ಕೊರೋನಾ ಸೋಂಕಿಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಆರು ಜನರ ಸಾವು| ಜಿಲ್ಲೆಯಲ್ಲಿ ಮಾರಣಾಂತಿಕವಾಗುತ್ತಿರುವ ಸೋಂಕು| ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ|
ಬಳ್ಳಾರಿ(ಜೂ.24): ಕೊರೋನಾ ವೈರಸ್ ಸೋಂಕು ಬಳ್ಳಾರಿ ಜಿಲ್ಲೆಯಲ್ಲಿ ಮಾರಣಾಂತಿಕವಾಗುತ್ತಿದ್ದು ಮಂಗಳವಾರ ಮತ್ತೆ ಮೂವರು ಬಲಿಯಾಗುವ ಮೂಲಕ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಸೋಮವಾರ ಆಂಧ್ರಪ್ರದೇಶ ಮೂಲದ ವ್ಯಕ್ತಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಮಂಗಳವಾರ ನಗರದ ಕಪ್ಪಗಲ್ ರಸ್ತೆಯ ಎಂ.ವಿ. ನಗರದ 85 ವರ್ಷದ ವೃದ್ಧೆ, ಕುಡಿತಿನಿಯ 42 ವರ್ಷದ ವ್ಯಕ್ತಿ ಹಾಗೂ ಸಂಡೂರು ತಾಲೂಕಿನ ವಡ್ಡು ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ (59) ಸಾವಿಗೀಡಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯ ಕಾಯಿಲೆಯಿಂದ ಬಳಲುತ್ತಿದ್ದ ಬಳ್ಳಾರಿಯ ವೃದ್ಧೆಯನ್ನು ಜೂ. 17ರಂದು ಇಲ್ಲಿನ ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಇವರ ಗಂಟಲುದ್ರವ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ವರದಿಯಲ್ಲಿ ಕೊರೋನಾ ಪಾಸಿಟೀವ್ ಬಂದಿದೆ. ಮೃತ ವೃದ್ಧೆಯ ಶವವನ್ನು ನಗರ ಹೊರವಲಯದ ಮೋಕಾ ರಸ್ತೆಯ ಸ್ಮಶಾನದಲ್ಲಿ ಮಂಗಳವಾರ ದಹನ ಮಾಡಲಾಯಿತು. ಕುಡಿತಿನಿಯ ನಿವಾಸಿ ದೀರ್ಘಕಾಲದ ಕರಳು ಸಮಸ್ಯೆ, ಎದೆನೋವು ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದರು. ಇಲ್ಲಿನ ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಗಂಟಲುದ್ರವ ಪರೀಕ್ಷೆಯಿಂದ ಈತನಿಗೆ ಸೋಂಕು ಇರುವುದು ದೃಢಗೊಂಡಿತ್ತು.
'ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಬರೆಯಲು ಅವಕಾಶವಿಲ್ಲ'
ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಡೂರು ತಾಲೂಕಿನ ವಡ್ಡು ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ (59) ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಇವರ ಗಂಟಲುದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಇಲ್ಲಿನ ಕೊರೋನಾ ಆಸ್ಪತ್ರೆಗೆ ಜೂ. 20ರಂದು ದಾಖಲು ಮಾಡಲಾಗಿತ್ತು. ಈ ವ್ಯಕ್ತಿ ಜಿಂದಾಲ್‌ನ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ. ಕೊರೋನಾದಿಂದ ಮೃತಪಟ್ಟವರ ಪೈಕಿ ಬಳ್ಳಾರಿ ಜಿಲ್ಲೆಯ ನಾಲ್ವರು, ರಾಯಚೂರು ಜಿಲ್ಲೆಯ ಓರ್ವರು ಹಾಗೂ ಆಂಧ್ರಪ್ರದೇಶ ಮೂಲದ ಓರ್ವರು ಸಾವಿಗೀಡಾಗಿದ್ದಾರೆ.