ಸ್ವಾತಂತ್ಯ್ರೋತ್ಸವಕ್ಕೆ ಹಂತಕನಿಗೆ ಬಿಡುಗಡೆ ಭಾಗ್ಯ: ಹತ್ಯೆಗೀಡಾದವರ ಕುಟುಂಬ ಆಕ್ಷೇಪ!

By Govindaraj S  |  First Published Aug 5, 2022, 11:50 AM IST

90ರ ದಶಕದಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಂಗಳೂರಿನ ಪ್ರವೀಣ್ ಎಂಬ ಅಪರಾಧಿಗೆ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಹಿನ್ನೆಲೆಯಲ್ಲಿ ಬಿಡುಗಡೆ ಭಾಗ್ಯ ಲಭಿಸಿದೆ‌. ಆದರೆ ಈತನ ಬಿಡುಗಡೆ ವಿರುದ್ಧ ಹತ್ಯೆಯಾದವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. 


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.05): 90ರ ದಶಕದಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಂಗಳೂರಿನ ಪ್ರವೀಣ್ ಎಂಬ ಅಪರಾಧಿಗೆ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಹಿನ್ನೆಲೆಯಲ್ಲಿ ಬಿಡುಗಡೆ ಭಾಗ್ಯ ಲಭಿಸಿದೆ‌. ಆದರೆ ಈತನ ಬಿಡುಗಡೆ ವಿರುದ್ಧ ಹತ್ಯೆಯಾದವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

Tap to resize

Latest Videos

90ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರಿನ ವಾಮಂಜೂರಿನಲ್ಲಿ ನಡೆದ ನಾಲ್ಕು ಮಂದಿಯ ಬರ್ಬರ ಕೊಲೆ ಪ್ರಕರಣದ ಅರೋಪಿ ವಾಮಜೂರು ಪ್ರವೀಣ್‌ ಕುಮಾರ್‌ (62)ನನ್ನು ಈ ವರ್ಷ ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶವಾಗಿದೆ. ಆದರೆ ಇದಕ್ಕೆ ಆತನಿಂದ ಕೊಲೆಯಾದವರ ಕುಟುಂಬದವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆತನನ್ನು ಬಿಡುಗಡೆ ಮಾಡಬಾರದೆಂದು ಹತ್ಯೆಯಾದವರ ಕುಟುಂಬಸ್ಥರ ಪರವಾಗಿ ಸೀತಾರಾಮ ಮತ್ತು ಇತರರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಾಮಜೂರು ಪ್ರವೀಣ್‌ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ. 

28 ವರ್ಷಗಳ ಹಿಂದೆ ನಡೆದಿದ್ದೇನು?: ಅಪರಾಧಿ ಪ್ರವೀಣ್‌ 1994 ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಪ್ರವೀಣ್‌ ಮೂಲತಃ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದನು. ಸಿಂಗಲ್‌ ನಂಬರ್‌ ಲಾಟರಿ ಟಿಕೆಟ್‌ ಖರೀದಿಯ ಚಟಕ್ಕೆ ಬಿದ್ದು ಅಕ್ಷರಶಃ ಬೀದಿ ಭಿಕಾರಿಯಾಗಿದ್ದ.

ಗಲಭೆ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕಠಿಣ ಕ್ರಮ: ಅಲೋಕ್‌ ಕುಮಾರ್‌

ಇದಕ್ಕಾಗಿ ಪತ್ನಿ ಮತ್ತು ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವು ಇರಿಸಿದ್ದನು. ಮಾತ್ರವಲ್ಲದೆ ವಿವಿಧ ಮೂಲಗಳಿಂದ ಸಾಲವನ್ನೂ ಮಾಡಿದ್ದ. 1994 ಫೆಬ್ರವರಿ 23 ರಂದು ಸಂಜೆ ವಾಮಂಜೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಆತ ರಾತ್ರಿ ಅಲ್ಲಿಯೇ ಮಲಗಿದ್ದ. ಮಧ್ಯ ರಾತ್ರಿ ಎದ್ದು ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕನ ಸಹಿತ 4 ಮಂದಿಯನ್ನು ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಮನೆ ಮಂದಿಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಕೊಲೆ ಕೃತ್ಯ ಎಸಗಿದ್ದ ಬಗ್ಗೆ ಆತ ತಪ್ಪೊಪ್ಪಿಕೊಡಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆತ ಬಚ್ಚಿಟ್ಟಲ್ಲಿಂದ ವಶಪಡಿಸಿಕೊಳ್ಳಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದಲ್ಲಿ ಹೊಟೇಲ್‌ ಒಂದರಲ್ಲಿ ಊಟ ಮಾಡುತ್ತಿದ್ದ ವೇಳೆ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದನು. ಈ ಸಂದರ್ಭದಲ್ಲಿ ಆತ ಎಲ್ಲಿದ್ದಾನೆಂದು ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರು ಘೋಷಿಸಿದ್ದರು. ತಪ್ಪಿಸಿಕೊಂಡಿದ್ದ ಪ್ರವೀಣ್‌ ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ಅಡಗಿಕೊಂಡಿದ್ದು, ಯುವತಿಯೋರ್ವಳನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ ಅಕೆಗೆ ಮಗುವೊಂದನ್ನು ಕರುಣಿಸಿದ್ದನು. 1999 ರಲ್ಲಿ ಮಂಗಳೂರಿನ ಇನ್ಸ್‌ಪೆಕ್ಟರ್‌ ಜಯಂತ್‌ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.

ರಾಷ್ಟ್ರಪತಿಯಿಂದಲೂ ಕ್ಷಮಾದಾನ ಅರ್ಜಿ ತಿರಸ್ಕೃತ: ನ್ಯಾಯಾಂಗ ಬಂಧನದಲ್ಲಿದ್ದ ಆತನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟು ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟು ಮತ್ತು 2003 ರಲ್ಲಿ ಸುಪ್ರೀಂಕೋರ್ಟು ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯನ್ನು 2013 ಏಪ್ರಿಲ್‌ 4ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ 2014 ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಸರಕಾರವು ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಭನಾಗಿದ್ದಾನೆ. 

ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಅವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ 80,000 ರೂಪಾಯಿ ಹಣದ ಆಶೇಗಾಗಿ ನನ್ನ 75 ವರ್ಷ ಪ್ರಾಯದ ವೃದ್ಧ ತಾಯಿ, 36 ವರ್ಷ ಪ್ರಾಯದ ತಂಗಿ, 30 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಸಹೋದರ, ಹಾಗೂ 9 ವರ್ಷದ ಮುಗ್ದ ಬಾಲಕಿಯನ್ನು ಅಮಾನುಷವಾಗಿ ಕೊಲೆಗೈದ ಆತ ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿ ನಮಗಿದೆ. ಸ್ವತಃ ಪ್ರವೀಣನ ಕುಟುಂಬದವರಿಗೂ ಆತ ಜೈಲಿನಿಂದ ಹೊರಗೆ ಬರುವುದರ ಬಗ್ಗೆ ಆತಂಕವಿದೆ ಎಂದಿದ್ದಾರೆ.

ಮಂಗಳೂರು: ಪ್ರವೀಣ್‌ ಹತ್ಯೆಗೆ ವಾರವಾದ್ರೂ ಪ್ರಮುಖ ಆರೋಪಿಗಳ ಸುಳಿವಿಲ್ಲ

ಪ್ರವೀಣ್ ಬಿಡುಗಡೆ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಚಿಕೆಗೇಡಿನ ಸಂಗತಿ: ಈ ಕೊಲೆಗಾರನನ್ನು ಬಿಡುಗಡೆ ಮಾಡಿದರೆ ನನ್ನ ಮತ್ತು ನನ್ನ ಕುಟುಂಬ ಸದಸ್ಯರು ಮತ್ತು ಸಾಕ್ಷಿಗಳ ಸುರಕ್ಷತೆಯ ಬಗ್ಗೆಯೂ ನಾನು ಚಿಂತಿಸುತ್ತಿದ್ದೇನೆ. ಪಶ್ಚಾತ್ತಾಪವೇ ಇಲ್ಲದ ಈತ ಮುಂದೆ ಸಾರ್ವಜನಿಕರಿಗೆ ಇನ್ನೂ ಅಪಾಯಕಾರಿಯಾಗಬಹುದು. ಅವನ ಬಿಡುಗಡೆಯ ಸಂದರ್ಭದಲ್ಲಿ, ಅವನು ನನಗೆ ಅಥವಾ ನನ್ನ ಕುಟುಂಬದ ಯಾರಿಗಾದರೂ ಹಾನಿಯನ್ನುಂಟು ಮಾಡುವ ಆತಂಕವಾಗಿದೆ. ದಯವಿಟ್ಟು ನಮಗೆ ನ್ಯಾಯ ಕೊಡಿ ಮತ್ತು ನನ್ನ ಮತ್ತು ಸಮಾಜದ ಹಿತಕ್ಕಾಗಿ ಇಂತಹ ಅಪಾಯಕಾರಿ ಕೊಲೆಗಾರನನ್ನು ಬಿಡುಗಡೆ ಮಾಡಬೇಡಿ. ನೀವು ಅವರನ್ನು ಬಿಡುಗಡೆ ಮಾಡುತ್ತಿರುವುದು ನಮ್ಮ 75ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಚಿಕೆಗೇಡಿನ ಸಂಗತಿ. ಇಂದಿಗೂ ಸರಿಯಾದ ಕಾನೂನು ಸುವ್ಯವಸ್ಥೆ ಇಲ್ಲ. ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣದಲ್ಲಿ ಆಗಿರುವ ಅನ್ಯಾಯದ ಅನುಭವವಾಗುತ್ತಿದೆ. ಅವರು ಬಿಡುಗಡೆಯಾದರೆ ಇದು ನಮ್ಮ ದೇಶಕ್ಕೆ ಕರಾಳ ದಿನ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ಹೃದಯ ವಿದ್ರಾವಕ ಅನುಭವವಾಗಲಿದೆ ಎಂದು ಹತ್ಯೆಯಾದವರ ಸಂಬಂಧಿ ಸೀತಾರಾಮ ಗುರಪುರ ತಿಳಿಸಿದ್ದಾರೆ.

click me!