ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆ..!

By Kannadaprabha NewsFirst Published Jun 18, 2020, 10:28 AM IST
Highlights

ಪ್ರಸ್ತುತ ಸಾಲಿನಲ್ಲಿ ಚಿಕ್ಕಮಗಳೂರಿನ ಕೊಪ್ಪ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮುಂಗಾರು ಪೂರ್ವ ಸೇರಿ ಕಳೆದ ಬಾರಿಗಿಂತ ಹೆಚ್ಚಿನ ಮಳೆ ಪ್ರಮಾಣ ದಾಖಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹಮೀದ್‌ ಕೊಪ್ಪ, ಕನ್ನಡಪ್ರಭ

ಕೊಪ್ಪ(ಜೂ.18): ಕೊಪ್ಪ ಸುತ್ತಮುತ್ತ ಕಳೆದೊಂದು ವಾರದಿಂದ ಆಗಾಗ್ಗೆ ಸಾಧಾರಣ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಪ್ರಸ್ತುತ ಸಾಲಿನಲ್ಲಿ ಕೊಪ್ಪ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮುಂಗಾರು ಪೂರ್ವ ಸೇರಿ ಕಳೆದ ಬಾರಿಗಿಂತ ಹೆಚ್ಚಿನ ಮಳೆ ಪ್ರಮಾಣ ದಾಖಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಅಡಕೆ ತೋಟಗಳಲ್ಲಿ ನೀರು ವೆಚ್ಚವಾಗಿ ಹರಿದುಹೋಗದಂತೆ ತೋಟಗಳ ಕಪ್ಪು(ಕಾಲುವೆ)ಗಳನ್ನು ಸರಿಪಡಿಸಲಾಗುತ್ತಿದೆ. ನಡುವೆ ಬಿಡುವು ನೀಡಿ ಮಳೆ ಸುರಿಯುತ್ತಿರುವುದರಿಂದ ಅಡಕೆ ಮರಗಳಿಗೆ ಕೊಳೆ ರೋಗ ಬಾರದಂತೆ ತಡೆಯಲು ಔಷಧ ಸಿಂಪಡಿಕೆಗೆ ಕೃಷಿಕರಿಗೆ ಉಪಯುಕ್ತವಾಗಿದೆ. 

ಮಲೆನಾಡಿನಲ್ಲಿ ಪ್ರತಿ ಭಾರಿ ತಡವಾಗಿ ಆರಂಭಗೊಳ್ಳುತ್ತಿದ್ದ ಗದ್ದೆ ಕೆಲಸ ಈ ಭಾರಿ ಬೇಗನೆ ಬಿದ್ದ ಮಳೆಯಿಂದಾಗಿ ತಾಲೂಕಿನ ಕೆಲವೆಡೆ ಊಟೆ ನಡೆಸಿ ಭತ್ತದ ಕೃಷಿಗಾಗಿ ಗದ್ದೆಯನ್ನು ಹದಗೊಳಿಸಲಾಗುತ್ತಿದೆ. ಅಡಕೆಗೆ ಹಳದಿ ಎಲೆರೋಗ, ಕೊಳೆರೋಗ ಭತ್ತದ ಬೆಳೆಗೆ ಬೆಂಕಿರೋಗ, ಕೀಟಬಾಧೆಯಂತಹ ರೋಗಗಳು ಪ್ರತಿಬಾರಿ ಮಲೆನಾಡಿನ ರೈತರನ್ನು ಕಂಗೆಡಿಸುತ್ತಿದ್ದು, ಕಳೆದಬಾರಿ ಉಂಟಾದ ಮಳೆಹಾನಿ, ಪ್ರಕೃತಿ ವಿಕೋಪದಿಂದಾಗಿ ಕೆಲವೆಡೆ ಕೃಷಿ ಭೂಮಿಗಳು ಹಾಳಾಗಿ ಬೆಳೆದ ಬೆಳೆಗಳು ನಾಶವಾದ ಹಿನ್ನೆಲೆಯಲ್ಲಿ ಕೈಸುಟ್ಟುಕೊಂಡ ಮಲೆನಾಡಿನ ರೈತರು ಪ್ರಸ್ತುತ ವರ್ಷದ ಈವರೆಗಿನ ವಾತಾವರಣ ಕೃಷಿಗೆ ಪೂರಕವಾಗಿದ್ದು, ಉತ್ತಮ ಮಳೆ ಬೆಳೆಯಾಗುವ ನಿರೀಕ್ಷೆಯಲ್ಲಿರುವ ಮಲೆನಾಡಿನ ರೈತರು ಜುಲೈ ತಿಂಗಳಲ್ಲಿ ಚಂಡಮಾರುತದ ಸುಳಿವು ನೀಡಿರುವ ಹವಾಮಾನ ಇಲಾಖೆಯ ಎಚ್ಚರಿಕೆ ಆತಂಕಕ್ಕೆ ದೂಡಿದೆ. ಈ ಬಾರಿಯಾದರೂ ಪ್ರಕೃತಿ ವಿಕೋಪ ಮುಂತಾದ ಸಂಕಷ್ಟಗಳು ಬಾರದೆ ಉತ್ತಮ ಮಳೆಯಾಗಿ ಬೆಳೆ ಕೈ ಸೇರಲಿ ಎಂದು ಪ್ರಾರ್ಥಿಸಿ, ರೈತರು ಕೃಷಿ ಭೂಮಿಗೆ ಇಳಿದಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

ಕೊಪ್ಪ ಪಟ್ಟಣ ಹೊರವಲಯದಲ್ಲಿ ಕಳೆದ ವರ್ಷ ಜೂ.17ರವರೆಗೂ 4.65 ಇಂಚು ಮಳೆ ಸುರಿದಿದ್ದು, ಈ ಬಾರಿ ಬುಧವಾರ ಬೆಳಗ್ಗೆ 7ಗಂಟೆಯವರೆಗೆ 14.05 ಇಂಚು ಮಳೆ ಪ್ರಮಾಣ ದಾಖಲಾಗಿದೆ. ಉಳಿದಂತೆ ಹರಿಹರಪುರ 341.9 ಮಿ.ಮೀ, ಕಮ್ಮರಡಿ 383.3 ಮಿ.ಮೀ, ಜಯಪುರ 393.3 ಮಿ.ಮೀ, ಬಸ್ರಿಕಟ್ಟೆ433 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
 

click me!