
ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಗಳನ್ನು ಉಚ್ಚಾಟಿಸಿದ್ದ ಮೂವರು ಟ್ರಸ್ಟಿಗಳನ್ನೇ ಈಗ ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಟ್ರಸ್ಟಿಗಳಾದ ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಈ ಮೂವರನ್ನೂ ಏ.13ರಿಂದಲೇ ಪೂರ್ವಾನ್ವಯವಾಗುವಂತೆ ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ.ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಟ್ರಸ್ಟ್‌ನಲ್ಲಿದ್ದ ಮೂವರು ಪ್ರಮುಖರಾದ ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಅವರನ್ನು ಟ್ರಸ್ಟ್‌ನಿಂದ ಉಚ್ಚಾಟಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಲ್ಲಿ 13,600 ಸದಸ್ಯರಿದ್ದೇವೆ. ಆದರೆ, ಟ್ರಸ್ಟ್‌ನಲ್ಲಿ ಅಂತಹ ಯಾವುದೇ ಸದಸ್ಯತ್ವ ವ್ಯವಸ್ಥೆ ಇಲ್ಲ. ಹಾಗಾಗಿ, ಸಂಘವೇ ಸುಪ್ರೀಂ ಆಗಿದ್ದು, ಧರ್ಮದರ್ಶಿಗಳು ಮಠದ ವ್ಯವಹಾರದಲ್ಲಿ ಅಕ್ರಮ ಎಸಗಿದರೆ, ಅಧರ್ಮವಾಗಿ ನಡೆದುಕೊಂಡರೆ ಅಂತಹ ಟ್ರಸ್ಟಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವು ಸಂಘಕ್ಕೆ ಇರುವ ಬಗ್ಗೆ ಬೈಲಾದಲ್ಲಿ ಸ್ಪಷ್ಟ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಮೂವರೂ ಧರ್ಮದರ್ಶಿಗಳನ್ನು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ ಎಂದು ಅವರು ತಿಳಿಸಿದರು.
ಉಚ್ಚಾಟಿತ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿಗಳಾದ ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಅವರು ಇಂದಿನಿಂದಲೇ ಅನ್ವಯವಾಗುವಂತೆ ಯಾವುದೇ ಲೆಕ್ಕಪತ್ರ ನಿರ್ವಹಣೆ, ಬ್ಯಾಂಕ್ ವ್ಯವಹಾರ ಅಥವಾ ಸಂಘಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾ.23ರಂದು ಕೊಪ್ಪಳದಲ್ಲಿ ನಡೆದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಟ್ರಸ್ಟಿಗಳ ಅವಧಿ ಕೇವಲ 5 ವರ್ಷಕ್ಕೆ ಸೀಮಿತವಾಗಿರಬೇಕು. ಪ್ರತಿ ಜಿಲ್ಲೆಯ ಒಬ್ಬರಿಗೆ ಟ್ರಸ್ಟ್‌ನಲ್ಲಿ ಅವಕಾಶ ನೀಡಬೇಕು. ಟ್ರಸ್ಟಿಗಳ ನೇಮಕಾತಿ ಜಿಲ್ಲಾ, ತಾಲೂಕು ಅಧ್ಯಕ್ಷರ ಮುಖಾಂತರವೇ ನಡೆಯಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿನ ಧರ್ಮದರ್ಶಿಗಳು ಆ ನಿರ್ಣಯಕ್ಕೆ ಒಪ್ಪಿರಲಿಲ್ಲ. ಅಂದಿನ ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಸದ್ಯ ಕೆಲ ಜಿಲ್ಲೆಗಳಿಂದ 3-4 ಜನ ಟ್ರಸ್ಟಿಗಳು ಟ್ರಸ್ಟ್‌ನಲ್ಲಿದ್ದಾರೆ ಎಂದು ಅವರು ದೂರಿದರು.
ಮುಂದಿನ ದಿನಗಳಲ್ಲಿ ಸಂಘದ ರಾಜ್ಯ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ, 2008ರಿಂದ ಮಠಕ್ಕೆ ಅಥವಾ ಸಂಘಕ್ಕೆ ಕಾಣಿಕೆ ನೀಡಿದವರೆಲ್ಲರ ಪಟ್ಟಿ ಸಿದ್ಧಪಡಿಸಿ, ಹಣದ ಬಳಕೆ ಬಗ್ಗೆ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಸಮಾಜದ ಮುಂದಿಡಲಿದ್ದಾರೆ ಎಂದು ಅವರು ತಿಳಿಸಿದರು.
ಹರಿಹರದ ಪಂಚಮಸಾಲಿ ಮಠವು 80 ಲಕ್ಷ ಪಂಚಮಸಾಲಿ ಬಾಂಧವರ ಆಸ್ತಿಯಾಗಿದೆ. ಇಲ್ಲಿ ಪಾರದರ್ಶಕತೆ ಇರಲೇಬೇಕು. ಬಿ.ಸಿ.ಉಮಾಪತಿಯವರು ಲಿಖಿತ ರೂಪದಲ್ಲಿ ಲೆಕ್ಕ ನೀಡಲು ನಿರಾಕರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಮಾಜ ಮತ್ತು ಮಠದ ಆಸ್ತಿ ಬಗ್ಗೆ ಲೆಕ್ಕ ಕೊಡುವುದಕ್ಕೆ ಅವರು ಏಕೆ ಇಂತಹ ಧೋರಣೆ ಅನುಸರಿಸುತ್ತಿದ್ದಾರೆ?
- ಸೋಮನಗೌಡ ಎಂ.ಪಾಟೀಲ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ.