ಗುಡದೂರು ಕಾಲುವೆ ಬಳಿ ಸಿಂಧನೂರು ಕಡೆಯಿಂದ ಮಸ್ಕಿ ಕಡೆ ಬರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ಡಿಪೋ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಮಸ್ಕಿ(ಡಿ.07): ಸಮೀಪದ ಗುಡದೂರು ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಆಂಧ್ರದ ಕರ್ನೂಲ ಜಿಲ್ಲೆಯ ನಂದ್ಯಾಳ ಗ್ರಾಮದ ನಾಗರಾಜ (25), ಸೀನು (28), ಜಯಪಾಲ (30) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಶ್ರೀಕಾಂತ (30) ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಯುವಕರು ಬೈಕ್ ಮೇಲೆ ಗುಡದೂರು ಬಳಿ ಭತ್ತ ಕಟಾವು ಮಾಡಿಸುತ್ತಿದ್ದ ಹೊಲಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಗುಡದೂರು ಕಾಲುವೆ ಬಳಿ ಸಿಂಧನೂರು ಕಡೆಯಿಂದ ಮಸ್ಕಿ ಕಡೆ ಬರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ಡಿಪೋ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಪಿಎಸ್‌ಐ ಸಿದ್ಧರಾಮ ಬಿದರಾಣಿ ಮತ್ತು ಪೊಲೀಸರು ಲಿಂಗಸುಗೂರು ವರೆಗೆ ಬಸ್ ಹಿಂದೆ ಹೋಗಿ ಬಸ್ ಹಿಡಿದು ಚಾಲಕನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲು ಹತ್ತುವ ವೇಳೆ ದುರಂತ: ಗಾಲಿಗೆ ಸಿಲುಕಿ ಪ್ರಯಾಣಿಕ ಸಾವು
ಘಟನೆ ಸ್ಥಳಕ್ಕೆ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಎಸ್. ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಯಿತು.