Hubballi: ಈದ್ಗಾ ಮೈದಾನದಲ್ಲಿಂದು ಟಿಪ್ಪು ಜಯಂತಿ

By Kannadaprabha NewsFirst Published Nov 10, 2022, 9:51 AM IST
Highlights

ವಿರೋಧ ಪಕ್ಷಗಳ ಆಕ್ಷೇಪದ ನಡುವೆಯೇ ಇಲ್ಲಿನ ಈದ್ಗಾ ಮೈದಾನದಲ್ಲಿ (ರಾಣಿ ಚೆನ್ನಮ್ಮ ಮೈದಾನ) ಟಿಪ್ಪು ಜಯಂತಿ ಸೇರಿದಂತೆ ಮಹಾಪುರುಷರ ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿದೆ.

ಹುಬ್ಬಳ್ಳಿ (ನ.10) : ವಿರೋಧ ಪಕ್ಷಗಳ ಆಕ್ಷೇಪದ ನಡುವೆಯೇ ಇಲ್ಲಿನ ಈದ್ಗಾ ಮೈದಾನದಲ್ಲಿ (ರಾಣಿ ಚೆನ್ನಮ್ಮ ಮೈದಾನ) ಟಿಪ್ಪು ಜಯಂತಿ ಸೇರಿದಂತೆ ಮಹಾಪುರುಷರ ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ವಿರೋಧ: ಕನಕ ಜಯಂತಿಗೆ ಶ್ರೀರಾಮ ಸೇನೆ ಮನವಿ

Latest Videos

ಕೆಲವೊಂದಿಷ್ಟುಷರತ್ತು ವಿಧಿಸಿ ಅನುಮತಿ ನೀಡಲು ನಿರ್ಧರಿಸಿದ್ದು, ಇದರಿಂದಾಗಿ ನ.10ರಂದು ಟಿಪ್ಪು ಜಯಂತಿ ಹಾಗೂ 11ರಂದು ಕನಕ ಹಾಗೂ ಓಬವ್ವ ಜಯಂತಿ ಆಚರಣೆ ನಡೆಯಲಿದೆ. ಇಷ್ಟುದಿನ ಬರೀ ಮುಸ್ಲಿ ಸಮುದಾಯದವರ ಪ್ರಾರ್ಥನೆಗೆ ಸೀಮಿತವಾಗಿದ್ದ ಮೈದಾನದಲ್ಲಿ ಇನ್ಮೇಲೆ ಮಹಾಪುರುಷರ ಜಯಂತಿಯೂ ನಡೆಯಲಿವೆ. ಆದರೆ ಇದಕ್ಕೆ ಕಾಂಗ್ರೆಸ್‌ ಹಾಗೂ ಎಐಎಂಐಎಂ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿವಾದ ಇಡೀ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ನಡುವೆ ಈ ವರ್ಷ ಗಣೇಶೋತ್ಸವ ಆಚರಣೆ ವೇಳೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತಂತೆ ದೊಡ್ಡ ಗೊಂದಲ ಉಂಟಾಗಿತ್ತು. ಕೊನೆಗೆ ಪಾಲಿಕೆಯು ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿತ್ತು.

ಇದೀಗ ಗಣೇಶೋತ್ಸವ ಮುಗಿಯುತ್ತಿದ್ದಂತೆ ಟಿಪ್ಪು, ಕನಕದಾಸರ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆಗೆ ಅವಕಾಶ ಕೊಡಬೇಕೆಂದು ಕೆಲವೊಂದಿಷ್ಟುಸಂಘಟನೆಗಳು ಮನವಿ ಸಲ್ಲಿಸಿದ್ದವು. ಅದರಂತೆ ಈ ವಿಷಯವಾಗಿ ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಮೇಯರ್‌ ಈರೇಶ ಅಂಚಟಗೇರಿ ಅವರು ಕರೆದಿದ್ದರು. ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದು ಇದೀಗ ಈ ಮೂರು ಜಯಂತಿ ಆಚರಿಸಲು ಅನುಮತಿ ನೀಡಲು ತಿಳಿಸಲಾಗಿದೆ. ಕೆಲವೊಂದಿಷ್ಟುಷರತ್ತುಗಳನ್ನು ವಿಧಿಸಲಾಗಿದೆ.

ಷರತ್ತುಗಳೇನು?

ಮಹಾಪುರುಷರ ಜಯಂತಿ ಆಚರಿಸುವ ಮುನ್ನ ಪೊಲೀಸ್‌ ಆಯುಕ್ತರಿಂದ ಅನುಮತಿ ಪಡೆಯಬೇಕು. 10 ಸಾವಿರ ರೂ. ಶುಲ್ಕವನ್ನು ಮಹಾನಗರ ಪಾಲಿಕೆಗೆ ಪಾವತಿಸಬೇಕು. ಪೆಂಡಾಲ್‌ ಹಾಕಲು ಆಯೋಜಿಸಿದ್ದಲ್ಲಿ ಅದರ ಅಳತೆ 20 ಅಡಿ ಉದ್ದ, 30 ಅಡಿ ಅಗಲಕ್ಕೆ ಮೀರಬಾರದು. ಪಾಲಿಕೆ ಸೂಚಿಸಿದ ಜಾಗೆಯಲ್ಲೇ ಪೆಂಡಾಲ್‌ ಹಾಕಬೇಕು.

ಟಿಪ್ಪು ಸುಲ್ತಾನರ 3 ಅಡಿ ಹಾಗೂ 5 ಅಡಿ ಅಳತೆಯ ಒಂದು ಭಾವಚಿತ್ರ ಹೊರತಾಗಿ ಯಾವುದೇ ರೀತಿ ಭಾವುಟಗಳು ಹಾಗೂ ಇತರೆ ಮೈದಾನದ ಭಾಗದಲ್ಲಿ ಯಾವುದೇ ರೀತಿಯ ವಿವಾದಿತ ಫೋಟೋಗಳನ್ನು ಅಥವಾ ಭಿತ್ತಿ ಪತ್ರಗಳನ್ನು ಅಳವಡಿಸಕೂಡದು ಮತ್ತು ಪ್ರದರ್ಶಿಸಬಾರದು.

ಯಾವುದೇ ರೀತಿಯ ಗೊಂದಲಗಳಿಗೆ ಗಲಭೆಗಳಿಗೆ ಅವಕಾಶ ನೀಡಬಾರದು. ಸಾರ್ವಜನಿಕರ ವಿರೋಧ, ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವಂತಹ ಕಾರ್ಯಕ್ರಮ ಆಯೋಜಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ಸಾರ್ವಜನಿಕ ಸ್ವಸ್ಥತೆ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಸಂಪೂರ್ಣ ಜವಾಬ್ದಾರಿ ಸಂಘಟಕರೇ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಲಿಖಿತವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದು ಸಭೆಯ ನಡಾವಳಿಗಳ ಬಗ್ಗೆ ಆಯುಕ್ತರಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್‌ ಅಂಚಟಗೇರಿ ವಿವರಣೆ ನೀಡಿದರು.

ಸಭೆಯಲ್ಲಿ ವಿರೋಧ ಪಕ್ಷದ ನಾಯಕ ದೊರಾಜ್‌ ಮನಿಕುಂಟ್ಲಾ. ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವು ಮೆಣಸಿನಕಾಯಿ, ಸುರೇಶ ಬೇದರೆ, ವಿಜಯಾನಂದ ಶೆಟ್ಟಿ, ಸೇರಿದಂತೆ ಹಲವರಿದ್ದರು. ಪಾಲಿಕೆಯ ಈ ನಿರ್ಧಾರದಿಂದ ಮಹಾಪುರುಷರ ಜಯಂತಿ ಕಾರ್ಯಕ್ರಮಗಳು ಈ ಮೈದಾನದಲ್ಲಿ ಇನ್ಮೇಲೆ ನಡೆಯಲಿವೆ.

ಕಾಂಗ್ರೆಸ್‌, ಎಐಎಂಐಎಂ ಒಂದು ಬಣ ವಿರೋಧ

ಈದ್ಗಾ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಪ್ರಾರ್ಥನೆಗೆ ಹೊರತುಪಡಿಸಿ ಟಿಪ್ಪು ಜಯಂತಿ ಸೇರಿದಂತೆ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ನೀಡಬಾರದು ಎಂಬುದು ಮಹಾನಗರ ಜಿಲ್ಲಾ ಕಾಂಗ್ರೆಸ್‌ ನಿಲುವಾಗಿದೆ ಎಂದು ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ ತಿಳಿಸಿದ್ದಾರೆ. ಅವಕಾಶ ನೀಡುವ ಮೂಲಕ ಅನವಶ್ಯಕ ಗೊಂದಲಗಳಿಗೆ ದಾರಿ ಮಾಡಿಕೊಡಬಾರದು ಎಂದೂ ಅವರು ಆಗ್ರಹಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆಗೆ ಕೋರಿ ಪಕ್ಷದ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಸಲ್ಲಿಸಿರುವ ಮನವಿಯನ್ನು ಪರಿಗಣಿಸಬಾರದು. ಇದಕ್ಕೆ ಪಕ್ಷದ ರಾಜ್ಯ, ಜಿಲ್ಲಾ ಹಾಗೂ ಶಹರ ಘಟಕದಿಂದ ತೀವ್ರ ವಿರೋಧವಿದೆ ಎಂದು ಎಐಎಂಐಎಂ ಜಿಲ್ಲಾಧ್ಯಕ್ಷ ನಜೀರ್‌ ಅಹ್ಮದ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ನಡುವೆ ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ನೀಡಿರುವ ಅನುಮತಿ ತಮ್ಮ ಗೆಲುವು ಎಂದು ಗುಂಟ್ರಾಳ ಹೇಳಿಕೊಂಡಿದ್ದಾರೆ.

