
ಉತ್ತರ ಕನ್ನಡ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಡಿ. 12ರಂದು ಇಲ್ಲಿಯ ಮುಂಡಗೋಡ ಟಿಬೆಟಿಯನ್ ಕಾಲನಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರ ಸ್ವಾಗತಕ್ಕೆ ಟೆಬೆಟಿಯನ್ ಬಡಾವಣೆಯಲ್ಲಿ ಭರದ ಸಿದ್ಧತೆ ನಡೆದಿದೆ. ಟಿಬೆಟಿಯನ್ ಕಾಲನಿ ಈಗ ಟಿಬೆಟಿಯನ್ ಸಂಸ್ಕೃತಿಯಂತೆ ಶೃಂಗಾರಗೊಂಡಿದೆ. ಹಲವು ವರ್ಷಗಳಿಂದ ದುರಸ್ತಿ ಕಾಣದ ರಸ್ತೆಗಳು ಡಾಂಬರಿಕರಣಗೊಳ್ಳುತ್ತಿವೆ. ಕಾಲನಿಯ ಮಠಗಳು ಸುಣ್ಣ ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತಿವೆ. ಕಾಲನಿಯ ಪ್ರತಿ ರಸ್ತೆಗಳಲ್ಲಿ ದಲೈಲಾಮಾ ಸ್ವಾಗತದ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ವ್ಯಾಪಾರಕ್ಕೆಂದು ಮುಂಬೈ, ಪುಣೆ, ಬೆಂಗಳೂರು, ದೆಹಲಿ, ಚೆನ್ನೈ, ಹಿಮಾಚ್ಚಲ ಪ್ರದೇಶ ಸೇರಿದಂತೆ ವಿವಿಧ ಕಡೆಗೆ ವಲಸೆ ಹೋಗಿದ್ದ ಇಲ್ಲಿಯ ಸಹಸ್ರಾರು ಟಿಬೆಟಿಯನ್ನರು ಈಗ ತಮ್ಮ ಧರ್ಮ ಗುರು ಪದಾರ್ಪಣೆ ಮಾಡುತ್ತಿರುವುದರಿಂದ ನಿತ್ಯ ದಂಡು ದಂಡಾಗಿ ಗೂಡಿಗೆ ಮರಳುತ್ತಿದ್ದಾರೆ.
ಗುಂಪು ಗುಂಪಾಗಿ ಸಂಚರಿಸುವ ಕೆಂಪು ವಸ್ತ್ರಧಾರಿ ಬಿಕ್ಕುಗಳು ಮನಸೆಳೆಯುವ ಟಿಬೆಟಿಯನ್ ಶೈಲಿಯ ಕಟ್ಟಡಗಳು, ಬೌದ್ಧ ದೇವಾಲಯಗಳು ರಾರಾಜಿಸುತ್ತಿರುವ ಬ್ಯಾನರ್, ಕಟೌಟ್‌ಗಳು, ದಲೈಲಾಮಾ ಅವರ ಸ್ವಾಗತಕ್ಕೆ ಸಜ್ಜಾಗಿರುವ ಮುಂಡಗೋಡ ಸಮೀಪದ ಟಿಬೆಟಿಯನ್ ಕಾಲನಿಯ ಅಂದ ಇನ್ನಷ್ಟು ಹೆಚ್ಚಿದಂತಾಗಿದೆ. ಪಟ್ಟಣದಿಂದ ಸುಮಾರು 5 ಕಿಮೀ ಕ್ರಮಿಸಿದರೆ ಸಿಗುವ ಈ ಟಿಬೆಟಿಯನ್ ಕಾಲನಿಗೆ ನಿತ್ಯ ಸಹಸ್ರ ಸಂಖ್ಯೆಯ ಟಿಬೆಟಿಯನ್ನರು ಆಗಮಿಸುತ್ತಿದ್ದಾರೆ. ಅಲ್ಲದೆ ದಲೈಲಾಮಾ ಅವರ ಅನುಯಾಯಿ ವಿದೇಶಿಯರು ಕೂಡ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಾಣಸಿಗುತ್ತಿದೆ. ಆಕರ್ಷಕ ಬೌದ್ದ ಮಠಗಳಿಂದ ಕೂಡಿದ್ದು, ರತ್ನಗಂಬಳಿ ತಯಾರಿಸುವ ಪ್ರಸಿದ್ದ ತಾಣವಾಗಿರುವ ಇಲ್ಲಿಯ ಟಿಬೆಟಿಯನ್ ಕಾಲನಿ ಪ್ರವಾಸಿಗರನ್ನು ಆಕರ್ಶಿಸುವ ಕೇಂದ್ರವಾಗಿದೆ. ನಿತ್ಯ ಸುತ್ತಮುತ್ತಲಿನಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈಗ ದಲೈಲಾಮಾ ಆಗಮಿಸುತ್ತಿರುವುದರಿಂದ ದೇಶ ವಿದೇಶಗಳಿಂದ ಅವರ ಅನುಯಾಯಿಗಳು ಆಗಮಿಸುತ್ತಿದ್ದು, ಟಿಬೆಟಿಯನ್ ಕಾಲನಿಯಲ್ಲಿ ಈಗ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ದೂರದ ಮೈಸೂರು, ಧರ್ಮಶಾಲಾ, ದೆಹಲಿ, ಡೆಹ್ರಾಡೂನ್, ಮನಾಲಿ ಮುಂತಾದ ಕಡೆ ವಾಸಿಸುತ್ತಿದ್ದ ಟಿಬೆಟಿಯನ್ ಬಳಗ ದಲೈಲಾಮಾ ಅವರ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದೆ.
ಡಿ.12 ರಂದು ಸುಮಾರು 45 ದಿನಗಳ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸುತ್ತಿರುವ ದಲೈ ಲಾಮಾ ಅವರು, ಇಲ್ಲಿ ತಂಗಿರುವವರೆಗೂ ಕಾಲನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ವಿವಿಧ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ದಲೈಲಾಮಾ ಅವರೊಂದಿಗೆ ಆಗಮಿಸುವ ನಿರೀಕ್ಷೆ ಇದೆ. ದಲೈ ಲೈಮಾ ಇಲ್ಲಿಯ ಸಹಸ್ರಾರು ಬಿಕ್ಕುಗಳಿಗೆ ದೀಕ್ಷೆ ನೀಡಲಿದ್ದಾರೆ. ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಟಿಬೆಟಿಯನ್ ಬಿಕ್ಕುಗಳಿಗೆ ಧರ್ಮ ಭೋದನೆ ಮಾಡುತ್ತ ಧಾರ್ಮಿಕ ಕಾರ್ಯಕ್ರಮ ನಡೆಸಲಿದ್ದಾರೆ.
