ಬೆಂಗಳೂರಿನಲ್ಲಿ 131 ವಾರಗಳಿಂದ ಸ್ವಯಂಸೇವಕರ ತಂಡವೊಂದು ರಸ್ತೆ ಗುಂಡಿ ಮುಚ್ಚುವುದು, ಸ್ವಚ್ಛತೆ ಕಾಪಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಿದೆ. ತಲಘಟ್ಟಪುರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರೇ ಅಲ್ವಾ ಬೆಂಗಳೂರು ಹೀರೋಗಳು.
ಬೆಂಗಳೂರು (ನ.23): ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಕಳೆದ 131 ವಾರಗಳಿಂದ ಭಾಗಹಿಸುತ್ತಾ ರಸ್ತೆ ಗುಂಡಿ ಮುಚ್ಚುವುದು, ತಮ್ಮ ನಿವಾಸದ ಸ್ಥಳದ ಸುತ್ತಲೂ ಇರುವ ಪ್ರದೇಶಗಳ ಸ್ವಚ್ಛತೆ, ಬಸ್ ತಂಗುದಾಣಗಳ ಸ್ವಚ್ಛತೆ, ಬೀದಿ ದೀಪ ಅಳವಡಿಕೆಗೆ ಸಹಾಯ, ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಇಲ್ಲೊಂದು ಸ್ವಯಂ ಸೇವಕರ ತಂಡದ ಸದಸ್ಯರು ನಮ್ಮ ಬೆಂಗಳೂರಿನ ರಿಯಲ್ ಹೀರೋಗಳಾಗಿದ್ದಾರೆ.
ಬೆಂಗಳೂರು ನಗರದ ಬಗ್ಗೆ ಎಲ್ಲರೂ ತೆಗಳುವುದನ್ನೇ ಮಾಡಿದರೆ, ಇದು ನಮ್ಮ ಬೆಂಗಳೂರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕೆಲವೊಂದು ವರ್ಗಗಳಿವೆ. ಅವರೇ ನಮ್ಮ ಬೆಂಗಳೂರು ನಮ್ಮ ಆಸ್ತಿ ಎಂದು ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿಯೊಂದಿಗೆ ಸೇರಿಕೊಂಡು ಕೆಲವು ಸಮಾಜ ಸೇವಾ ಕಾರ್ಯಕ್ರಮಗಳನ್ನು ತೊಡಗಿಸಿಕೊಳ್ಳುವ ಸ್ವಯಂ ಸೇವಕರು. ಇವರೇನು ಕೆಲಸ, ಕಾರ್ಯ ಇಲ್ಲದವರಲ್ಲ. ಮಾಡಲು ಮೈತುಂಬಾ ಕೆಲಸಗಳು, ಜವಾಬ್ದಾರಿಗಳು ಇದ್ದರೂ ಕೂಡ ಪ್ರತಿ ಶನಿವಾರ ಅರ್ಧ ದಿನವನ್ನು ನಗರದ ಉತ್ತಮ ಬದಲಾವಣೆಗಳಿಗೆ ತೊಡಗಿಸಿಕೊಳ್ಳುವ ಈ ಸ್ವಯಂ ಸೇವಕರ ತಂಡಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲಿ ಹಲವು ಸ್ವಯಂ ಸೇವಕ ತಂಡಗಳು ಕೆಲಸ ಮಾಡುತ್ತಿದ್ದು, ಅವರನ್ನು ಅನುಸರಿಸಿ ತಾವೂ ಸಮಾಜ ಸೇವಾ ಕಾರ್ಯಗಳನ್ನು ತೊಡಗಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕೈಲಾಗದಿದ್ದರೆ, ಇಂಥಹ ಸ್ವಯಂ ಸೇವಕ ತಂಡಗಳನ್ನು ಪ್ರೋತ್ಸಾಹಿಸಿ.
