ಹತ್ತಾರು ಸಮಸ್ಯೆಗಳಿಂದ ನರಳುತ್ತಿರುವ ಉ.ಕ: 2014ರಲ್ಲೇ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು ಬರೆದ ಪತ್ರ ವೈರಲ್!

By Kannadaprabha News  |  First Published Dec 15, 2024, 7:34 PM IST

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿ 2014 ರಲ್ಲಿ ಲಿಂ. ಡಾ.ತೋಂಟದ ಸಿದ್ದಲಿಂಗ ಶ್ರೀಗಳು ಸರ್ಕಾರಕ್ಕೆ ಬರೆದ ಪತ್ರ ವೈರಲ್. ಪತ್ರದಲ್ಲಿನ ಸಾರಾಂಶ ಇಂದಿಗೂ ಪ್ರಸ್ತುತ. ಉತ್ತರ ಕರ್ನಟಕದಲ್ಲಿ ಅಧಿವೇಶನ ನಡೆಸಿದರೆ ಸಾಲದು. ಅಭಿವೃದ್ಧಿಗೆ ಬೇಕಿದೆ ಆದ್ಯತೆ. 


ಗದಗ(ಡಿ.15):  ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವತ್ತ ಸರ್ಕಾರ ಹೆಜ್ಜೆ ಹಾಕುತ್ತಿದೆ. ಆದರೆ ಕೇವಲ ಅಧಿವೇಶನ ನಡೆಸುವುದರಿಂದ ಪ್ರಯೋಜನವಿಲ್ಲ, ಆದರೊಟ್ಟಿಗೆ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿ, ವಿಶೇಷ ಯೋಜನೆ ರೂಪಿಸಬೇಕಿದೆ. 

ಈ ರೀತಿಯ ಚರ್ಚೆ ಬೆಳಗಾವಿ ಅಧಿವೇಶನ ಪ್ರಾರಂಭದ ದಿನದಿಂದಲೂ ಕೇಳಿ ಬರುತ್ತಿದೆ. ಆದರೆ ಅಭಿವೃದ್ಧಿಯಲ್ಲಿನ ಅಸಮಾನತೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಗದಗಿನ ಲಿಂ. ಡಾ. ತೋಂಟದ ಸಿದ್ದಲಿಂಗ ಶ್ರೀಗಳು 2014ರ ಡಿ.5ರಂದು ಸರ್ಕಾರಕ್ಕೊಂದು ಬಹಿರಂಗ ಪತ್ರ ಬರೆದು ಸರ್ಕಾರದ ಗಮನ ಸೆಳೆದಿದ್ದರು. 10 ವರ್ಷಗಳ ಹಿಂದೆ ಶ್ರೀಗಳು ಬರೆದಿದ್ದ ಪತ್ರ ಇಂದಿಗೂ ಪ್ರಸ್ತುತವಾಗಿದೆ. ಕಳೆದ ನಾಲೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ. 

Tap to resize

Latest Videos

ಬೆಳಗಾವಿ ಅಧಿವೇಶನ ನಡೆಸಲು ವಸೂಲಿಗಿಳಿದ ಅಧಿಕಾರಿಗಳು!?

ಪತ್ರದ ಸಾರಾಂಶ: 

