
ಉಡುಪಿ(ಜೂ.24): ಜಿಲ್ಲೆಯಲ್ಲಿ ನಿರಂತರವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಮಂಗಳವಾರ 11 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 1088 ಆಗಿದೆ.
ಮಂಗಳವಾರ ಪತ್ತೆಯಾದ ಸೋಂಕಿತರಲ್ಲಿ 3 ಮಂದಿ ಪುರುಷರು, 3 ಮಂದಿ ಮಹಿಳೆಯರು ಮತ್ತು 2 ವರ್ಷ ಬಾಲಕಿ ಮತ್ತು 5 ವರ್ಷ, 7 ವರ್ಷ, 8 ವರ್ಷದ ಬಾಲಕರು ಸೇರಿದ್ದಾರೆ.
ಮೀನು ಮಾರಾಟಗಾರ ಯುವಕಗೆ ಸೋಂಕು: ದಕ್ಕೆ ಸೀಲ್‌ಡೌನ್
ಅವರಲ್ಲಿ 5 ಮಂದಿ ಮುಂಬೈಯಿಂದ ಬಂದವರಾದರೆ, ದುಬೈ, ಕುವೈಟ್, ಸೌದಿಯಿಂದ ತಲಾ ಒಬ್ಬರು ಹಿಂದಕ್ಕೆ ಬಂದವರಾಗಿದ್ದಾರೆ. ಮೇ 24ಕ್ಕೆ ಪತ್ತೆಯಾದ 26 ವರ್ಷ ವಯಸ್ಸಿನ, ಮುಂಬೈಯಿಂದ ಬಂದ ಸೋಂಕಿತ ಪುರುಷನ ಸಂಪರ್ಕದಲ್ಲಿದ್ದ 55 ವರ್ಷದ ಮಹಿಳೆಗೂ ಸೋಂಕು ಬಂದಿದೆ. ಬೈಂದೂರು ಪೊಲೀಸ್ ಠಾಣೆಯ 37 ವರ್ಷ ವಯಸ್ಸಿನ ಮಹಿಳಾ ಪೊಲೀಸ್ ಸಿಬ್ಬಂದಿಗೂ ಸೋಂಕು ಪತ್ತೆಯಾಗಿದೆ.
978 ಮಂದಿ ಬಿಡುಗಡೆ:
ಜಿಲ್ಲೆಯಲ್ಲಿ ಇದುವರೆಗೆ 978 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಒಬ್ಬರು ದ.ಕ. ಜಿಲ್ಲೆಯವರಾಗಿದ್ದು ಅಲ್ಲಿಗೆ ಕಳುಹಿಸಲಾಗಿದೆ. ಪ್ರಸ್ತುತ 108 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
202 ಮಾದರಿಗಳ ಸಂಗ್ರಹ: ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕು ಉಲ್ಬಣವಾಗುವ ಲಕ್ಷಣಗಳು ಕಾಣುತ್ತಿವೆ. ಯಾಕೆಂದರೆ ಮಂಗಳವಾರ ಒಂದೇ ದಿನ ಜಿಲ್ಲೆಯಿಂದ 202 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
'ಕೊರೋನಾ ಚಿಕಿತ್ಸೆಗೆ ನಿಗದಿಪಡಿಸಿರೋ ದರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ '
ಅವರಲ್ಲಿ 94 ಮಂದಿ ಕೊರೋನಾ ಶಂಕಿತರಾಗಿದ್ದಾರೆ. 58 ಮಂದಿ ಮುಂಬೈಯಿಂದ ಬಂದವರು, 29 ಮಂದಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು, 17 ಮಂದಿ ಶೀತಜ್ವರದಿಂದ, 4 ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಾಗಿದ್ದಾರೆ.
ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಸೋಂಕು
ಬೈಂದೂರು ಠಾಣೆಯಲ್ಲಿ ಸೋಮವಾರ 39 ವರ್ಷ ವಯಸ್ಸಿನ ಪುರುಷ ಸಿಬ್ಬಂದಿಗೆ ಸೋಂಕು ಪತ್ತೆಯಾಗಿತ್ತು. ಅವರು ಶಿರೂರು ಚೆಕ್ ಪೋಸ್ಟಿನಲ್ಲಿ ಕರ್ತವ್ಯ ಸಲ್ಲಿಸಿದ್ದು, ಆಗ ಅವರಿಗೆ ಅಲ್ಲಿ ಸೋಂಕು ಪತ್ತೆಯಾಗಿತ್ತು. ನಂತರ ಅವರು ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಕೆಲಸ ಮಾಡಿದ ಈ 37 ವರ್ಷದ ಮಹಿಳಾ ಸಿಬ್ಬಂದಿಗೂ ಕೊರೋನಾ ಸೋಂಕಿದೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 12 ಮಂದಿ ಪೊಲೀಸ್ ಸಿಬ್ಬಂದಿಗೆ ಸೋಂಕು ತಗಲಿದೆ. ಅವರಲ್ಲಿ 10 ಮಂದಿ ಗುಣಮುಖರಾಗಿ ಮನೆಗೆ ಹಿಂತೆರಳಿದ್ದಾರೆ. ಬೈಂದೂರು ಠಾಣೆಯ ಇಬ್ಬರು ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಮನೆಯ ಸದಸ್ಯರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಬೈಂದೂರು ಠಾಣೆಯನ್ನು 3 ದಿನಗಳ ಕಾಲ ಮುಚ್ಚಲಾಗಿದೆ.