ತಲಘಟ್ಟಪುರ ಪೊಲೀಸ್ ಠಾಣಾ ಸಮೀಪ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ಸ್ಟೇಷನ್ ಬಳಿ ಕನಕಪುರ ಮುಖ್ಯ ರಸ್ತೆಯಿಂದ ಹಲವರು ಅಪಾರ್ಟ್‌ಮೆಂಟ್‌ಗಳಿಗೆ ಇರೋ ದಾರಿ ಪೂರ್ತಿ ಹೊಂಡಗಳಿಂದಲೇ ತುಂಬಿತ್ತು. ಬಿಬಿಎಂಪಿ ಆಗಲಿ, ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಆಗಲಿ ಎಷ್ಟೇ ಮನವಿ ಮಾಡಿಕೊಂಡರೂ ಸ್ಪಂದಿಸಿರಲಿಲ್ಲ. ಇದೀಗ ಕೆಲವು ಕ್ಷೇಮಾಭಿವೃದ್ಧಿ ಸದಸ್ಯರೇ ಸೇರಿಕೊಂಡು ಈ ಎಲ್ಲಾ ಹೊಂಡಗಳನ್ನೂ ಮುಚ್ಚಿದ್ದು, ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದರಿಂದ ಶಾಲೆಗೆ ಹೋಗುವ ಮಕ್ಕಳು ಹಾಗೂ ದಿನನಿತ್ಯ ಆಫೀಸಿಗೆ ತೆರಳುವವರಿಗೆ ಅನುಕೂಲ ಮಾಡಿ ಕೊಟ್ಟಿದ್ದು, ಈ ಸ್ವಯಂ ಸೇವಕರ ಕಾರ್ಯ ಎಲ್ಲರ ಶ್ಲಾಘನೆಗೂ ಪಾತ್ರವಾಗಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು: ಹಸಿರೇ ತುಂಬಿರುವ ಭಾರತದ 7 ನಗರಗಳು!
ಈ ರಸ್ತೆಯು ಶೋಭಾ ಹಿಲ್ ವ್ಯೂ, ಶೋಭಾ ಸನ್ ಕ್ರೆಸ್ಟ್, ಪ್ರೆಸ್ಟೀಜ್, ಮಂತ್ರಿ ಸೇರಿ ಹಲವು ಅಪಾರ್ಟ್‌ಮಮೆಂಟ್ ಅಲ್ಲದೇ, ನಾಗೇಗೌಡನ ಪಾಳ್ಯದೊಂದಿಗೂ ಸಂಪರ್ಕ ಸಾಧಿಸುತ್ತದೆ. ರಸ್ತೆಯಲ್ಲಿ ಬಿದ್ದ ಗುಂಡಿಗಳು ಬಿದ್ದಿರುವುದನ್ನು ತಮ್ಮ ಆದಾಯಕ್ಕೆ ಬಳಸಿಕೊಳ್ಳುವ ಕೆಲವು ನರಿ ಬುದ್ಧಿಯುಳ್ಳ ಕಿಡಿಗೇಡಿಗಳು ರಸ್ತೆಯ ಗುಂಡಿಗಳಿಗೆ ಮೊಳೆಗಳನ್ನು ಹಾಕಿ ವಾಹನಗಳು ಪಂಚರ್ ಆಗುವಂತೆ ಮಾಡುತ್ತಿದ್ದರು. ಇದರಿಂದ ಅವರಿಗೇನು ಲಾಭವೆಂದು ಕೇಳಿದರೆ, ವಾಹನಗಳು ಪಂಚರ್ ಆದಲ್ಲಿ ಅದನ್ನು ಹಾಕಿಸಿಕೊಳ್ಳಲು ತಮ್ಮ ಪಂಚರ್ ಶಾಪ್‌ಗೆ ಬರುತ್ತಾರೆ ಎಂಬುದು. ಹೀಗಾಗಿ, ಕೆಲವು ವಾಹನಗಳು ರಸ್ತೆ ಗುಂಡಿಯಲ್ಲಿದ್ದ ಕಬ್ಬಿಣದ ಮೊಳೆಗಳ ಮೇಲೆ ಹರಿದು ಪಂಕ್ಟರ್ ಆಗೋದು ದಿನನಿತ್ಯವೂ ಸಂಭವಿಸುತ್ತಿತ್ತು. ಇದೀಗ ಸ್ವಯಂ ಸೇವಕರ ಕಾರ್ಯದಿಂದ ರಸ್ತೆ ಗುಂಡಿಗೆ ಹಾಗೂ ವಾಹನ ಪಂಕ್ಚರ್ ಆಗುವುದಕ್ಕೆ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ. ಇನ್ನು ಮೇಲಾದರೂ ಜನಪ್ರತಿನಿಧಿಗಳು, ಸ್ವಯಂ ಸೇವಕರ ಕಾರ್ಯವನ್ನು ನೋಡಿ ಇಲ್ಲಿನ ರಸ್ತೆಗೆ ಕಾಯಕಲ್ಪ ಕಲ್ಪಿಸುತ್ತಾರಾ ಕಾದು ನೋಡಬೇಕಿದೆ.