undefined

ಉತ್ತರ ಕರ್ನಾಟಕ ಎಂದರೆ ನಮ್ಮ ಕಣ್ಣ ಮುಂದೆ ಸುಳಿಯುವುದು ಭೀಕರ ಬರಗಾಲದಿಂದ ಬಸವಳಿದ ಬಡ ಜನರು, ಪಕ್ಕದ ರಾಜ್ಯಗಳಿಗೆ ಅನ್ನ ಅರಸಿಕೊಂಡು ಗುಳೆ ಹೋಗುವ ದೃಶ್ಯ, ಇಲ್ಲವೇ ಭಯಂಕರ ನೆರೆ ಹಾವಳಿಗೆ ತುತ್ತಾಗಿ ಕುಸಿದ ಮನೆಗಳಡಿ, ಹರಿಯುವ ನದಿಗಳಲ್ಲಿ ಹೆಣವಾಗುವ ನಿಷ್ಪಾಪಿ ಜನತೆಯ ದೃಶ್ಯ. ಹಳ್ಳಿಗಳಿರಲಿ ಪಟ್ಟಣಗಳಲ್ಲೂ ಹಾಳುಬಿದ್ದ ರಸ್ತೆಗಳು, ಶಿಕ್ಷಕರಿಲ್ಲದ ಶಾಲೆಗಳು, ವಿದ್ಯುತ್ ಇಲ್ಲದ ಗ್ರಾಮಗಳು, ಮನುಕುಲಕ್ಕೆ ಕಳಂಕವಾದ ದೇವದಾಸಿ ಪದ್ಧತಿ, ಈಡೇರದ ಯೋಜನೆಗಳು, ಕಾಗದದಲ್ಲಿ ಮಾತ್ರ ಕಾಣಸಿಗುವ ಕೊಳವೆ ಬಾವಿಗಳು, ವಿದೇಶ ಪ್ರವಾಸಕ್ಕೆ ಹೋಗುವಶಾಸಕರು, ಸ್ವದೇಶದಲ್ಲೇಪರದೇಶಿಗಳಾದ ಪ್ರಜೆಗಳು, ಬಂದೂಕಿನ ನಳಿಕೆಗೆ ಗುರಿಯಾಗುವ ಅನ್ನದಾತ ರೈತರ ದೇಹಗಳು, ಆಗೀಗ ಭಾರತದ ಗಡಿಯಂಚಿನಿಂದ ಬರುವ ಯುವ ಸೈನಿಕರ ಶವಗಳು, ಅವುಗಳೆದುರಿಗೆ ಕಣ್ಣೀರಾಗಿ ಮರು ದಿನ ವೃತ್ತ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬೀಗುವ ಮುಖಂಡರು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂದು ಹೇಳಿದರು ಅಲ್ಲದೇ ಇಲ್ಲಿ ಸ್ಥಾಪಿತವಾಗುವ ವಿಶ್ವವಿದ್ಯಾಲಯಗಳ ಕುಲಪತಿಗಳಲ್ಲಿ ಪ್ರತಿ ಶತ 5ರಷ್ಟು ಉತ್ತರ ಕರ್ನಾಟಕದವರಿಲ್ಲ ಎಂಬುದು ಐತಿಹಾಸಿಕ ವ್ಯಂಗ್ಯ, ಯಾರು ಇದಕ್ಕೆಲ್ಲ ಹೊಣೆ? 94 ಜನ ಶಾಸಕರು, 12 ಜನ ಲೋಕಸಭಾ ಸದಸ್ಯರನ್ನು ಹೊಂದಿದ ಈ ಪ್ರದೇಶದಿಂದ ಆಯ್ಕೆಯಾದವರು ಮನಸ್ಸು ಮಾಡಿದ್ದರೆ ಈ ಸ್ಥಿತಿ ಈ ಇರುತ್ತಿರಲಿಲ್ಲ ಎಂದಿದ್ದರು. 

