ಶಿವಾನಂದ ಗೊಂಬಿ
ಹುಬ್ಬಳ್ಳಿ (ಜ.4) : ನಷ್ಟದಲ್ಲಿರುವ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ಯೂ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದೆ. ಇಷ್ಟುದಿನ ತನ್ನ ವಾಹನಗಳಿಗಷ್ಟೇ ವಾಯು ಮಾಲಿನ್ಯ ತಪಾಸಣೆ ಮಾಡಲು ಸೀಮಿತವಾಗಿದ್ದ ಸಾರಿಗೆ ಸಂಸ್ಥೆ ಇದೀಗ ಖಾಸಗಿ ವಾಹನಗಳ ವಾಯು ಮಾಲಿನ್ಯ ತಪಾಸಣೆ ಮಾಡಲು ಮುಂದಡಿ ಇಟ್ಟಿದೆ. ಈ ಮೂಲಕ ತನ್ನ ಆದಾಯ ಹೆಚ್ಚಿಸಿಕೊಳ್ಳಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಹುಬ್ಬಳ್ಳಿಯಲ್ಲಿ ಕೇಂದ್ರವನ್ನೂ ತೆರೆದಿದೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ. ಸಾರಿಗೆ ಸಂಸ್ಥೆಯಲ್ಲಿ ಖಾಸಗಿ ವಾಹನಗಳ ಪಿಯುಸಿ (ಪೊಲೂಷನ್ ಅಂಡರ್ ಕಂಟ್ರೋಲ್) ಟೆಸ್ಟ್ ಸೆಂಟರ್ ತೆರೆಯುತ್ತಿರುವುದು ರಾಜ್ಯದಲ್ಲೇ ಮೊದಲು.
ಬೆಳಗಾವಿ(Belagavi), ಶಿರಸಿ(Sirsi), ಬಾಗಲಕೋಟೆ((bagalakote), ಚಿಕ್ಕೋಡಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ(Hubballi-Dharwad city) ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮವಿದು. ಬರೋಬ್ಬರಿ 22500ಕ್ಕೂ ಅಧಿಕ ನೌಕರರು ಇಲ್ಲಿ ಕೆಲಸ ಮಾಡುತ್ತಾರೆ. ಆದರೆ ನಿಗಮ ಮಾತ್ರ ಲಾಭದತ್ತ ಬರುತ್ತಲೇ ಇಲ್ಲ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ವಿಶೇಷ ಅನುದಾನವಾಗಿ . 1100 ಕೋಟಿಯನ್ನೂ ಸಂಸ್ಥೆ ಕೇಳಿತ್ತು. ಆದರೆ ಸರ್ಕಾರ ಇದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಕೆಲವೊಂದಿಷ್ಟುಜಾಗೆ, ಕಟ್ಟಡಗಳನ್ನು ಲೀಸ್ ಮೇಲೆ ನೀಡಲು ನಿರ್ಧರಿಸಿತ್ತು. ಅದಾದ ಬಳಿಕ ಇದೀಗ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ಅದೇ ಪಿಯುಸಿ ಟೆಸ್ಟಿಂಗ್.
Bagalkote: ಬಸ್ ಇಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳು
ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ. ಇದರಿಂದ ತನ್ನ ಸಂಸ್ಥೆಗಳ ಬಸ್ ಸೇರಿದಂತೆ ಎಲ್ಲ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ. ಇದರೊಂದಿಗೆ ಖಾಸಗಿ ವಾಹನಗಳನ್ನು ಇಲ್ಲಿ ತಪಾಸಣೆ ಮಾಡಲಿದೆ. ಪ್ರತಿ ಖಾಸಗಿ ವಾಹನಕ್ಕೆ . 150 ದರ ನಿಗದಿಪಡಿಸಿದೆ. ಪ್ರತಿದಿನ ಕನಿಷ್ಠವೆಂದರೂ 100 ಖಾಸಗಿ ವಾಹನಗಳಾದರೂ ಪಿಯುಸಿ ಟೆಸ್ಟಿಂಗ್ ಮಾಡಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರ ಸಂಖ್ಯೆ ಇನ್ನಷ್ಟುಜಾಸ್ತಿಯಾಗಬಹುದು. ಇದರಿಂದ ಸಂಸ್ಥೆಯ ಆದಾಯವೂ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಸಂಸ್ಥೆಯದ್ದು.
ರಾಜ್ಯದಲ್ಲೇ ಮೊದಲು:
ಸಾರಿಗೆ ಸಂಸ್ಥೆಯ ಬಸ್‌ಗಳ ಪಿಯುಸಿ ಟೆಸ್ಟಿಂಗ್ ಮಾತ್ರ ಸೀಮಿತವಿತ್ತು. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಆದರೆ ಎಲ್ಲಡೆ ಬರೀ ತಮ್ಮ ಬಸ್ ಹಾಗೂ ವಾಹನಗಳ ತಪಾಸಣೆಗೆ ಮಾತ್ರ ಈ ಕೇಂದ್ರಗಳನ್ನು ಬಳಸಿಕೊಳ್ಳುತ್ತಿತ್ತು. ಇದೀಗ ಖಾಸಗಿ ವಾಹನಗಳ ಪಿಯುಸಿ ಟೆಸ್ಟಿಂಗ್‌ಗೆ ಮುಂದಾಗಿರುವುದು ಇದೇ ಮೊದಲು. ರಾಜ್ಯದಲ್ಲೇ ಮೊದಲ ಖಾಸಗಿ ವಾಹನಗಳ ಪಿಯುಸಿ ಟೆಸ್ಟಿಂಗ್‌ನ್ನು ಹುಬ್ಬಳ್ಳಿಯಲ್ಲಿ ತೆರೆದಿದೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಸಾರಿಗೆ ಸಂಸ್ಥೆ ಆದಾಯ ಹೆಚ್ಚಿಸಿಕೊಳ್ಳಲು ಮುಂದಡಿ ಇಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ಆದಾಯ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಖಾಸಗಿಗೆ ಪೈಪೋಟಿ ನೀಡುವಷ್ಟು ಸಾರಿಗೆ ಸುಧಾರಣೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿಯ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲೇ ಖಾಸಗಿ ವಾಹನಗಳ ವಾಯುಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ. ಖಾಸಗಿ ವಾಹನಗಳ ಪಿಯುಸಿ ತಪಾಸಣೆ ನಡೆಸಲು ಕೇಂದ್ರ ತೆರೆದಿರುವುದು ರಾಜ್ಯದಲ್ಲೇ ಇದೇ ಮೊದಲು.
ಬಿ. ಬೋರಯ್ಯ, ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