ಕೊಡಗು ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಂದಾಯ ಸಂಗ್ರಹಕ್ಕೂ ಸಿಬ್ಬಂದಿ ಇಲ್ಲ. ಸ್ವಚ್ಛತೆ, ನೀರುಘಂಟಿ, ಅಷ್ಟೇ ಅಲ್ಲ, ಅಟೆಂಡರ್ ಕೂಡ ಇಲ್ಲ. ಹೀಗಾಗಿ ಕೊಡಗು ಜಿಲ್ಲೆಯ ಹಳ್ಳಿಗಳು ಯಾವುದೇ ಅಭಿವೃದ್ಧಿ ಕಾಣದೆ ಸಮಸ್ಯೆಯಲ್ಲಿ ಬಳಲುವಂತೆ ಆಗಿದೆ.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.23): ಹಳ್ಳಿಗಳ ಅಭಿವೃದ್ಧಿ ಆಗಬೇಕೆಂದರೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ, ಆದಾಯ ಇರಬೇಕು ಅಲ್ವಾ. ಆದರೆ ಕೊಡಗು ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಂದಾಯ ಸಂಗ್ರಹಕ್ಕೂ ಸಿಬ್ಬಂದಿ ಇಲ್ಲ. ಸ್ವಚ್ಛತೆ, ನೀರುಘಂಟಿ, ಅಷ್ಟೇ ಅಲ್ಲ, ಅಟೆಂಡರ್ ಕೂಡ ಇಲ್ಲ. ಹೀಗಾಗಿ ಕೊಡಗು ಜಿಲ್ಲೆಯ ಹಳ್ಳಿಗಳು ಯಾವುದೇ ಅಭಿವೃದ್ಧಿ ಕಾಣದೆ ಸಮಸ್ಯೆಯಲ್ಲಿ ಬಳಲುವಂತೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಿದ್ದು ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳಿಲ್ಲ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 5 ವರ್ಷಗಳಿಂದ 185 ಸಿಬ್ಬಂದಿಗಳಿಲ್ಲ. ಅದರಲ್ಲೂ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ, ಅಮ್ಮತ್ತಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓ ಬಿಟ್ಟರೆ ಉಳಿದ ಒಬ್ಬ ಸಿಬ್ಬಂದಿಯೂ ಇಲ್ಲ. ಈ ಪಂಚಾಯಿತಿಗಳಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದರೆ, ಸಭೆಗೆ ಬೇಕಾಗಿರುವ ಟೀ, ಕಾಫಿ ತರುವುದಕ್ಕೂ ಸಭೆಯ ಮಧ್ಯೆಯಿಂದ ಎದ್ದು ಪಿಡಿಓ ಹೋಗಿ ಬರಬೇಕಾದ ಸ್ಥಿತಿ ಇದೆ. ಇನ್ನು ಪಂಚಾಯಿತಿ ವ್ಯಾಪ್ತಿ ಗ್ರಾಮೀಣ ಪ್ರದೇಶಗಳಿಗೆ ನೀರು ಒದಗಿಸಲು ಸಿಬ್ಬಂದಿಯೇ ಇಲ್ಲದೆ ಊರಿನ ಯಾರು ಯಾರಿಗೋ ಮನವಿ ಮಾಡಿ ಒಂದು ದಿನ ಒಬ್ಬೊಬ್ಬರು ನೀರು ಸರಬರಾಜು ಮಾಡುವ ದುಃಸ್ಥಿತಿ ಇದೆ.
undefined
ಇನ್ನು ಮನೆ, ನೀರು ತೆರಿಗೆ ಸಂಗ್ರಹಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಹೋಗಬೇಕಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಗಳಿಗೆ ಹೋದರೆ ಎಂದರೆ ಇತ್ತ ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ದಾಖಲೆ ಪತ್ರಗಳನ್ನು ಮಾಡಿಸಿಕೊಳ್ಳಲು ಜನರು ಬಂದರೆ ಪಂಚಾಯಿತಿಯಲ್ಲಿ ಯಾರೂ ಸಿಗುವುದಿಲ್ಲ. ಇಂತಹ ದುಃಸ್ಥಿತಿ ಕೊಡಗಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಇದೆ. ಹಾಗೆಯೇ ಅಮ್ಮತ್ತಿ ಮತ್ತು ಪುಲಿಗೇರಿ ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಒಬ್ಬರೇ ಒಬ್ಬರು ಸಿಬ್ಬಂದಿ ಇದ್ದಾರೆ.
