹಾಟ್‌ ಸ್ಪಾಟ್‌ ಆಗಿರುವ ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ತಾಣಗಳಿಗೆ ಬರುತ್ತಿದ್ದಾರೆ.

ಭಾನುವಾರ ಒಂದೇ ದಿನ ಗಿರಿಪ್ರದೇಶಕ್ಕೆ ಬಂದು ಹೋದ ಪ್ರವಾಸಿಗರ ಸಂಖ್ಯೆ ಸುಮಾರು 7 ಸಾವಿರ. ಚೆಕ್‌ ಪೋಸ್ಟ್‌ನಲ್ಲಿ ದಾಖಲಾಗಿರುವ ಪ್ರಕಾರ 537 ಬೈಕ್‌, 710 ಕಾರು, 20 ಟಿ.ಟಿ. ವಾಹನಗಳು, 1 ಮಿನಿ ಬಸ್‌. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವೀಕೆಂಡ್‌ನಲ್ಲಿ ಬಂದು ಹೋದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಜನರ ಹಾಟ್‌ ಬೀಟ್‌ ಜೋರಾಗಿದೆ.

ಲಾಕ್‌ ಡೌನ್‌ ಸಂದರ್ಭದಲ್ಲಿ ಸುಮಾರು 85 ದಿನಗಳ ಕಾಲ ಗ್ರೀನ್‌ ಝೋನ್‌ನಲ್ಲಿದ್ದ ಕಾಫಿಯ ನಾಡಿನಲ್ಲಿ ಇದೀಗ ಕೊರೋನಾ ಸೋಂಕಿತರ ಸಂಖ್ಯೆ 48ಕ್ಕೆ ಏರಿದೆ. ಚಿಕಿತ್ಸೆಯ ನಂತರ ಈ ಸಂಖ್ಯೆ 25ಕ್ಕೆ ಇಳಿದಿದೆ. ಕೆಲವು ದಿನಗಳಿಂದ ಪಾಸಿಟಿವ್‌ ಸಂಖ್ಯೆ ಏರುಮುಖ ಮಾಡಿದೆ. ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿ ರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲಾ ಕೇಂದ್ರಕ್ಕೆ ಬರುತ್ತಿರುವುದರಿಂದ ಭೀತಿ ಹೆಚ್ಚಾಗಿದೆ.

ಹಸಿರು ಗಿರಿಗಳ ನಾಡು ಚಿಕ್ಕಮಗಳೂರಲ್ಲಿ ಗರಿಗೆದರಿದ ಟೂರಿಸಂ

ಭಾನುವಾರ ಬಂದಿರುವ ಪ್ರವಾಸಿಗರ ಪೈಕಿ ಅತಿ ಹೆಚ್ಚಿನ ಮಂದಿ ಬೆಂಗಳೂರಿನವರು, ಎಲ್ಲೆಂದರಲ್ಲಿ ಗುಂಪು ಗುಂಪಾಗಿ ನಿಲ್ಲುತ್ತಿದ್ದಾರೆ. ಮಾಸ್ಕ್‌ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಇಲ್ಲವೇ ಇಲ್ಲ. ಮುಳ್ಳಯ್ಯನಗಿರಿಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳು ನಿಲ್ಲಲು ಜಾಗ ಇಲ್ಲದಿದ್ದರಿಂದ ರಸ್ತೆಯಲ್ಲೇ ಕಿಲೋ ಮೀಟರ್‌ಗಟ್ಟಲೇ ನಿಂತಿದ್ದವು. ಕಾರುಗಳ ಕಾರುಬಾರು, ಗಿರಿಯಲ್ಲಿ ಪ್ರವಾಸಿಗರ ಹಿಂಡಿರುವ ಚಿತ್ರಗಳು ಎಲ್ಲೆಡೆ ವೈರಲ್‌ ಆಗಿವೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಭೀತಿ ಹೆಚ್ಚು ಮಾಡಿದೆ. ಬಹಳಷ್ಟುಮಂದಿ ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಜೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಜನರು ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಅದರಲ್ಲೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಚಿಕ್ಕಮಗಳೂರಿಗೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಕೊರೋನಾ ನಿಯಂತ್ರಣ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ಹಾಕಬೇಕು - ಸೂರಿ ಪ್ರಭು, ಪ್ರಧಾನ ಕಾರ್ಯದರ್ಶಿ, ಮಲೆನಾಡು ಗ್ರಾಹಕರ ಹಕ್ಕು ಹಿತರಕ್ಷಣಾ ವೇದಿಕೆ
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC