ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಧಾರಕಾರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು/ಮಂಗಳೂರು: ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಧಾರಕಾರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಂದೇ ಪ್ರದೇಶದಲ್ಲಿ ಅಬ್ಬರದ ಮಳೆಯಾಗಿದೆ. ರಾಜ್ಯದ ಟಾಪ್ 10 ಗರಿಷ್ಠ ಮಳೆ ದಾಖಲಾದ ಪ್ರದೇಶಗಳ ಪೈಕಿ ಜಿಲ್ಲೆಯ 11 ಪ್ರದೇಶಗಳು ಸೇರಿವೆ. ಸುಳ್ಯ, ಸಂಪಾಜೆ ಹೊರತುಪಡಿಸಿದರೆ ಬೇರೆ ತಾಲೂಕುಗಳಲ್ಲಿ ಹಗಲು ಹೊತ್ತು ಮಳೆ ಪ್ರಮಾಣ ಕಡಿಮೆ. ಮಂಗಳೂರಿನಲ್ಲೂ ಮಳೆ ಅಷ್ಟಾಗಿ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ಮಳೆ ಇಲ್ಲದಿದ್ದರೂ ಸುಳ್ಯ(Sulya) ತಾಲೂಕಿನ ಸಂಪಾಜೆ(Sampaje), ಬಳ್ಪ, ದೇವಚಳ್ಳಿ(Devachalli), ಗುತ್ತಿಗಾರುಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕಡಬ ತಾಲೂಕಿನ ಶಿರಾಡಿ, ಕೊಂಬಾರು, ನೂಜಿಬಾಳ್ತಿಲ, ಬೆಳ್ತಂಗಡಿಯ ನಾರಾವಿ, ಸುಲ್ಕೇರಿಗಳಲ್ಲಿ ಭಾರಿ ಮಳೆಯಾಗಿದೆ. ಬೆಳಗ್ಗೆ 7 ಗಂಟೆ ವರೆಗೆ ಹಿಂದಿನ 24 ಗಂಟೆಗಳಲ್ಲಿ ಸಂಪಾಜೆಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 150 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ(India Meteorological Department) ಪ್ರಕಾರ ಆ.5ರಂದು ಆರೆಂಜ್/ರೆಡ್(Orange/Red alert) ಅಲರ್ಟ್ ಇದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಳ ಸಾಧ್ಯತೆ ಇದ್ದು, ಗುಡುಗು ಮಳೆ ನಿರೀಕ್ಷಿಸಲಾಗಿದೆ.
ಗುರುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿ 29.5 ಮಿ.ಮೀ, ಬಂಟ್ವಾಳ 7.7 ಮಿ.ಮೀ, ಮಂಗಳೂರು 5.8 ಮಿ.ಮೀ, ಪುತ್ತೂರು 11.6 ಮಿ.ಮೀ, ಸುಳ್ಯ 57.1 ಮಿ.ಮೀ, ಮೂಡುಬಿದಿರೆ 57.1 ಮಿ.ಮೀ, ಕಡಬ 59.3 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯ ದಿನದ ಸರಾಸರಿ ಮಳೆ 30 ಮಿ.ಮೀ. ಆಗಿದೆ. ಉಪ್ಪಿನಂಗಡಿ ನೇತ್ರಾವತಿ, ಕುಮಾರಧಾರ ನದಿ 25.20 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿ 5.2 ಮೀಟರ್ ಮತ್ತು ಗುಂಡ್ಯ ನದಿ 3.7 ಮೀಟರ್‌ನಲ್ಲಿ ಹರಿಯುತ್ತಿದೆ.
ಭಾರಿ ಮಳೆಗೆ 3 ಮನೆಗಳು ಪೂರ್ತಿ ಹಾನಿಯಾಗಿದ್ದು, 7 ಮನೆ ಭಾಗಶಃ ಹಾನಿಗೊಂಡಿದೆ. ಪ್ರಾಕೃತಿಕ ತೊಂದರೆಗೆ ಸಿಲುಕಿದ 58 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 4 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಸುಳ್ಯದ ಕಲ್ಮಕಾರಿನ ಸರ್ಕಾರಿ ಶಾಲೆಯಲ್ಲಿ 21 ಮಂದಿಗೆ, ಸಂಪಾಜೆ ಸಜ್ಜನ ಪ್ರತಿಷ್ಠಾನದಲ್ಲಿ 12, ಸುಬ್ರಹ್ಮಣ್ಯ ಅನುಗ್ರಹ ವಸತಿಗೃಹದಲ್ಲಿ 19, ಏನೆಕಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6 ಮಂದಿಯನ್ನು ಸೇರಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ತಿಳಿಸಿದೆ.