ಕುಶಾಲನಗರ ತಾಲ್ಲೂಕಿನ ನಾಕೂರು ಶಿರಂಗಾಲ ಪಂಚಾಯಿತಿಯಲ್ಲೂ ಇದೇ ಸ್ಥಿತಿ ಇದೆ. ಗ್ರಾಮ ಪಂಚಾಯಿತಿಗಳಿಗೆ ಮುಖ್ಯವಾಗಿ ತೆರಿಗೆ ಸಂಗ್ರಹದಿಂದಲೇ ಆದಾಯ ಬರಬೇಕಾಗಿದ್ದು, ಅದನ್ನು ಸಂಗ್ರಹಿಸಲು ಬಿಲ್ಲು ಕಲೆಕ್ಟರ್ ಕೂಡ ಇಲ್ಲದೆ ಆದಾಯ ಇಲ್ಲದಂತಾಗಿ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಪಂಚಾಯಿತಿಗಳಿಗೆ ಬೇಕಾಗಿರುವ ಸಿಬ್ಬಂದಿ ನೇಮಕಾತಿ ಅಧಿಕಾರವನ್ನು ಜಿಲ್ಲಾ ಪಂಚಾಯಿತಿಗೆ ನೀಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಸರ್ಕಾರ ಅಧಿಕಾರವನ್ನು ಮೊಟಕುಗೊಳಿಸಿರುವುದರಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ.
ಅಬ್ಬಿಫಾಲ್ಸ್ ಪ್ರವಾಸಿಗರ ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ದೂರು ದಾಖಲು
ಇದರ ವಿರುದ್ಧ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಪಂಚಾಯಿತಿ ನೌಕರರ ಸಂಘಟನೆ ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿ ಸಿಬ್ಬಂದಿ ಇಲ್ಲದೆ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಇನಂಡ ಪ್ರತಾಪ್ ಅವರು ನಮ್ಮ ಪಂಚಾಯಿತಿಯಲ್ಲಿ ಪಿಡಿಓ ಮತ್ತು ಕಾರ್ಯದರ್ಶಿ ಬಿಟ್ಟರೆ ಒಬ್ಬೇಒಬ್ಬ ಸಿಬ್ಬಂದಿ ಇಲ್ಲ. ಇದರಿಂದಾಗಿ ಯಾವ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಭೆಗಳಿದ್ದಾಗ ಪಿಡಿಓ, ಕಾರ್ಯದರ್ಶಿಗಳು ಹೋದರೆಂದರೆ ಪಂಚಾಯಿತಿಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಪಂಚಾಯಿತಿಯ ಬಾಗಿಲನ್ನು ನಾವೇ ತೆರೆಯಬೇಕಾದ ದುಃಸ್ಥಿತಿ ಇದೆ ಎನ್ನುತ್ತಾರೆ.
ಕೊಡಗು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಊರುಡುವೆ ಪೈಸಾರಿಯಲ್ಲಿರುವವರಿಗೆ ಹಕ್ಕುಪತ್ರ ನೀಡಲು ಒತ್ತಾಯ
ಈ ಕುರಿತು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅವರನ್ನು ಕೇಳಿದರೆ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಈ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಬಹುತೇಕ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕೆಲಸಗಳನ್ನು ಕಾಣದೆ ಹಿಂದುಳಿಯುವಂತೆ ಆಗಿವೆ. ಈ ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಸಮಸ್ಯೆ ಇರುವುದು ಗೊತ್ತಾಗಿದೆ. ಸರ್ಕಾರದ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚೇತನ್ ರಾಜ್ ಹೇಳಿದ್ದಾರೆ. ಇನ್ನಾದರೂ ಸರ್ಕಾರ ಪಂಚಾಯಿತಿಗಳಿಗೆ ಸಿಬ್ಬಂದಿ ನೇಮಕ ಮಾಡುವುದಕ್ಕೆ ಅನುವು ಮಾಡಿದರೆ ಒಳ್ಳೆಯದು ಎನ್ನುವುದು ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿ, ಸಾರ್ವಜನಿಕರ ಆಗ್ರಹ.