ಉಪಯೋಗ ಬಳಿಕ ಈ ಮಾಸ್ಕ್‌ ಹೂತರೆ ಗಿಡವಾಗಿ ಬೆಳೆಯುತ್ತೆ!

By Kannadaprabha NewsFirst Published Apr 27, 2021, 10:38 AM IST
Highlights

ಬಳಸಿದ ಬಳಿಕ ನೆಲದಲ್ಲಿ ಹೂತರೆ ಗಿಡವಾಗಿ ಬೆಳೆವ ಪರಿಸರ ಸ್ನೇಹಿ ಮಾಸ್ಕ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.  ಪೇಪರ್‌ ಸೀಡ್‌ ಮೂಲಕ ತಯಾರಾದ ಈ ಮಾಸ್ಕ್‌ ಅನ್ನು ಕೇವಲ 25 ರು.ಗೆ ಒದಗಿಸುತ್ತಿದೆ.

ಮೂಲ್ಕಿ (ಏ.27):   ಈಗಾಗಲೇ ಪರಿಸರ ಸ್ನೇಹಿ ರಾಖಿ, ಗ್ರೀಟಿಂಗ್‌ ಕಾರ್ಡ್‌ಗಳನ್ನು ಮಾರುಕಟ್ಟೆಗೆ ತಂದು ಜನಜನಿತರಾಗಿರುವ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಇದೀಗ ಬಳಸಿದ ಬಳಿಕ ನೆಲದಲ್ಲಿ ಹೂತರೆ ಗಿಡವಾಗಿ ಬೆಳೆವ ಪರಿಸರ ಸ್ನೇಹಿ ಮಾಸ್ಕ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಕೊರೋನಾ ಹರಡದಂತೆ ತಡೆಯಲು ಮಾಸ್ಕ್‌ ಅನಿವಾರ್ಯವಾಗಿರುವ ಈ ದಿನಗಳಲ್ಲಿ ಪೇಪರ್‌ ಸೀಡ್‌ ಮೂಲಕ ತಯಾರಾದ ಈ ಮಾಸ್ಕ್‌ ಅನ್ನು ಕೇವಲ 25 ರು.ಗೆ ಒದಗಿಸುತ್ತಿದ್ದಾರೆ. ಮಾಸ್ಕ್‌ನ ಪದರದೊಳಗೆ ಟೊಮ್ಯಾಟೊ ಹಾಗೂ ತುಳಸಿ ಬೀಜಗಳನ್ನು ಅಳವಡಿಸಲಾಗಿದ್ದು, ಬಳಸಿದ ಬಳಿಕ ಹೂತರೆ ಮಾಸ್ಕ್‌ ಗಿಡವಾಗಿ ಬೆಳೆಯುತ್ತದೆ.

ಬಿಸಾಡುವ ಹತ್ತಿಯನ್ನೇ ಬಳಸಿ ತಯಾರಿಸಿರುವ ಮಾಸ್ಕ್‌ ಹಲವು ವಿಶೇಷತೆ ಹೊಂದಿದೆ. ನೀರಿನಲ್ಲಿ ಹತ್ತಿ ಅದುಮಿಸಿಟ್ಟು ಪೇಪರ್‌ ಶೀಟ್‌ಗಳನ್ನಾಗಿ ಮಾಡಿ, ಅದನ್ನು 12 ಗಂಟೆ ಒಣಗಿಸಿ ಮಾಸ್ಕ್‌ ತಯಾರಿಸಲಾಗುತ್ತದೆ. ನಂತರ ಮುಖದ ಸಂರಕ್ಷಣೆಗೆ ಇನ್ನೊಂದು ಪದರ ಸೇರಿಸಿ, ನಡುವೆ ಕಟ್ಟಲು ದಾರವನ್ನೂ ಅಳವಡಿಸಿ ಮಾಸ್ಕ್‌ ಹೊಲಿಯಲಾಗುತ್ತದೆ. ಹೀಗಾಗಿ ಇದು ಮೂರು ಪದರದ (ಲೇಯರ್‌) ಮಾಸ್ಕ್‌ ಆಗಿದೆ. ಪದರದೊಳಗೆ ಟೊಮ್ಯಾಟೊ ಹಾಗೂ ತುಳಸಿ ಬೀಜಗಳನ್ನು ತುಂಬಿಸುತ್ತಾರೆ. ಈವರೆಗೆ ಸಂಪೂರ್ಣ ಕೈಯಿಂದಲೇ ಇಂತಹ 3000 ಮಾಸ್ಕ್‌ ತಯಾರಿಸಲಾಗಿದೆ.

ಕೋವಿಡ್ ಸಮಸ್ಯೆಯೇ - ಆತಂಕ ಬೇಡ : ಆಸ್ಪತ್ರೆಗಳನ್ನು ಇಲ್ಲಿ ಸಂಪರ್ಕಿಸಿ

ವಿಲೇವಾರಿ ಸಮಸ್ಯೆ ಇಲ್ಲ :  ಮಾಸ್ಕ್‌ ಉಪಯೋಗಿಸಿದ ಬಳಿಕ ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ವೈರಸ್‌ ಇತರರಿಗೆ ಹರಡುವ ಸಾಧ್ಯತೆಯಿದೆ. ಜೊತೆಗೆ ಮಾಸ್ಕ್‌ ವಿಲೇವಾರಿಯ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಮಾಸ್ಕ್‌ ತಯಾರಿಸಲಾಗಿದೆ.

-ನಿತಿನ್‌ ವಾಸ್‌, ಪೇಪರ್‌ ಸೀಡ್‌ ಸಂಸ್ಥೆ ಮಾಲೀಕರು

 

click me!