ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ದ್ವಿಚಕ್ರ ವಾಹನದಲ್ಲಿ ಗುರುವಾರ ರಾತ್ರಿ ಮೂವರು ಅಕ್ರಮ ಪ್ರವೇಶ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮಂಗಳೂರು (ಮೇ.13) : ನಗರದ ಹೃದಯ ಭಾಗದಲ್ಲಿರುವ ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ದ್ವಿಚಕ್ರ ವಾಹನದಲ್ಲಿ ಗುರುವಾರ ರಾತ್ರಿ ಮೂವರು ಅಕ್ರಮ ಪ್ರವೇಶ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕದ್ರಿ ದೇವಸ್ಥಾನ (Kadri manjunath temple) ಉಗ್ರರ ಟಾರ್ಗೆಟ್(Terrorist) ಆಗಿರುವ ವಿಚಾರವನ್ನು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಬಹಿರಂಗಪಡಿಸಿದ್ದ ಬಗ್ಗೆ ವರದಿಗಳು ಬಂದಿದ್ದವು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.
ಆತಂಕ ಏಕೆ?
ಹಸನ್ ಶಾಹಿತ್ (19), ಉಮ್ಮರ್ ಫಾರೂಕ್ (21), ಮಹಮ್ಮದ್ ಜಾಫರ್ (18) ಬಂಧಿತರು. ಇವರೆಲ್ಲ ಕೊಣಾಜೆಯ ಅಸೈಗೋಳಿ ಪರಿಸರದವರು. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಒಂದೇ ಬೈಕ್‌ನಲ್ಲಿ ಮೂವರು ಯುವಕರು ಕದ್ರಿ ದೇವಸ್ಥಾನದ ರಸ್ತೆಗೆ ಆಗಮಿಸಿದ್ದಾರೆ. ಈ ವೇಳೆ ವಾಚ್‌ಮ್ಯಾನ್ ಮೂವರನ್ನು ಕಂಡು ಪ್ರಾಂಗಣದೊಳಗೆ ಏನೋ ಉದ್ದೇಶದಿಂದ ಬಂದಿರಬಹುದೆಂದು ಗೇಟ್ ತೆರೆದಿದ್ದಾರೆ. ಪ್ರಾಂಗಣದೊಳಗೆ ಬಂದ ಯುವಕರು ಅಪ್ರದಕ್ಷಿಣೆ ಮಾದರಿಯಲ್ಲಿ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ತಿರುಗಾಡಿದ್ದಾರೆ. ಇದರಿಂದ ವಾಚ್‌ಮ್ಯಾನ್‌ಗೆ ಅನುಮಾನ ಬಂದು ಬೈಕ್ ತಡೆದಿದ್ದಾರೆ. ಅಷ್ಟರಲ್ಲಿ ಸ್ಥಳೀಯ ಯುವಕರು ಕೂಡ ಬಂದು ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಅಸ್ಪಷ್ಟಉತ್ತರ ನೀಡಿದ್ದು, ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ.
'ಹಿಂದೂಗಳಿಗೆ ಮಾತ್ರ ವ್ಯಾಪಾರ ಅವಕಾಶ': ಕದ್ರಿಯ ದೇವಸ್ಥಾನದಲ್ಲಿ ಬ್ಯಾನರ್
ಈ ಮೂವರು ಕೋಣಾಜೆ ಅಸೈಗೋಳಿಯಿಂದ ಕಾಟಿಪಳ್ಳ ಕಡೆಗೆ ಹೋಗಬೇಕಿತ್ತು. ಇವರಲ್ಲಿ ಒಬ್ಬನಿಗೆ ಮಾತ್ರ ಬಸ್‌ನಲ್ಲಿ ಹೋಗುವ ರಸ್ತೆಯ ಪರಿಚಯವಿದ್ದು, ಉಳಿದಿಬ್ಬರಿಗೆ ಯಾವುದೇ ಮಾಹಿತಿಯಿಲ್ಲ. ಈ ಕಾರಣದಿಂದ ಒಂದೇ ಬೈಕ್‌ನಲ್ಲಿ ಮೂವರು ಯುವಕರು ಗೂಗಲ್ ಮ್ಯಾಪ್ ಸಹಾಯದಿಂದ ಕಾಟಿಪಳ್ಳಕ್ಕೆ ಹೊರಟಿದ್ದಾಗಿ ಹೇಳಿದ್ದಾರೆ. ಆದರೆ ಮ್ಯಾಪ್‌ನಿಂದ ಗೊಂದಲಕ್ಕೊಳಗಾಗಿ ಕದ್ರಿ ದೇವಸ್ಥಾನದ ಪಾರ್ಕಿಂಗ್ ಜಾಗಕ್ಕೆ ಬಂದಿದ್ದು, ಅಲ್ಲಿಂದ ಕಾಟಿಪಳ್ಳಕ್ಕೆ ಹೋಗಲು ಗೂಗಲ್ ಮ್ಯಾಪ್ ಸಚ್‌ರ್ ಮಾಡುವಾಗ ಮೂರು ರಸ್ತೆಗಳನ್ನು ತೋರಿಸಿದೆ. ಒಂದು ಪ್ರಾಂಗಣದ ಕಡೆಗೆ ತೋರಿಸಿತ್ತು, ಇದೇ ಮಾಹಿತಿ ಆಧರಿಸಿ ದೇವಳದ ಪ್ರಾಂಗಣದೊಳಗೆ ಹೋಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ಟಾರ್ಗೆಟ್ ಆಗಿತ್ತು:
ಉಗ್ರರ ಟಾರ್ಗೆಟ್ ಕದ್ರಿ ದೇವಸ್ಥಾನ ಎಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಂಧಿತ ಆರೋಪಿ ಮೊಹಮ್ಮದ್ ಶಾರೀಕ್ ಎಂಬಾತ ಇತ್ತೀಚೆಗೆ ವಿಚಾರಣೆ ವೇಳೆ ತಿಳಿಸಿದ್ದ ಎನ್ನಲಾಗಿದೆ. ಅದರ ಬೆನ್ನಿಗೇ ಈ ಘಟನೆ ನಡೆದಿರುವುದು ತೀವ್ರ ಆತಂಕ ಮೂಡಿಸಿದೆ. ಆರೋಪಿಗಳ ವಿರುದ್ಧ ಕದ್ರಿ ಠಾಣೆಯಲ್ಲಿ ಅಕ್ರಮ ಪ್ರವೇಶ, ಬೆದರಿಕೆ ಪ್ರಕರಣ ದಾಖಲಾಗಿದೆ.
ಕದ್ರಿ ಸೇರಿ ಮೂರು ಹಿಂದೂ ಮಂದಿರಗಳನ್ನು ಟಾರ್ಗೆಟ್ ಮಾಡಿದ್ದ ಶಾರೀಕ್?