ದಲೈಲಾಮಾ ಅವರು ತಂಗುವುದು ಎಕರೆ ವಿಸ್ತೀರ್ಣದಲ್ಲಿರುವ ಮೊನೆಸ್ಟ್ರಿಯಲ್ಲಿ. ಆದರೆ ಪೊಲೀಸ್ ಬಂದೋಬಸ್ತ್ ಮಾತ್ರ ಇಡೀ ಟಿಬೆಟಿಯನ್ ಕಾಲನಿ ಸುತ್ತ ಮಾಡಲಾಗುತ್ತದೆ. ಸುಮಾರು 1 ಸಾವಿರದಷ್ಟು ಪೊಲೀಸರು ದಲೈ ಲಾಮಾ ಅವರ ಕಾವಲಿಗೆ ಆಗಮಿಸುತ್ತಿದ್ದಾರೆ. ಹೊರಗಿನವರು ಯಾರು ಸಹ ಮೊನೆಸ್ಟ್ರಿ ಆವರಣದೊಳಗೆ ಹೋಗುವಂತಿಲ್ಲ. ಸುತ್ತ ಪೊಲೀಸ್ ಸರ್ಪಗಾವಲಿನೊಂದಿಗೆ ತೀವ್ರ ಭದ್ರತೆ ವ್ಯವಸ್ಥೆ ಮಾಡಲಾಗುತ್ತಿದೆ. ಪಾಸ್ ಇಲ್ಲದೆ ಯಾರಾದರು ಒಳಪ್ರವೇಶಿಸಲು ಯತ್ನಿಸಿದರೆ ಪೊಲೀಸರು ಹೊರದಬ್ಬುವುದು ಖಂಡಿತ. ಪೊಲೀಸರು ಸಹ ಪಾಸನ್ನು ಇಟ್ಟುಕೊಂಡೆ ಕಾರ್ಯನಿರ್ವಹಿಸಬೇಕು. ಏಕೆಂದರೆ ಕೇಂದ್ರ ಹಾಗೂ ಟಿಬೆಟಿಯನ್ನರ ಸೆಕ್ಯುರಿಟಿ ಕೂಡ ಇರುತ್ತದೆ. ಉತ್ತಮ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿರುವ ಇಲ್ಲಿಯ ಟಿಬೆಟಿಯನ್ ಕಾಲನಿಯಲ್ಲಿ ದಲೈಲಾಮಾ ಇರುವವರೆಗೂ ಪ್ರವಾಸಿಗರಿಗೆ ಅವಕಾಶವಿರುವುದಿಲ್ಲ.
ತಾಲೂಕಿನ ಟಿಬೇಟಿಯನ್ ಕಾಲನಿಗೆ ಟಿಬೇಟಿಯನ್ ಧರ್ಮಗುರು ದಲೈಲಾಮಾ ಡಿ. 12ರಂದು ಆಗಮಿಸುತ್ತಿರುವ ಹಿನ್ನೆಲೆ ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಮತ್ತು ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೇತೃತ್ವದಲ್ಲಿ ಬಾಡಿಗೆ ಕಾರು ಮತ್ತು ಆಟೋ ಚಾಲಕರ ಸಭೆ ನಡೆಸಿ ಭದ್ರತಾ ದೃಷ್ಟಿಯಿಂದ ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚಿಸಲಾಯಿತು.
ಬಾಡಿಗೆ ವಾಹನ ಮಾಲಿಕರು ವಾಹನಗಳ ವಿಮೆ, ನೋಂದಣಿ ಪತ್ರ, ಪರವಾನಿಗೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಟಿಬೇಟಿಯನ್ ಕಾಲನಿಯಲ್ಲಿ ಸಂಚರಿಸಲು ಅನುಮತಿ ಪಾಸ್ ಪಡೆಯಬೇಕು. ಪಾಸ್ ಪಡೆಯದವರಿಗೆ ಕಾಲನಿಯಲ್ಲಿ ಸಂಚರಿಸಲು ಅವಕಾಶವಿರುವುದಿಲ್ಲ. ಹೆಚ್ಚುವರಿಗೆ ವಾಹನ ನಿಲುಗಡೆ ಸ್ಥಳ ಪರಿಶೀಲಿಸಲಾಗುತ್ತಿದ್ದು, ನ. 25 ರಂದು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸಲಾಗುವುದು ಎಂದು ತಿಳಿಸಲಾಯಿತು. ಭದ್ರತೆಗೆ ಚ್ಯುತಿ ಬರದಂತೆ ಬಾಡಿಗೆ ವಾಹನದವರು ನಿಯಮದಂತೆ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು. ಸ್ಥಳೀಯ ಬಾಡಿಗೆ ವಾಹನಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಇದೇ ಸಂದರ್ಭ ಟ್ಯಾಕ್ಸಿ ಚಾಲಕರು ಮನವಿ ಮಾಡಿದರು.