ಮೇಯರ್‌ಗೆ ಪತ್ರ

ಈದ್ಗಾ ಮೈದಾನ ವಿವಾದ ಪ್ರಕರಣ ಇನ್ನೂ ಕೋರ್ಚ್‌ನಲ್ಲಿ ಇದ್ದು, ಇತ್ಯರ್ಥವಾಗುವರೆಗೂ ಯಾವುದೇ ಆಚರಣೆಗೆ ಅವಕಾಶ ಕೊಡಬಾರದು ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಕಾಂಗ್ರೆಸ್‌ನ ದೊರಾಜ್‌ ಮನ್ನಿಕುಂಟ್ಲ ಮೇಯರ್‌ಗೆ ಪತ್ರ ಬರೆದಿದ್ದಾರೆ. ಹಲವಾರು ವರ್ಷಗಳಿಂದ ಮುಸ್ಲಿಂ ಸಮಾಜದವರು ಪ್ರಾರ್ಥನೆಗೆ ಮಾತ್ರ ಉಪಯೋಗವಾಗುತ್ತಿದ್ದ ಮೈದಾನದಲ್ಲಿ ಇತರೆ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹಾಗಾಗಿ ಇತ್ಯರ್ಥ ಆಗುವರೆಗೂ ಯಾವುದೇ ಸಂಘ ಸಂಸ್ಥೆಗಳಿಗೆ ವಿವಿಧ ಆಚರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಎಐಎಂಐಎಂ ನಲ್ಲಿ ಒಡಕು ಬಹಿರಂಗ

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತಾಗಿ ಎಐಎಂಐಎಂ ಪಕ್ಷದಲ್ಲಿ ಭಿನ್ನಮತ ಸ್ಪೊಟಗೊಂಡಿದೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾದಂತಾಗಿದೆ. ಪಕ್ಷದ ಜಿಲ್ಲಾಧ್ಯಕ್ಷರೂ ಅದ ನಜೀರ್‌ ಅಹ್ಮದ ಹೊನ್ಯಾಳ ಹಾಗೂ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಮಧ್ಯೆ ಎರಡು ಬಣಗಳು ಸೃಷ್ಟಿಯಾದಂತಾಗಿದೆ.

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಪರವಾನಗಿ ನೀಡಬೇಕೆಂದು ಗುಂಟ್ರಾಳ ನ.7ರಂದು ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಈ ವಿಷಯ ಪಕ್ಷದಲ್ಲಿ ನಿರ್ಧಾರ ಮತ್ತು ಚರ್ಚೆಯೇ ಆಗಿಲ್ಲ. ಇದು ಅವರ ಏಕಪಕ್ಷೀಯ ತೆಗೆದುಕೊಂಡ ನಿರ್ಧಾರ. ಹಾಗಾಗಿ ಪಕ್ಷಕ್ಕೂ ಮತ್ತು ಗುಂಟ್ರಾಳ ಮನವಿಗೂ ಸಂಬಂಧವಿಲ್ಲ. ಈ ಮನವಿಗೆ ಪಕ್ಷದ ವಿರೋಧವಿದೆ ಎಂದು ಜಿಲ್ಲಾಧ್ಯಕ್ಷ ನಜೀರ್‌ ಹೊನ್ಯಾಳ ಪತ್ರ ಬರೆದಿದ್ದಾರೆ. ಇದಲ್ಲದೇ ಗುಂಟ್ರಾಳ ಮನವಿ ಮೇರೆಗೆ ಅನುಮತಿ ಕೊಟ್ಟರೆ ಶಾಂತಿ ಭಂಗವಾದರೆ ಎಐಎಂಐಎಂ ಪಕ್ಷ ಮತ್ತು ಕಾರ್ಯಕರ್ತರು ಹೊಣೆಯಲ್ಲ ಎಂದು ಜಿಲ್ಲಾಧ್ಯಕ್ಷರು ಪತ್ರದಲ್ಲಿ ಸ್ಪಷ್ಟಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಂಘರ್ಷ ಸಾಧ್ಯತೆ: ಟಿಪ್ಪು ಜಯಂತಿ ಆಚರಣೆಗೆ ಸಿಗುತ್ತಾ ಅನುಮತಿ?

11ಗಂಟೆಗೆ ಜಯಂತಿ

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಕೋರಿಗೆ ಸ್ಪಂದಿಸಿ ಪಾಲಿಕೆ ನೀಡಿರುವ ಅನುಮತಿರುವುದು ಎಐಎಂಐಎಂ ಪಕ್ಷದ ಹೋರಾಟಕ್ಕೆ ಸಂದ ಜಯ. ಬೆಳಿಗ್ಗೆ 11ಗಂಟೆಗೆ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ಎಐಎಂಐಎಂನ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ತಿಳಿಸಿದ್ದಾರೆ.

click me!