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ತಂಡದೊಂದಿಗೆ ಮಾತನಾಡಿದ ಸ್ವಯಂ ಸೇವಕಿ ಚೈತನ್ಯಾ ಸುಬ್ರಮಣ್ಯ ಅವರು, ನಾವು ಕಳೆದ 131ನೇ ವಾರದಿಂದ ಬಿಬಿಎಂಪಿಯ ಸಿಟಿಜನ್ ಪಾರ್ಟನರ್‌ಶಿಪ್ ಪ್ರೋಗ್ರಾಂ ಅಡಿಯಲ್ಲಿ ಕೆಲವು ಸಮಾಜ ಉಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಸುತ್ತಲಿನ ಪ್ರದೇಶದ ಕಸ ಸ್ವಚ್ಛತೆ, ರಸ್ತೆಯಲ್ಲಿ ಹೊಂಡ ಮುಚ್ಚುವುದು, ಬಸ್ ತಂಗುದಾಣ ಸ್ವಚ್ಛತೆ, ಶಾಲೆಗೆ ಹೋಗಿ ಜಾಗೃತಿ ಇತ್ಯಾದಿ ಕಾರ್ಯಗಳನ್ನು ಮಾಡುತ್ತೇವೆ. ಇದೀಗ ತಲಘಟ್ಟಪುರದ ರಸ್ತೆಯಲ್ಲಿ ಬಿದ್ದ ಗುಂಡಿಯನ್ನು ಮುಚ್ಚಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!
ತಲಘಟ್ಟಪುರದ ರಸ್ತೆಯಲ್ಲಿ ಬಿದ್ದ ಗುಂಡಿಯಿಂದ ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿ ಹಲವು ವಾಹನಗಳು ಪಂಚರ್ ಆಗಿವೆ. ಹೀಗಾಗಿ, ನಮ್ಮ ಸ್ವಯಂ ಸೇವಕರ ತಂಡದಲ್ಲಿ ಸುರೇಶ್ ಭಟ್, ಸುಬ್ರಮಣ್ಯ ಕೊಡಿಪಾಡಿ, ರಾಘವೇಂದ್ರ, ಬೃಂದಾ, ಚೇತನ್ ಗಾಣಿಗೇರ, ಅನಿಲ್ ಸೇರಿ ಹಲವರು ರಸ್ತೆಗುಂಡಿ ಮುಚ್ಚುವುದಕ್ಕೆ ನಿರ್ಧರಿಸಿದೆವು. ಇದಕ್ಕೆ ಕೆಲವರು ತಮ್ಮ ಮನೆಯಲ್ಲಿದ್ದ ಕಬ್ಬಿಣದ ರಾಡ್‌ಗಳು, ಇನ್ನು ಕೆಲವರು ಸಿಮೆಂಟ್ ಮತ್ತು ಜಲ್ಲಿ ಕಲ್ಲುಗಳನ್ನು ತಂದು ಅದನ್ನು ಮಿಶ್ರಣ ಮಾಡಿ ರಸ್ತೆ ಗುಂಡಿ ಮುಚ್ಚಿದ್ದೇವೆ. ಇನ್ನು ಕೆಲವೊಂದು ದೊಡ್ಡ ರಸ್ತೆಗುಂಡಿಗಳಿಗೆ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಹೋಗುವಾಗ ಅದರಲ್ಲಿ ಅಳಿದುಳಿದ ಸಿಮೆಂಟ್ ಮಿಶ್ರಣ ಇದ್ದರೆ ಈ ಗುಂಡಿಗಳಿಗೆ ಸುರಿಯುವಂತೆ ಮನವಿ ಮಾಡಿ ಸುಮಾರು 10ಕ್ಕೂ ಹೆಚ್ಚು ಗುಂಡಿಗಳಿಗೆ ಮುಕ್ತಿ ನೀಡಿದ್ದೇವೆ. ಈ ಮೂಲಕ ವಾಹನ ಸವಾರರಿಗೆ ಉಂಟಾಗುತ್ತಿದ್ದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೇವೆ ಎಂದು ಚೈತನ್ಯಾ ಅವರು ತಿಳಿಸಿದರು.
ಜೊತೆಗೆ ಈ ಭಾಗದ ನಿವಾಸಿ ಶ್ರೀಮತಿ ವಾಣಿಯವರು ಕೆಲ ಕಟ್ಟಡ ಕಟ್ಟುತ್ತಿರುವ ಗುತ್ತಿಗೆದಾರರನ್ನು ಮಾತನಾಡಿಸಿ, ಅವರ ಮುಖಾಂತರ ಬಹಳಷ್ಟು ಗುಂಡಿಗಳನ್ನು ಮುಚ್ಚಿಸಿರುವುದು ಕೂಡಾ ಶ್ಲಾಘನೀಯವಾಗಿದೆ.