
ಶಿವಮೊಗ್ಗ: ಹೊಸನಗರ ತಾಲೂಕಿನ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ. ಇದು ಸಂಗಮ ವಂಶದ ಆಳ್ವಿಕೆ ಕಾಲದ್ದು ಎನ್ನಲಾಗಿದೆ. ದಾನ ಪತ್ರದಲ್ಲಿ ಕಲೂರ ನಾಡು ಎಂದು ಕಲ್ಲೂರು ಗ್ರಾಮದ ಉಲ್ಲೇಖವಿದೆ.
ಸಂಶೋಧಕ ಅದಿತ್ಯ ನಂಜುವಳ್ಳಿ, ಕೆ.ಎನ್.ಗಣೇಶ, ಪತ್ರಕರ್ತ ಎನ್.ಕಾರ್ತೀಕ್ ಕೌಂಡಿನ್ಯ ಅವರು ಶಾಸನ ಪತ್ತೆ ಹಚ್ಚಿ ಅಧ್ಯಯನ ನಡೆಸಿದ್ದಾರೆ. ಕ್ರಿ.ಶ.1424 (ಶಕ ವರ್ಷ1346)ರಲ್ಲಿ 3ನೇ ಬುಕ್ಕರಾಯನ ಮಗನಾದ 2ನೇ ದೇವರಾಯನು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟದಲ್ಲಿ ಆರಗದನಾಡಿನ ವ್ಯಾಪ್ತಿಗೆ ಸೇರಿದ ಕಲೂರು ನಾಡನ್ನು ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವರಿಗೆ ಅಮೃತ ಪಡಿ (ನೈವೇದ್ಯ) ಸೇವೆಗಾಗಿ ಧಾರೆಯೆರೆದು ಕೊಟ್ಟಿರುವುದಾಗಿ ಶಾಸನದಲ್ಲಿ ಉಲ್ಲೇಖವಿದೆ. ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನ ನೀಡುವ ಪರಂಪರೆ ಮಹತ್ವ ಪಡೆದಿತ್ತು ಎಂಬುದು ಸ್ಪಷ್ಟವಾಗಿದೆ.
3ನೇ ಬುಕ್ಕರಾಯನನ್ನು "ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ ವಿಜಯಬುಕ್ಕರಾಯ ಎಂದು ಹಾಗೂ 2ನೇ ದೇವರಾಯನನ್ನು ವೀರಪ್ರತಾಪ ದೇವರಾಯ ಮಹಾರಾಯ ಎಂದು ಕೊಂಡಾಡಲಾಗಿದೆ. ಈ ಬಿರುದುಗಳು ಆ ಕಾಲದ ರಾಜಕೀಯ ವೈಭವ ಶೌರ್ಯವನ್ನು ಪ್ರತಿಬಿಂಬಿಸುತ್ತವೆ.
ವಿಜಯನಗರ ಸಾಮ್ರಾಜ್ಯದ ಆಧೀನ ರಾಜ್ಯವಾಗಿ ಅರಗನಾಡು (ಇಂದಿನ ಅರಗ) ಅಸ್ತಿತ್ವಕ್ಕೆ ಬಂದಿದೆ. ಸ್ಥಳೀಯ ಗ್ರಾಮಗಳ ಗಡಿಗಳ ಮಾಹಿತಿ ಇಲ್ಲಿ ಲಭ್ಯವಾಗಿದೆ. ಗ್ರಾಮಗಳ ವಿಸ್ತೀರ್ಣದ ಮಾಹಿತಿಗೆ ಪೂರಕ ದಾಖಲೆಯಾಗಿದೆ ಎಂದು ಇತಿಹಾಸ ಸಂಶೋಧಕ ಆದಿತ್ಯ ನಂಜುವಳ್ಳಿ ಹೇಳುತ್ತಾರೆ.