* ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕರ್ತಿಹಾಳ ಗ್ರಾಮದ ಬಳಿ ನಡೆದ ಘಟನೆ
* ಪಲ್ಟಿಯಾದ ಕಾರ್ ಬಿಟ್ಟು ಪರಾರಿಯಾದ ಕಳ್ಳರು
* ಖದೀಮರ ಬಂಧನಕ್ಕೆ ಜಾಲ ಬೀಸಿದ ಪೊಲೀಸರು
ವಿಜಯಪುರ(ಸೆ.11): ಕುರಿಗಳನ್ನು ಕದಿಯಲು ಬಂದಿದ್ದ ಕಳ್ಳರ ಕಾರು ಪಲ್ಟಿಯಾದ ಪರಿಣಾಮ ಪಲ್ಟಿಯಾದ ಕಾರನ್ನು ಬಿಟ್ಟು ಖದೀಮರು ಪರಾರಿಯಾದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕರ್ತಿಹಾಳ ಗ್ರಾಮದ ಬಳಿ ಇಂದು(ಶನಿವಾರ) ನಡೆದಿದೆ.
ಮೂಕರ್ತಿಹಾಳ ಗ್ರಾಮದಲ್ಲಿ ಕುರಿಗಳನ್ನು ಕದಿಯಲು ಕಳ್ಳರು ಕಾರು ಸಮೇತ ಆಗಮಿಸಿದ್ದರು. ಕುರಿಗಳನ್ನು ಕದಿಯಲು ಮುಂದಾದಾಗ ಕಳ್ಳರನ್ನ ನೋಡಿದ ಕುರಿಗಾಹಿ ಚೀರಾಡಿದ್ದಾನೆ. ಹೀಗಾಗಿ ತಕ್ಷಣ ಕುರಿಗಳ್ಳರು ಕಾರಿನಲ್ಲಿ ಅಲ್ಲಿಂದ ಎಸ್ಕೇಪ್ ಆಗಿ ತಾಳಿಕೋಟೆಯತ್ತ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಡೋಣಿ ನದಿ ಸೇತುವೆ ಜಲಾವೃತವಾದ ಕಾರಣ ವಾಪಸ್ ಮೂಕರ್ತಿಹಾಳ ಗ್ರಾಮದತ್ತ ಕಳ್ಳರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಕಳ್ಳರು ಬಂದಿದ್ದ ಸುದ್ದಿಯಿಂದ ಬಡಿಗೆ ಹಿಡಿದು ಗ್ರಾಮಸ್ಥರು ಜಮಾಯಿಸಿದ್ದರು. ಇದರಿಂದ ಭಯಗೊಂಡು ಅಲ್ಲಿಂದ ಪರಾರಿಯಾಗುವ ವೇಳೆ ಕಳ್ಳರ ಕಾರ್ ಪಲ್ಟಿಯಾಗಿದೆ.
ವಿಜಯಪುರ: ಅಂತಾರಾಜ್ಯ ಏಳು ಮನೆಗಳ್ಳರ ಬಂಧನ
ಕಾರ್ ಪಲ್ಟಿಯಾದ ಕೂಡಲೇ ಕಾರ್ ಬಿಟ್ಟು ಅಲ್ಲಿಂದ ಕಳ್ಳರು ಓಡಿ ಹೋಗಿದ್ದಾರೆ. ಕದ್ದಿದ್ದ ಕುರಿಗಳನ್ನು ಕಾರಿಲ್ಲಿಯೇ ಬಿಟ್ಟು ಕಿರಾತಕರು ಪರಾರಿಯಾಗಿದ್ದಾರೆ. KA-03-AE-2627 ನಂಬರಿನ ಕಾರನ್ನೂ ಸಹ ಕಳ್ಳತನ ಮಾಡಿಕೊಂಡು ಬಂದಿರೋ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಬಳಿ ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದು ಖದೀಮರ ಬಂಧನಕ್ಕೆ ಜಾಲ ಬೀಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.