KR ಪುರ : ಶಾಲೆ ಆವರಣಕ್ಕೆ ಶೌಚ ನೀರು, ಕೇಳೋರಿಲ್ಲ ಗೋಳು

By Web DeskFirst Published Jul 20, 2019, 8:52 AM IST
Highlights

ಶಾಲೆ ಆವರಣಕ್ಕೆ ಶೌಚಾಲಯದ ನೀರು ನುಗ್ಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇವರ ಗೋಳು ಮಾತ್ರ ಯಾರು ಕೇಳೋರಿಲ್ಲ.

ಕೃಷ್ಣರಾಜಪುರ [ಜು.20]: ಸರ್ಕಾರಿ ಶಾಲಾ ಆವರಣಕ್ಕೆ ಅಕ್ಕಪಕ್ಕ ಪ್ರದೇಶಗಳ ಶೌಚಾಲಯ ಕೊಳಚೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗುತ್ತಿದ್ದು, ಈ ಅವ್ಯಸ್ಥೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳು ಮೇಡಹಳ್ಳಿಯ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಮೇಡಹಳ್ಳಿಯ ಸುತ್ತಮುತ್ತ ಪ್ರದೇಶಗಳಿಂದ ಹರಿದು ಬರುವ ಶೌಚಾಲಯಗಳ ಕೊಳಚೆ ನೀರು  ಬಸವನಪುರ ವಾರ್ಡ್‌ನ ಮೇಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಸೇರುತ್ತಿದೆ. ಕೊಳಚೆ ನೀರಿನ ಜೊತೆಯಲ್ಲಿ ತೇಲಿಬರುವ ಕ್ರಿಮಿಕೀಟಗಳು, ಪ್ರತಿನಿತ್ಯ ಬೀರುವ ದುರ್ನಾತದಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕೂರಲು ಮತ್ತು ಮಧ್ಯಾಹ್ನದ ಬಿಸಿ ಊಟ ಸೇವಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

 ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಕೊಳಚೆ ನೀರಿನ ಮಧ್ಯೆ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ನಮ್ಮ ಶಾಲೆಯನ್ನು ಕೊಳಚೆ ಮೋರಿ ನೀರಿನಿಂದ ಕಾಪಾಡಿ, ನಮ್ಮ ಶಾಲೆಯಲ್ಲಿ ಸುರಕ್ಷತೆ ಇಲ್ಲದಾಗಿದೆ ಎಂಬ ಘೋಷಣೆಯನ್ನು ಕೂಗಿದರು. ನಮ್ಮ ಶಾಲೆಯಲ್ಲಿ ಎದುರಾಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಮೇಡಹಳ್ಳಿಯ ಮುಖ್ಯರಸ್ತೆಯಲ್ಲಿ ತಡೆದು ಪ್ರತಿಭಟನೆ ಮಾಡಿದರು.

ಇದ್ದ ಕಾಂಪೌಂಡ್ ಒಡೆದರು: ವಿಧಾನಸಭಾ ಚುನಾವಣೆ ವೇಳೆ ಇದ್ದ ಕಾಂಪೌಂಡು ಕೆಡವಿ ಹಾಕಿದ್ದಾರೆ, ಹೀಗಾಗಿ ಶೌಚಾಲಯದ ಕೊಳಚೆ ಮತ್ತು ಮಳೆ ನೀರು ಶಾಲೆ ಒಳಗೆ ನುಗ್ಗಲು ಕಾರಣವಾಗಿದೆ, ಪ್ರತಿದಿನ ಶಾಲೆಯ ಉಪಯೋಗಕ್ಕೆ ನೀರು ಶೇಖರಣ ತೊಟ್ಟಿಗೆ ಕೊಳಚೆ ನೀರು ಮಿಶ್ರವಾಗುತ್ತಿದೆ. ಅನಿವಾರ್ಯವಾಗಿ ಶುದ್ಧೀಕರಿಸಿ ನೀಡಲಾಗುತ್ತಿದೆ. 

ಶಾಲೆಯಲ್ಲಿ 220 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯ ಶೌಚಾಲಯ ಸುತ್ತಲು ಕೊಳಚೆ ನೀರು ಆವರಸಿಕೊಂಡಿದೆ, ಕಾಲಿಡಲು ಕಷ್ಟ ಸಾಧ್ಯವಾಗಿದೆ. ಶಾಲೆಯಲ್ಲಿ ಓದುವ ಹೆಣ್ಣುಮಕ್ಕಳು ಬಯಲು ಶೌಚಕ್ಕೆ ಹೋಗಬೇಕಾದ ಸ್ಥಿತಿ ಉದ್ಬವಿಸಿದೆ. ಹೊರಗಡೆ ಪುಂಡಪೋಕರಿಗಳ ಭಯ ಕಾಡುತ್ತಿದೆ, ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ  ಪ್ರಯೋಜನವಾಗುತ್ತಿಲ್ಲ ಎಂದು ಶಿಕ್ಷಕಿರೊಬ್ಬರು ಆಳಲು ತೊಡಿಕೊಂಡರು.

click me!