ಆರಿಸಿ ಕಳುಹಿಸಿದವರಲ್ಲಿ ಎದ್ದು ಕಾಣುವ ಸಾಂಘಿಕ ಶಕ್ತಿಯ ಕೊರತೆ, ತಮ್ಮ ಪ್ರದೇಶದ ಬಗೆಗಿನ ಉಪೇಕ್ಷೆ, ಸಾಧಿಸುವ ಛಲದ ಅಭಾವದ ಕಾರಣವಾಗಿ ಈ ಪ್ರದೇಶ ಬರಡಾಗಿ ಉಳಿದಿದೆ. ನಮ್ಮ ಶಾಸಕರಲ್ಲಿ ಎಷ್ಟು ಜನರಿಗೆ ನಂಜುಂಡಪ್ಪ ವರದಿ ಗೊತ್ತಿದೆಯೋ ಗೊತ್ತಿಲ್ಲ. ಗೊತ್ತಿದ್ದವರು ಅದರ ಅನುಷ್ಠಾನದ ಬಗೆಗೆ ಚಕಾರವೆತ್ತುತ್ತಿಲ್ಲ. 2007 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ನಂಜುಂಡಪ್ಪ ವರದಿ ಹಕ್ಕೊತ್ತಾಯದಂತೆ ಪರಿಗಣಿಸಿ ಈ ಭಾಗದ ಶಾಸಕರು ಒಗ್ಗೂಡಿ ಪ್ರಯತ್ನಿಸಿದರೂ ಸಾಕಿತ್ತು ಎಂದು ವಿಷಾಧಿಸಿದ್ದರು. 

ಬೆಳಗಾವಿಯ ಸುವರ್ಣ ವಿಧಾನಸೌಧ ನಿರ್ಮಾಣಗೊಳ್ಳಲು ಅಂದಾಜು 450 ಕೋಟಿ ಖರ್ಚಾಗಿದೆ. ವರ್ಷದಲ್ಲೊಮ್ಮೆ ಅಧಿವೇಶನ ನಡೆಸ ಲು ಇಷ್ಟೊಂದು ಖರ್ಚು ಅಗತ್ಯವೇ? ನಂಜುಂಡಪ್ಪ ವರದಿ ಅನುಲಕ್ಷಿಸಿ, ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕೆನ್ನುವ ರಾಜಕೀಯ ಇಚ್ಛಾಶಕ್ತಿ ಇದ್ದರೆ, ಉತ್ತರ ಕರ್ನಾಟಕಕ್ಕೆ ಅನುಕೂಲ ಇರುವ ಕೆಲವು ಇಲಾಖೆಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎನ್ನುವ ಸಲಹೆ ನೀಡಿದರು. 

ಪಿಡಿಒ ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗೇ ತಪ್ಪು ಮಾಹಿತಿ ನೀಡಿತೇ ಕೆಪಿಎಸ್‌ಸಿ?

ಡಾ.ಡಿ.ಎಂ.ನಂಜುಂಡಪ್ಪ ಸಮಿತಿ 953 ಪುಟಗಳ ಸುದೀರ್ಘ ವರದಿಯಲ್ಲಿ ಅನ್ಯಾಯ- ಆಸಮತೋಲನ, ಹಿಂದುಳಿದಿರುವಿಕೆ ಪ್ರದೇಶಗಳನ್ನು ಗುರುತಿಸಿತು. ಆಗಿನ 175 ತಾಲೂಕುಗಳ ಪೈಕಿ 114 ತಾಲೂಕುಗಳು ಹಿಂದುಳಿದಿವೆ ಎಂದು ತಿಳಿಸಿತ್ತು. 

ಹಿಂದುಳಿದಿರುವ ತಾಲೂಕುಗಳ ಪೈಕಿ, ಹಳೇ ಮೈಸೂರಿನ ಕೆಲವು ತಾಲೂಕುಗಳನ್ನೂ ಸಮಿತಿ ಗುರುತಿಸಿದೆ. ಅವುಗಳ ಅಭಿವೃದ್ಧಿ ಆಗಬೇಕಿದೆ ಎಂದಿದ್ದಾರೆ. ಕಾರಣ ಉತ್ತರ ಕರ್ನಾಟಕ ಅಭಿವೃದ್ಧಿಗೆ ನಂಜುಂಡಪ್ಪ ವರದಿಯ ಅನುಷ್ಠಾನ ಅತಿ ಅಗತ್ಯವಾಗಿ ಆಗಬೇಕಾದ ಕೆಲಸ ಎಲ್ಲರೂ ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸೋಣ, ಬನ್ನಿ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದ್ದರು.

click me!